ಮಿಂಚಿದ ಜೋ ರೂಟ್, ಕುಸಿತ ಕಂಡ ನ್ಯೂಝಿಲ್ಯಾಂಡ್
ದ್ವಿತೀಯ ಟೆಸ್ಟ್

ವೆಲ್ಲಿಂಗ್ಟನ್, ಫೆ.25: ಮಳೆ ಬಾಧಿತ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟವಾದ ಶನಿವಾರ ಜೋ ರೂಟ್ ಅಜೇಯ ಶತಕ (153 ರನ್) ಹಾಗೂ ಸ್ಟಾರ್ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್(3-37) ಅಮೋಘ ಬೌಲಿಂಗ್ ನೆರವಿನಿಂದ ಇಂಗ್ಲೆಂಡ್ ಕ್ರಿಕೆಟ್ ತಂಡ ನ್ಯೂಝಿಲ್ಯಾಂಡ್ ವಿರುದ್ಧ ಸುಸ್ಥಿತಿಯಲ್ಲಿದೆ.
ಇಂಗ್ಲೆಂಡ್ ತಂಡ 8 ವಿಕೆಟ್‌ಗಳ ನಷ್ಟಕ್ಕೆ 435 ರನ್ ಗಳಿಸಿ ತನ್ನ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿತು. ಇದಕ್ಕುತ್ತರವಾಗಿ ನ್ಯೂಝಿಲ್ಯಾಂಡ್ ತನ್ನ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 138 ರನ್ ಗಳಿಸಿ ಕುಸಿತದ ಹಾದಿ ಹಿಡಿದಿದೆ. ಇಂಗ್ಲೆಂಡ್ ಇನಿಂಗ್ಸ್‌ಗಿಂತ ಇನ್ನೂ 297 ರನ್ ಹಿನ್ನಡೆಯಲ್ಲಿದೆ.
ಇಂಗ್ಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯವನ್ನು 267 ರನ್‌ನಿಂದ ಗೆದ್ದುಕೊಂಡಿದ್ದು, 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ರೂಟ್ ಜೊತೆಗೆ 302 ರನ್ ಜೊತೆಯಾಟ ನಡೆಸಿದ ಹ್ಯಾರಿ ಬ್ರೂಕ್‌ಗೆ(186 ರನ್)ನ್ಯೂಝಿಲ್ಯಾಂಡ್ ದ್ವಿಶತಕ ನಿರಾಕರಿಸಿತು. ಮಾಜಿ ನಾಯಕ ರೂಟ್ ಔಟಾಗದೆ 153 ರನ್(224 ಎಸೆತ, 10 ಬೌಂಡರಿ, 3 ಸಿಕ್ಸರ್) ಗಳಿಸಿ ಗಮನ ಸೆಳೆದರು.3 ವಿಕೆಟ್ ನಷ್ಟಕ್ಕೆ 315 ರನ್‌ನಿಂದ ಶನಿವಾರ ಬ್ಯಾಟಿಂಗ್ ಮುಂದುವರಿಸಿದ ಇಂಗ್ಲೆಂಡ್ ಪರ ರೂಟ್ ಹೊರತುಪಡಿಸಿ ಬೇರ್ಯಾವ ಆಟಗಾರ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಬ್ರೂಕ್ ನಿನ್ನೆಯ ಸ್ಕೋರ್‌ಗೆ 2 ರನ್ ಸೇರಿಸಿ ಮ್ಯಾಟ್ ಹೆನ್ರಿಗೆ ರಿಟರ್ನ್ ಕ್ಯಾಚ್ ನೀಡಿದರು. ನಾಯಕ ಬೆನ್ ಸ್ಟೋಕ್ಸ್ 27 ರನ್, ರಾಬಿನ್ಸನ್ 18 ರನ್ ಹಾಗೂ ಬ್ರಾಡ್ 14 ರನ್ ಗಳಿಸಲಷ್ಟೇ ಶಕ್ತರಾದರು. ನ್ಯೂಝಿಲ್ಯಾಂಡ್ ಬೌಲಿಂಗ್‌ನಲ್ಲಿ ಮ್ಯಾಟ್ ಹೆನ್ರಿ(4-100)ಯಶಸ್ವಿ ಬೌಲರ್ ಎನಿಸಿಕೊಂಡರು. ಬ್ರೆಸ್‌ವೆಲ್(2-54)ಎರಡು ವಿಕೆಟ್ ಪಡೆದರು.
ನಾಯಕ ಬೆನ್ ಸ್ಟೋಕ್ಸ್ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿ ತಕ್ಷಣವೇ ಅದಕ್ಕೆ ತಕ್ಕ ಪ್ರತಿಫಲ ಪಡೆದರು. 40ರ ವಯಸ್ಸಿನ ವಿಶ್ವದ ಅಗ್ರ ರ್ಯಾಂಕಿನ ಟೆಸ್ಟ್ ಬೌಲರ್ ಆ್ಯಂಡರ್ಸನ್ ಕ್ಷಿಪ್ರವಾಗಿ ಮೂರು ವಿಕೆಟ್‌ಗಳನ್ನು ಉರುಳಿಸಿ ನ್ಯೂಝಿಲ್ಯಾಂಡ್‌ನ ಅಗ್ರ ಸರದಿಗೆ ಸವಾಲಾದರು.
ಕೇನ್ ವಿಲಿಯಮ್ಸನ್(4 ರನ್) ಸಹಿತ ಐವರು ಆಟಗಾರರು ಕಳಪೆ ಶಾಟ್ ಆಯ್ಕೆ ಮಾಡಿ ಕೈಸುಟ್ಟುಕೊಂಡರು.
ಕಿವೀಸ್ ಓಪನರ್ ಆಗಿರುವ ಟಾಮ್ ಲಥಾಮ್(35 ರನ್)ಹಾಗೂ ಐದನೇ ಕ್ರಮಾಂಕದ ಬ್ಯಾಟರ್ ಹೆನ್ರಿ ನಿಕೊಲ್ಸ್(30 ರನ್)ಉತ್ತಮ ಆರಂಭವನ್ನು ಪಡೆದರು. ಆದರೆ ಈ ಇಬ್ಬರು ಜಾಕ್ ಲೀಚ್ ಬೌಲಿಂಗ್‌ನಲ್ಲಿ ರಿವರ್ಸ್-ಸ್ವೀಪ್ ಮಾಡಲು ಯತ್ನಿಸಿ ವಿಕೆಟ್ ಒಪ್ಪಿಸಿದರು. ಟೀ ವಿರಾಮಕ್ಕೆ ಮೊದಲು ಲೀಚ್ ಅವರ ಕೊನೆಯ ಎಸೆತದಲ್ಲಿ 6ನೇ ಕ್ರಮಾಂಕದ ಬ್ಯಾಟರ್ ಡರ್ಲ್ ಮಿಚೆಲ್(13 ರನ್)ಔಟಾದರು. ಓಲಿ ಪೋಪ್ ಸಿಲ್ಲಿ ಪಾಯಿಂಟ್‌ನಲ್ಲಿ ಒಂದೇ ಕೈಯಲ್ಲಿ ಕ್ಯಾಚ್ ಪಡೆದು ಆಲ್‌ರೌಂಡರ್ ಮಿಚೆಲ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ವಿಕೆಟ್‌ಕೀಪರ್ ಟಾಮ್ ಬ್ಲಂಡೆಲ್(ಔಟಾಗದೆ 25) ಹಾಗೂ ನಾಯಕ ಟಿಮ್ ಸೌಥಿ(ಔಟಾಗದೆ 23)ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇಂಗ್ಲೆಂಡ್ ಬೌಲಿಂಗ್‌ನಲ್ಲಿ ಆ್ಯಂಡರ್ಸನ್(3-37) ಹಾಗೂ ಜಾಕ್ ಲೀಚ್(3-45)ತಲಾ ವುೂರು ವಿಕೆಟ್‌ಗಳನ್ನು ಕಬಳಿಸಿದರು.







