ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರುತ್ತೇನೆಂಬ ಹೇಳಿಕೆಗೆ ಬದ್ಧ: ಕುಮಾರಸ್ವಾಮಿ

ಶೃಂಗೇರಿ: 'ಹಾಸನ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಏನೇ ಹೇಳಲಿ. ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಬಿಜೆಪಿ ಅಭ್ಯರ್ಥಿ ವಿರುದ್ಧ ನಮ್ಮ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರುತ್ತೇನೆಂದು ಎರಡು ವರ್ಷಗಳ ಹಿಂದೆಯೇ ಹೇಳಿದ್ದೇನೆ. ನಾನು ಇಂದಿಗೂ ಆ ಮಾತಿಗೆ ಬದ್ಧವಾಗಿದ್ದೇನೆ' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ಪಂಚರತ್ನ ರಥಯಾತ್ರೆ ಅಂಗವಾಗಿ ಶನಿವಾರ ಶೃಂಗೇರಿ ಪಟ್ಟಣಕ್ಕೆ ಆಗಮಿಸಿದ್ದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನೂರು ಸುಳ್ಳು ಹೇಳಿ ಮೂರು ಕೆಲಸ ಮಾಡ್ತಾರೆ. ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡುತ್ತೇವೆ ಎಂದ ಮೇಲೆ 'ಜನಾರ್ಧನ ರೆಡ್ಡಿಯನ್ನ ನಾನು ನೋಡಿಕೊಳ್ಳುತ್ತೇನೆ' ಎಂದು ಅಮಿತ್ ಷಾ ಏಕೆ ಹೇಳಿದರು?, ಯಾವ ರೀತಿ ನೋಡಿಕೊಳ್ಳುತ್ತಾರೆ, ಇಡಿ, ಸಿಬಿಐ ಬಿಟ್ಟು ನೋಡಿಕೊಳ್ಳುತ್ತಾರೆಯೇ? ಎಂದು ಪ್ರಶ್ನಿಸಿದರು.
'ಹಾಸನ ಕ್ಷೇತ್ರದ ಬಗ್ಗೆ ರಾಜ್ಯದಲ್ಲಿ ಭಾರೀ ಕುತೂಹಲ ಮೂಡಿದೆ. ಇದನ್ನು ಹೈವೋಲ್ಟೇಜ್ ಕ್ಷೇತ್ರ ಮಾಡಿದವರು ಮಾಧ್ಯಮದವರು. ಆದರೆ ಹಾಸನ ಜಿಲ್ಲೆಯಲ್ಲಿ ಮತ ಹಾಕುವವರು ಬೇರೆ ಯೋಚನೆ ಮಾಡ್ತಿದ್ದಾರೆ. ಟಿಕೆಟ್ ಗೊಂದಲದ ವಿಚಾರವಾಗಿ ಫೆ.26ರಂದು ಪಕ್ಷದ ಕಚೇರಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಕರೆದಿದ್ದೇನೆ. ಪಕ್ಷದ 300 ಮುಖಂಡರು, ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಹಾಸನ ಕ್ಷೇತ್ರದ ಟಿಕೆಟ್ ವಿಚಾರವಾಗಿ ಕಾರ್ಯಕರ್ತರೊಂದಿ ಮುಕ್ತವಾಗಿ ಚರ್ಚೆ ನಡೆಸುತ್ತೇನೆ' ಎಂದರು.
ಕಾರ್ಯಕರ್ತರು ಮುಕ್ತವಾಗಿ ಮಾತಾಡುವುದಕ್ಕೆ ಹೆದರುತ್ತಾರೆ. ಅದಕ್ಕಾಗಿ ಹಾಸನ ಜಿಲ್ಲೆಯ ಪ್ರಮುಖ ನಾಯಕರೊಂದಿಗೆ ಸಭೆಯಲ್ಲಿ ಮುಕ್ತವಾಗಿ ಚರ್ಚೆ ನಡೆಸಿ ಗೊಂದಲಗಳನ್ನು ಬಗೆಹರಿಸಿಕೊಳ್ಳುತ್ತೇವೆ. ನಾಳೆ ನಡೆಯುವ ಸಭೆಯಲ್ಲಿ ನಮ್ಮ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡುತ್ತೇನೆ. ಯಾರಿಗೆ ಟಿಕೆಟ್ ಸಿಕ್ಕರೂ ಅವರ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸುತ್ತೇವೆ. ಯಾವುದೇ ಕಾರಣಕ್ಕೂ ಹಾಸನದಲ್ಲಿ ಈ ಗೊಂದಲದಿಂದ ಜೆಡಿಎಸ್ ಸಂಘಟನೆಯ ಮೇಲೆ ಪರಿಣಾಮ ಆಗಬಾರದು ಎಂದು ಸಲಹೆ ನೀಡಿದ್ದೇನೆ ಎಂದ ಅವರು, ಸಭೆಗೆ ರೇವಣ್ಣ, ಪ್ರಜ್ವಲ್ ಅವರನ್ನು ಕರೆದಿಲ್ಲ ಎಂದರು.







