2 ಕೋಟಿ ಉದ್ಯೋಗದ ಭರವಸೆ ಈಡೇರಿಲ್ಲ: ನ್ಯಾ.ಸಂತೋಷ್ ಹೆಗ್ಡೆ
ಬೃಹತ್ ಉದ್ಯೋಗ ಮೇಳ ಉದ್ಘಾಟನೆ

ಬೆಂಗಳೂರು, ಫೆ. 25: ಯುವ ಸಬಲೀಕರಣ ಮತ್ತು ಮಹಿಳಾ ಸಬಲೀಕರಣ, ಆರ್‍ವಿಡಿ ಟ್ರಸ್ಟ್‍ನಿಂದ ಬೆಂಗಳೂರಿನ ವಿವಿ ಪುರಂನ ಬಿಐಟಿ ಕಾಲೇಜಿನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ಪತ್ರವನ್ನು ಶನಿವಾರ ನೀಡಲಾಯಿತು.
ಮೇಳವನ್ನು ಉದ್ಘಾಟಿಸಿ ಮಾತನಾಡಿದ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ‘ಯಾರೋ ಮಹಾನುಭಾವ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಆದರೆ ಯಾವುದೇ ಭರವಸೆಯನ್ನು ಈಡೇರಿಸಿಲ್ಲ’ ಎಂದು ದೂರಿದರು.
‘ಕೋಟ್ಯಂತರ ಜನ ನಿರುದ್ಯೋಗದಿಂದ ತೊಂದರೆ ಎದುರಿಸುತ್ತಿದ್ದಾರೆ. ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದವರಿಗಿಂತ ಎರಡು ಸಾವಿರ ಉದ್ಯೋಗ ದೊರಕಿಸಿಕೊಡುವುದು ಮೇಲು. ಇಂತಹ ಉದ್ಯೋಗ ಮೇಳಗಳಿಂದ ಜನರ ಸಂಕಷ್ಟ ಕಡಿಮೆಯಾಗುತ್ತದೆ ಎಂದು ಸಂತೋಷ್ ಹೆಗಡೆ ಇದೇ ವೇಳೆ ತಿಳಿಸಿದರು.
‘ಉದ್ಯೋಗ ಮೇಳದಲ್ಲಿ ಹೋಂಡಾ, ಬಿಗ್ ಬಾಸ್ಕೆಟ್, ಅಮೆಜಾನ್, ಟೆಕ್ ರೈಟ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನೇತರ ವಲಯದ 125ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸಿದ್ದವು. ಜೊತೆಗೆ ಸಾಲ ಸೌಲಭ್ಯಗಳೊಂದಿಗೆ ಸ್ವಯಂ ಉದ್ಯೋಗ ಅವಕಾಶಗಳಿಗೂ ಆದ್ಯತೆ ನೀಡಲಾಗುತ್ತಿತ್ತು’ ಎಂದು ತಿಳಿಸಲಾಗಿದೆ.
ಕಾರ್ಯಕ್ರಮದಲ್ಲಿ ಕಾಂತರ ಚಿತ್ರದ ನಾಯಕಿ ಸಪ್ತಮಿ ಗೌಡ, ಮಾಜಿ ಶಾಸಕ ಆರ್.ವಿ.ದೇವರಾಜ್, ಪತ್ರಕರ್ತ ಗಂಡಸಿ ಸದಾನಂದ ಸ್ವಾಮಿ, ಮುಖಂಡರಾದ ಯುವರಾಜ್, ಕೆ.ಎಂ.ನಾಗರಾಜ್, ಪುಟ್ಟಸ್ವಾಮಿ, ಚಿತ್ರನಟಿ ಭವ್ಯ, ಕೊನಪ್ಪ ರೆಡ್ಡಿ, ಅಶ್ವಥ್ ನಾರಾಯಣ್ ಭಾಗವಹಿಸಲಿದ್ದರು.