ದ್ರಾವಿಡ ಸೋದರತೆಗೆ ಸಂಘ ಪರಿವಾರದ ಕನ್ನ

ವೈದ್ಯರುಗಳು ಇಲ್ಲದಲ್ಲಿ ರೋಗಿಗಳು ಸತ್ತು ಹೋಗುವ ಹಾಗೆ, ಸರಿಯಾದ ಇತಿಹಾಸ ಸಂಶೋಧನೆ ಇಲ್ಲದ ಕಡೆ ಮನುಷ್ಯ ಸಮಾಜದ ದಿಕ್ಕುದೆಸೆ ಸತ್ತು ಹೋಗುತ್ತದೆ. ಆರೋಗ್ಯವಂತ ಸಮಾಜ ಈ ಬಗ್ಗೆ ಎಚ್ಚರವಾಗಿರುತ್ತದೆ. ಸರಿಯಾದ ರಾಜಕೀಯ ಪ್ರಜ್ಞೆಯನ್ನು ಫ್ಯಾಶಿಸ್ಟ್ ಶಕ್ತಿಗಳು ಹೇಗೆ ದುರ್ಬಲಗೊಳಿಸಿದವು ಎಂದು ಒಮ್ಮೆ ಹಿಂದಿರುಗಿ ನೋಡಿದರೆ ನಮಗೆ ಸುಲಭದಲ್ಲಿ ಅರ್ಥವಾಗಬಹುದು. ಇತಿಹಾಸದ ಲಗಾಮು ಆ ದೇಶದ ಲಗಾಮು ಆಗಿರುತ್ತದೆ ಎಂದು ಫ್ಯಾಶಿಸ್ಟ್ ಶಕ್ತಿಗಳು ಮೊದಲೇ ಅರ್ಥ ಮಾಡಿಕೊಂಡಿವೆ. ಬಹಳ ಚಾಣಾಕ್ಷತನದಿಂದಲೂ ಸಮೀಕರಿಸಲಾಗದ ಸಹನೆಯಿಂದಲೂ ಅವರು ಅದನ್ನು ನಿರ್ವಹಿಸುತ್ತಲೂ ಇವೆ.
ದ್ರಾವಿಡ ರಾಜ್ಯಗಳು ಪರಸ್ಪರ ಹೊಡೆದಾಡಿಕೊಳ್ಳಬೇಕೆಂದು ನಾವು ಭಾರತೀಯರು ಯಾವ ಕಾರಣಕ್ಕೂ ಬಯಸಬಾರದು. ಭಾಷಾ ಸಂಸ್ಕೃತಿಯಿಂದಲೂ ಚಾರಿತ್ರಿಕವಾಗಿಯೂ ತಮಿಳು, ಕನ್ನಡ, ಮಲಯಾಳಂ ಮತ್ತು ತೆಲುಗು ಭಾಷೆಗಳು ಸೋದರರು. ತುಳು, ಬ್ಯಾರಿ, ಕೊಡವ, ಬೆಳ್ಳಾರಿ, ತೋಡ, ಕೊರಗ, ಬಡಗ ಕುರುಂಬ ಮೊದಲಾದ ಭಾಷೆಗಳಿಂದ ಹಿಡಿದು ಚಾತಿಪ್ಪಾನಿ ಎಂಬ ಕಾಡು ಜನರ ಭಾಷೆಯ ತನಕ ಸುಮಾರು ಎಂಭತ್ತರಷ್ಟು ದ್ರಾವಿಡ ಭಾಷಾ ಶಾಖೆಗಳಿರುವುದಾಗಿ ಅಂದಾಜಿಸಲಾಗಿದೆ. ಸಾಹಿತ್ಯ ದ್ರಾವಿಡ ಭಾಷೆಗಳಲ್ಲಿಯೇ ಹಲವು ಪದಗಳು ಸಮಾನವಾಗಿವೆ. ಹಲವು ಪದಗಳಿಗೆ ಭಾಷಾ ಕುಟುಂಬದ ಸಂಬಂಧವೂ ಇದೆ. ಕೆಲವು ಲಿಪಿಗಳೂ ಸಾಮ್ಯತೆ ಹೊಂದಿವೆ. (ಜೊತೆಗೆ ಇಲ್ಲಿಯೇ ಹುಟ್ಟಿದ ದಖನಿ, ಉರ್ದು ಕೂಡ ಇದೆ - ಅನುವಾದಕ) ಆದರೆ, ಇವೆಲ್ಲವನ್ನೂ ನಾವು ಗಮನಿಸುತ್ತಿಲ್ಲ ಎಂಬುದು ಮಾತ್ರ ವಾಸ್ತವ. ಲ್ಯಾಟಿನ್ ಅಮೆರಿಕನ್ ಸಾಹಿತ್ಯದ ಓದಿಗೆ ನಾವು ತೋರಿಸುವ ಇಚ್ಛಾಶಕ್ತಿಯನ್ನು ದ್ರಾವಿಡ ಭಾಷೆಗಳ ವಿಷಯದಲ್ಲಿಯೂ ತೋರಿಸಬೇಕಿದೆ. ದುರದೃಷ್ಟವಶಾತ್, ಅದು ಗಂಭೀರವಾಗಿ ನಡೆಯುತ್ತಲೇ ಇಲ್ಲ. 28.7 ಕೋಟಿಗಿಂತ ಹೆಚ್ಚು ಜನರು ಇಂದು ದ್ರಾವಿಡ ಭಾಷೆ ಮಾತನಾಡುತ್ತಿದ್ದಾರೆ. ದ್ರಾವಿಡ ಭಾಷೆಗಳಲ್ಲಿ ಮುಖ್ಯವಾದ ತಮಿಳು ಶ್ರೀಲಂಕಾ, ಮಲೇಶ್ಯ, ಸಿಂಗಾಪುರ, ದಕ್ಷಿಣ ಆಫ್ರಿಕಾ, ಮಾರಿಷಸ್ ಮೊದಲಾದ ದೇಶಗಳಲ್ಲಿ ಅಧಿಕೃತ ಭಾಷೆಯೆಂದು ಪರಿಗಣಿಸಲ್ಪಟ್ಟಿದೆ. ಐದು ವರ್ಷಗಳ ಹಿಂದೆ ಆಸ್ಟ್ರೇಲಿಯದಲ್ಲಿ ಕೂಡ ತಮಿಳನ್ನು ಅಧಿಕೃತ ಭಾಷೆ ಎಂದು ಘೋಷಿದರು. ನಾರ್ವೆಯಂತಹ ದೇಶದಲ್ಲಿ ಕೂಡ ತಮಿಳು ಸದ್ಯದಲ್ಲೇ ಅಧಿಕೃತ ಭಾಷೆಯಾಗಿ ಘೋಷಿಸಲ್ಪಡುವ ಸಾಧ್ಯತೆಯೂ ಇದೆ. ಭಾರತ ಉಪಖಂಡಕ್ಕೆ ಆರ್ಯನ್ ವಲಸೆಯಿಂದ ಉಂಟಾದ ಸಂಸ್ಕೃತದ ಪ್ರಭಾವವನ್ನು ಅತ್ಯಂತ ಶಕ್ತಿಶಾಲಿಯಾಗಿ ಎದುರಿಸಿದ ದ್ರಾವಿಡ ಭಾಷೆಯೂ ಕೂಡ ತಮಿಳು. ನೈರುತ್ಯ ಪಾಕಿಸ್ತಾನದ ಬ್ರಹೂಯಿ ಭಾಷೆಯೂ ದ್ರಾವಿಡವೆಂದು ಭಾಷಾ ಪಂಡಿತರು ಗುರುತಿಸಿದ್ದಾರೆ. ಹೀಗೆ ಭಾಷೆಯ ಪ್ರಜ್ಞೆ ಚರಿತ್ರೆಯುದ್ದಕ್ಕೂ ಸಂಚರಿಸಿದ ವಿಸ್ಮಯಕರ ದ್ರಾವಿಡ ನೋಟವೂ ಹೌದು.
ರಾಜ್ಯಗಳ ಗಡಿಗಳಲ್ಲಿ ಮುಗಿಯುವ ವಿಷಯವಲ್ಲ ಭಾಷೆ. ವ್ಯಕ್ತಿಗಳಿಗೆಂಬಂತೆ ಸಮಾಜಕ್ಕೂ ಸುಪ್ತಪ್ರಜ್ಞೆ ಎಂಬುದಿದೆ. ಈ ಸುಪ್ತಪ್ರಜ್ಞೆ ಪ್ರತ್ಯಕ್ಷ ನೆನಪಿನಲ್ಲಿ ಇರುವುದಲ್ಲ, ಬದಲಿಗೆ ಪರೋಕ್ಷ ನೆನಪಿನಲ್ಲಿದ್ದುಕೊಂಡು ಅದು ನಿಯಂತ್ರಿಸುತ್ತದೆ. ನಿರ್ಣಾಯಕ ಸಂದರ್ಭಗಳಲ್ಲಿ ನಮ್ಮ ಬುದ್ಧಿಯನ್ನು ನಿಯಂತ್ರಿಸುವುದು ಕೂಡ ಈ ಸುಪ್ತಪ್ರಜ್ಞೆ. ನಮ್ಮ ಜ್ಞಾನದ ಗಡಿಗಳನ್ನೂ ದಾಟಿ ಕೆಲವೊಮ್ಮೆ ಈ ಸುಪ್ತಪ್ರಜ್ಞೆ ನ್ಯಾಯಾಧೀಶನ ಕುರ್ಚಿಯಲ್ಲಿ ಬಂದು ಕೂರುತ್ತದೆ. ಸಾಮಾನ್ಯ ಬುದ್ಧಿಶಕ್ತಿಗಿಂತ ಸಾವಿರ ಪಟ್ಟು ವೇಗದ ವಹಿವಾಟು ಅದು. ಆದ್ದರಿಂದ ಭಾಷೆಯಾಗಿ, ಸಂಸ್ಕೃತಿಯಾಗಿ ಕವಲೊಡೆದ ತೊರೆಯ ಉಗಮ ಕಂಡುಕೊಳ್ಳಬೇಕಾದ ಅನಿವಾರ್ಯತೆ ಪ್ರತಿಯೊಂದು ಜನಸಮೂಹಕ್ಕೂ ಇದೆ. ಆದ್ದರಿಂದಲೇ, ದ್ರಾವಿಡವಾದ ಅನೇಕ ಚಾರಿತ್ರಿಕ ಒಳಿತುಗಳನ್ನು ಈ ಮಿಂಚಿದ ಕಾಲದಲ್ಲಾದರೂ ನಾವು ಆತುಕೊಳ್ಳಬೇಕಾಗಿದೆ. ಬಂದ ದಾರಿ ತಿಳಿದವರಿಗಷ್ಟೇ ಹೋಗಬೇಕಾದ ಹಾದಿಯ ಬಗ್ಗೆ ಸರಿಯಾದ ತಿಳುವಳಿಕೆ ಇರಲು ಸಾಧ್ಯ.
ನಮ್ಮಲ್ಲಿ ಧಾರಾಳ ಡಾಕ್ಟರುಗಳು ಇದ್ದಾರೆ. ಇಂಜಿನಿಯರುಗಳು ಇದ್ದಾರೆ. ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಪರಿಣತಿ ಹೊಂದಿದವರಿದ್ದಾರೆ. ಬಹಳ ಒಳ್ಳೆಯದೇ. ಅದರ ಜೊತೆಗೇ ಮಾನವಿಕ ವಿಷಯಗಳಲ್ಲಿ ಕ್ರಿಯಾತ್ಮಕವಾದ ಸಂಶೋಧನೆಗಳು ಬೇಕಾದಷ್ಟು ಮಟ್ಟಿಗೆ ಯಾಕೆ ನಡೆಯುತ್ತಿಲ್ಲ ಎಂದು ನಾವು ನೋಡಬೇಕಿದೆ. ಮೌಲಿಕ ಸಾಹಿತ್ಯ ಕೂಡ ತಂತ್ರಜ್ಞಾನದ ಭಾಗವಾಗಿಸುವ ಹೊಸ ವೈರುಧ್ಯದ ಕಾಲದಲ್ಲಿ ನಾವಿದ್ದೇವೆ. ಮಾನವಿಕದ ಅಡಿಯಲ್ಲಿಯೇ ಚರಿತ್ರೆ ಮತ್ತು ಭಾಷಾ ಸಂಶೋಧನೆಗಳು ಬರುತ್ತವೆ. ಇಂದು ಈ ಎರಡೂ ವಿಷಯಗಳನ್ನು ಅತ್ಯಂತ ಅಸಡ್ಡೆಯಿಂದ ನಿರ್ವಹಿಸಲಾಗುತ್ತಿದೆ. ವೈದ್ಯರುಗಳು ಇಲ್ಲದಲ್ಲಿ ರೋಗಿಗಳು ಸತ್ತು ಹೋಗುವ ಹಾಗೆ, ಸರಿಯಾದ ಇತಿಹಾಸ ಸಂಶೋಧನೆ ಇಲ್ಲದ ಕಡೆ ಮನುಷ್ಯ ಸಮಾಜದ ದಿಕ್ಕುದೆಸೆ ಸತ್ತು ಹೋಗುತ್ತದೆ. ಆರೋಗ್ಯವಂತ ಸಮಾಜ ಈ ಬಗ್ಗೆ ಎಚ್ಚರವಾಗಿರುತ್ತದೆ. ಸರಿಯಾದ ರಾಜಕೀಯ ಪ್ರಜ್ಞೆಯನ್ನು ಫ್ಯಾಶಿಸ್ಟ್ ಶಕ್ತಿಗಳು ಹೇಗೆ ದುರ್ಬಲಗೊಳಿಸಿದವು ಎಂದು ಒಮ್ಮೆ ಹಿಂದಿರುಗಿ ನೋಡಿದರೆ ನಮಗೆ ಸುಲಭದಲ್ಲಿ ಅರ್ಥವಾಗಬಹುದು. ಇತಿಹಾಸದ ಲಗಾಮು ಆ ದೇಶದ ಲಗಾಮು ಆಗಿರುತ್ತದೆ ಎಂದು ಫ್ಯಾಶಿಸ್ಟ್ ಶಕ್ತಿಗಳು ಮೊದಲೇ ಅರ್ಥ ಮಾಡಿಕೊಂಡಿವೆೆ. ಬಹಳ ಚಾಣಾಕ್ಷತನದಿಂದಲೂ ಸಮೀಕರಿಸಲಾಗದ ಸಹನೆಯಿಂದಲೂ ಅದನ್ನು ನಿರ್ವಹಿಸುತ್ತಲೂ ಇವೆೆ. ಇನ್ನೊಂದು ವಿಧದಲ್ಲಿ ಹೇಳುವುದಾದರೆ, ಕೆಟ್ಟ ಕಾರಣಕ್ಕಾದರೂ ಅತ್ಯಂತ ಕರಾರುವಾಕ್ಕಾಗಿ ಸ್ವತಂತ್ರ ಭಾರತದ ಚರಿತ್ರೆಯನ್ನು ಅವರಿಗೆ ಬೇಕಾದ ಸರಿಯಾದ ರಾಜಕೀಯ ಉಪಕರಣವಾಗಿ ಉಪಯೋಗಿಸಿ ಅದರಲ್ಲಿ ವಿಜಯ ಕಂಡ ಒಂದೇ ಒಂದು ರಾಜಕೀಯ ಪಕ್ಷ ಬಿಜೆಪಿ. ಉಳಿದವರೆಲ್ಲ ಬಹುತೇಕ ರಾಜಕಾರಣವನ್ನು ಪಕ್ಷ ರಾಜಕೀಯದ ಮಟ್ಟಿಗೆ ಮಾತ್ರ ದುಡಿಸಿಕೊಂಡು ಸುಮ್ಮನಾದರು. ಸ್ವತಂತ್ರ ಇಂಡಿಯಾದ ಚರಿತ್ರೆ ಇದು. ಕೆಲವೇ ಕೆಲವು ಗಟ್ಟಿ ಅಪವಾದಗಳನ್ನು ತಳ್ಳಿ ಹಾಕಿಕೊಂಡು ಈ ಮಾತನ್ನು ಹೇಳುತ್ತಿಲ್ಲ.
ಸ್ವತಂತ್ರ ಇಂಡಿಯಾದಲ್ಲಿ ಫ್ಯಾಶಿಸ್ಟ್ ಶಕ್ತಿಗಳು ಚರಿತ್ರೆ ಮತ್ತು ಸಮಾಜವನ್ನು ಹೇಗೆ ವಿಭಜಿಸಿ ಅಧಿಕಾರಕ್ಕೆ ಏರಬಹುದು ಎಂಬ ಚರ್ಚೆಯಲ್ಲಿದ್ದಾಗ, ಬಹುತೇಕ ಉಳಿದ ರಾಜಕೀಯ ಪಕ್ಷಗಳು ಸೀಟು ಹಂಚಿಕೆಯ ಚರ್ಚೆಯಲ್ಲಿ ತಮ್ಮ ಬಹುಪಾಲು ಸಮಯ ಕಳೆದದ್ದನ್ನು ಕಾಣಬಹುದು. ಸ್ವಾತಂತ್ರ್ಯ ಸಮರದ ಪ್ರಜ್ಞೆ ಕಾಂಗ್ರೆಸ್‌ಗೆ ದೀರ್ಘ ಕಾಲ ಅಧಿಕಾರಕ್ಕೇರಲು ಸಹಾಯ ಮಾಡಿತ್ತು. ಅಲ್ಲದೆ, ಕಾಂಗ್ರೆಸ್ ಅಂದುಕೊಂಡಿರುವ ಹಾಗೆ ತಮ್ಮ ಪಕ್ಷ ರಾಜಕಾರಣದ ತಂತ್ರಗಳಿಂದಲೋ, ತೆಗೆದುಕೊಂಡ ತೀರ್ಮಾನಗಳಿಂದಲೋ ತಮಗೆ ಅಧಿಕಾರ ಸಿಕ್ಕಿತ್ತು ಎಂದು ನಂಬಿಕೊಂಡಿರುವುದರಿಂದಲೇ ಕಾಂಗ್ರೆಸ್ ಇಂದು ಈ ಮಟ್ಟಕ್ಕೆ ಪತನಗೊಂಡು ನಿಂತಿದೆ. ತಮಾಷೆ ಅಂದರೆ, ಕಾಂಗ್ರೆಸ್ ಈಗಲೂ ತನ್ನ ಪಕ್ಷ ರಾಜಕಾರಣದ ತಂತ್ರವನ್ನೇ ನೆಚ್ಚಿಕೊಂಡು ಕೂತಿರುವುದು.
ರಾಜಕಾರಣಕ್ಕಿಂತ ಭಿನ್ನವಾಗಿ ಪಕ್ಷ ರಾಜಕಾರಣದ ಮುಖ್ಯ ವ್ಯತ್ಯಾಸ ಏನೆಂದರೆ, ಅದರ ಸೀಮಿತ ಕಾಲಸಂಕಲ್ಪ. ಭಾರತದಲ್ಲಿ ಪಕ್ಷ ರಾಜಕಾರಣದ ಕಾಲಸಂಕಲ್ಪಐದು ವರ್ಷಗಳು! ಚುನಾವಣೆ ಎರಡು ವರ್ಷಗಳಿಗೊಮ್ಮೆ ನಡೆಯುವ ಹಾಗಿದ್ದರೆ ಅದು ಇನ್ನೂ ಕಿರಿದಾಗಿ ಎರಡು ವರ್ಷಗಳಿಗೆ ಇಳಿಯುತ್ತಿತ್ತು.
ಹೇಳಲು ಹೊರಟಿರುವುದು ವ್ಯಕ್ತಿಗಳಿಗೆಂಬಂತೆ ಸಮಾಜಕ್ಕೂ ಸುಪ್ತ ಪ್ರಜ್ಞೆ ಇದೆ ಎಂದು. ಅದು ಇತಿಹಾಸದಲ್ಲೂ ಭಾಷೆಯಲ್ಲಿಯೂ ಉಂಡು ಕುಡಿದು ನಿದ್ದೆ ಹೊಡೆಯುತ್ತದೆ. ನಮ್ಮರಿವಿಗೆ ಬರುವುದಿಲ್ಲ ಎಂದು ಮಾತ್ರ. ಮಲಯಾಳದಲ್ಲಿ ನಾವು ಇಂದು ಉಪಯೋಗಿಸುತ್ತಿರುವ ಅನೇಕ ಬೈಗುಳಗಳು ಜಾತಿಮೂಲದಿಂದ ಹುಟ್ಟಿದವು ಎಂದು ಕೆಲವರಿಗಾದರೂ ಈಗ ತಿಳಿದಿದೆ. ಆದರೆ, ಬಹಳಷ್ಟು ಜನರಿಗೆ ಇದರ ಅರಿವು ಇಲ್ಲ ಎನ್ನುವುದೇ ವಾಸ್ತವ. ಅತ್ಯಂತ ಕೆಟ್ಟ ಶತಮಾನದಿಂದ ಉರುಳಿ ಬಂದ ಜಾತಿಯ ಪ್ರಜ್ಞೆಯು, ಈಗ ಹಲವು ದಶಕಗಳ ನಂತರವೂ ಅತಿ ಆಧುನಿಕ ಮಾಹಿತಿ ತಂತ್ರಜ್ಞಾನ ಸಾಧನಗಳಲ್ಲಿ ಒಂದಾದ ಆಂಡ್ರಾಯ್ಡಾ/ಐಫೋನ್ ಗಳಲ್ಲೂ ಹರಿದಾಡುತ್ತಿದೆ; ಸಾಮಾಜಿಕ ಸುಪ್ತಪ್ರಜ್ಞೆ ಅಷ್ಟು ಶಕ್ತಿಯುತವಾಗಿದೆ. ಸಮಾಜದ ಸುಪ್ತಪ್ರಜ್ಞೆಯು ಭಾಷೆಯ ಮೂಲಕ ಮಿಂಚಿನ ವೇಗದಲ್ಲಿ ಚಲಿಸುತ್ತದೆ. ಆದ್ದರಿಂದ, ಭಾಷೆಯು ಸಾಮಾಜಿಕ ಸುಪ್ತಪ್ರಜ್ಞೆಯ ರೆಕ್ಕೆಯೂ ಆಗಿದೆ.
ನಮ್ಮ ಅನೇಕಾರು ವಿಶಿಷ್ಟ ಮತ್ತು ವೈಭವಯುತವಾದ ದ್ರಾವಿಡ ಇತಿಹಾಸಗಳನ್ನು ನೆನಪಿಸಿಕೊಳ್ಳುವ ಮತ್ತು ಅಧ್ಯಯನ ಮಾಡಲೇ ಬೇಕಿರುವ ರಾಜಕೀಯ ಮಹತ್ವವು ಎಂದಿಗಿಂತಲೂ ಇಂದು ಹೆಚ್ಚು ಮಹತ್ವದ್ದಾಗಿದೆ ಎಂಬ ಚಿಂತನೆಯ ಮೂಲದಿಂದ ಈ ಟಿಪ್ಪಣಿ. ಇದನ್ನು ಬರೆಯುತ್ತಿರುವ ವ್ಯಕ್ತಿಯ ಅಂದಾಜಿನ ಮೇಲೆ ಹೇಳುವುದಾದರೆ, ದಕ್ಷಿಣ ಭಾರತದಲ್ಲಿ ಧಾರ್ಮಿಕ ನವೋತ್ಥಾನ ಚಳವಳಿ ಮೂಡಿ ಬಂದದ್ದು ಕರ್ನಾಟಕದಿಂದ. ಹನ್ನೆರಡನೇ ಶತಮಾನದ ವಚನ ಸಾಹಿತ್ಯದ ಮೂಲಕ ಅದು ನಡೆಯಿತು. ಬಸವಣ್ಣ ಇದರ ಮುಂದಾಳು. ಅಕ್ಕಮಹಾದೇವಿ, ಅಲ್ಲಮ ಪ್ರಭು ಮೊದಲಾದ ಬಹಳಷ್ಟು ಕವಿಗಳೂ ಕವಿತೆಗಳೂ ಆ ಚಳವಳಿಗೆ ಕಾವು ಕೊಟ್ಟರು. ಹರಳಯ್ಯನೆಂಬ ಚಮ್ಮಾರನಿಂದ ಹಿಡಿದು ಹಲವರು ಆ ಚಳುವಳಿಯ ಪ್ರತಿನಿಧಿಗಳಾದರು. ಸವರ್ಣ ಪ್ರಜ್ಞೆಯನ್ನು ತಡೆಯಲು ಆ ಚಳವಳಿಗೆ ಬಹುಕಾಲ ಸಾಧ್ಯವಾಯಿತು. ಆದರೆ, ಇಂದಿನ ಕರ್ನಾಟಕಕ್ಕೆ ಏನಾಗಿದೆ? ಭಾಷೆ ಮತ್ತು ಚರಿತ್ರೆಯ ಮುಂದುವರಿಕೆಯನ್ನು ಅದು ತೊಡೆದು ಹಾಕಿದ್ದು ಹೇಗೆ? ಬರಹಗಾರರು, ಚಿಂತಕರು ಕೊಲ್ಲಲ್ಪಡುವುದೂ, ನಿರಂತರ ಬೆದರಿಕೆಗಳಿಗೆ ಎದುರಾಗುವುದೂ ಯಾಕಾಗಿ? ದೇಶವೇ ಗೌರವಿಸುತ್ತಿದ್ದ ಬರಹಗಾರ ಡಾ. ಅನಂತಮೂರ್ತಿಯನ್ನು ಅವರ ಬದುಕಿನ ಕೊನೆಯ ಕಾಲದಲ್ಲೂ ಬೇಟೆಯಾಡುತ್ತಿದ್ದ ಆ ಕರಾಳ ದಿನಗಳನ್ನು ನಾವಿನ್ನೂ ಮರೆತಿಲ್ಲ. ಸಂಘ ಪರಿವಾರದ ರಾಜಕಾರಣವನ್ನು ತನ್ನ ಮಾತುಗಳಲ್ಲಿ ಟೀಕಿಸಿದರು ಎಂಬ ಒಂದೇ ಕಾರಣಕ್ಕೆ ಅವರಿಗೆ ಪಾಕಿಸ್ತಾನದ ಟಿಕೆಟ್ ಕೂಡ ಕೊಡಿಸಿದ್ದರು! ಈ ಸುದ್ದಿ ಕೇಳಿ ಆಶ್ಚರ್ಯಗೊಂಡವರಲ್ಲಿ ಮಲಯಾಳಿ ಸಮಾಜವೂ ಒಂದು. ಯಾಕೆಂದರೆ, ಅನಂತಮೂರ್ತಿ ಕನ್ನಡಿಗರಿಗಷ್ಟೇ ಅಲ್ಲ, ಮಲಯಾಳಿಗಳಿಗೂ ಹೆಮ್ಮೆಯ ಬರಹಗಾರರಾಗಿದ್ದರು. ಬಸವಣ್ಣನ ನೆಲದಲ್ಲಿ ಇದು ಘಟಿಸಿತಲ್ಲ ಎಂದು ನನ್ನನ್ನೂ ಸೇರಿದಂತೆ ಮಲಯಾಳಿಗಳು ಪರಿತಪಿಸಿದರು.
''ಪಕ್ಕದಲ್ಲಿ ಕೇರಳ ಇದೆ, ಜಾಗ್ರತೆಯಿಂದಿರಿ.''
ಕರ್ನಾಟಕದ ನಾಗರಿಕರ ಬಳಿ ಅಮಿತ್ ಶಾರಿಂದ ದ್ವೇಷಾಹ್ವಾನ! ಭಾಷೆಯಿಂದಲೂ ಪರಸ್ಪರ ಸೋದರರಾಗಿರುವ ಜನರೊಂದಿಗೆ ಈ ಮಾತನ್ನು ಹೇಳುತ್ತಿದ್ದಾರೆ ಎಂಬುದನ್ನೂ ಗಮನಿಸಬೇಕು.
ಆಂತರಿಕ ಕಲಹಗಳಿಂದ ದೇಶದ ನಾಗರಿಕರನ್ನು ರಕ್ಷಿಸಬೇಕಾದ ಮಂತ್ರಿಯ ಬಾಯಿಂದ ಹೊರಟ ಮಾತುಗಳಿವು. ದೇಶದ ಇತಿಹಾಸದಲ್ಲಿಯೇ ಇದು ಮೊದಲ ಘಟನೆಯೆಂದು ತೋರುತ್ತದೆ. ಒಂದು ರಾಜ್ಯದ ಜನರ ಬಳಿ ಪಕ್ಕದ ಇನ್ನೊಂದು ರಾಜ್ಯದ ಜನರನ್ನು ದ್ವೇಷಿಸಲು ಕೊಟ್ಟ ಕರೆಯ ವಿರುದ್ದ ನಮ್ಮ ಸಾಂಸ್ಕೃತಿಕ-ರಾಜಕೀಯ ಕ್ಷೇತ್ರದ ಮೌನ ಅಸಹನೀಯ. ಈ ವಿಷಯದಲ್ಲಿ ಕೇರಳ ಮುಖ್ಯಮಂತ್ರಿಯ ಪ್ರತಿಭಟನಾ ಹೇಳಿಕೆ ಇತ್ತೀಚಿನ ರಾಜಕೀಯ ಇತಿಹಾಸದ ಉತ್ತಮ ಉದಾಹರಣೆಯಾಗಿ ದಾಖಲಾಗಲಿದೆ. ರಾಜಕಾರಣದ ದಿಕ್ಸೂಚಿಯ ಮುಳ್ಳು ಸರಿಯಾದ ದಿಕ್ಕಿನಲ್ಲಿ ಬಂದು ನಿಂತ ಅಪೂರ್ವ ಸಂದರ್ಭಗಳಲ್ಲಿ ಒಂದಾಗಿತ್ತು ಇದು. ಆದರೆ, ಅದೆಷ್ಟು ಜನ ಇದನ್ನು ರಾಜಕೀಯವಾಗಿ ಗುರುತಿಸಿದರು?
ದ್ರಾವಿಡ ಕುಟುಂಬದ ಸಹೋದರರನ್ನು ಪರಸ್ಪರ ಹೊಡೆದಾಡಿಸಿ ಪಕ್ಷ ರಾಜಕಾರಣದಲ್ಲಿ ಲಾಭ ಗಿಟ್ಟಿಸಿಕೊಳ್ಳುವವರನ್ನು ವಿರೋಧಿಸಬೇಕಾದ ಅಗತ್ಯವನ್ನು ನೆನಪಿಸಿಕೊಡುವ ಘಟನೆ ಇದು. ಯಾಕೆಂದರೆ, ದ್ರಾವಿಡ ರಾಜ್ಯಗಳು ಪರಸ್ಪರ ಸಹಕಾರದಿಂದ ಬಾಳುವುದು ಸಂಘ ಪರಿವಾರದ ನಿದ್ದೆ ಕೆಡಿಸುತ್ತದೆ. ರಾಜ್ಯಗಳು ಪರಸ್ಪರ ಒಂದೇ ಒಡಲ ಸಹೋದರರಂತೆ ಬಾಳಬೇಕೆಂದು ಹೇಳಬೇಕಾದ, ದೇಶದ ಐಕ್ಯತೆ ಮತ್ತು ಅಖಂಡತೆಯನ್ನು ಎತ್ತಿ ಹಿಡಿಯಲು ವಿಶೇಷವಾಗಿ ಶ್ರಮಿಸಬೇಕಾದ ವ್ಯಕ್ತಿಯೊಬ್ಬ, ಅಕ್ಕಪಕ್ಕದ ಎರಡು ರಾಜ್ಯಗಳು ಹೊಡೆದಾಡಿಕೊಳ್ಳಲಿ ಎಂದು ನೇರವಾಗಿ ಹೇಳಿರುವುದು ಮಾತಿನ ಆವೇಶದಿಂದಲೋ ಆಕಸ್ಮಿಕವೋ ಅಲ್ಲ. ಇದರ ವಿರುದ್ದ ನಮ್ಮ ಮಾಧ್ಯಮಗಳ ಮೌನ ಅತ್ಯಂತ ಅಶ್ಚರ್ಯಕರವಾಗಿತ್ತು. ಪ್ರೈಂ ಟೈಂ ಚರ್ಚೆಯಲ್ಲೂ ಯಾವ ಮಧ್ಯಮಗಳೂ ಗಂಭೀರವಾಗಿ ಇದನ್ನು ಮುಟ್ಟಲಿಲ್ಲ.
ಚರಿತ್ರೆಯ ಬಗ್ಗೆ ಸಾಮಾಜಿದ ಪ್ರಜ್ಞೆಯನ್ನು ಗಮನಿಸದೆ ನಡೆಸುವ ಯಾವ ರಾಜಕೀಯ/ಸಾಂಸ್ಕೃತಿಕ ಚಳವಳಿಗಳೂ ವಿಫಲ ಯತ್ನಗಳಾಗಿ ಕೊನೆಯಾಗಬಹುದು. ದ್ರಾವಿಡ ರಾಜ್ಯಗಳು ತಮ್ಮ ಚರಿತ್ರೆ ಮತ್ತು ಭಾಷಾ ಅಧ್ಯಯನಗಳನ್ನು ಗಂಭೀರವಾಗಿ ನಡೆಸಬೇಕು ಎಂಬುದನ್ನೂ ಈ ಘಟನೆ ನಮಗೆ ನೆನಪಿಸುತ್ತದೆ. ಚರಿತ್ರೆ ಮತ್ತು ಭಾಷೆಯನ್ನು ಒಂದು ರಾಜಕೀಯ ಪ್ರಜ್ಞೆಯಾಗಿ ಪರಿವರ್ತಿಸಿದ ಶಕ್ತಿಯನ್ನು ನಾವಿಂದು ತಮಿಳುನಾಡಿನಲ್ಲಿ ಕಾಣಬಹುದು. ಕನ್ನಡಿಗರ ಬಳಿ ಹೇಳಿದ ಅದೇ ಮಾತನ್ನು ತಮಿಳರ ಬಳಿ ಹೇಳಲು ಯಾಕೆ ಧೈರ್ಯವಿಲ್ಲ ಎಂಬುದರ ಕುರಿತು ಚಿಂತಿಸಿದರೆ, ಕನ್ನಡ ನೆಲದಲ್ಲಿ ನಡೆದು ಹೋದ ಮಹತ್ತರವಾದ ವಚನ ಚಳವಳಿಯನ್ನು ಮತ್ತೆ ಹೊಸ ರೂಪದಲ್ಲಿ ಕಟ್ಟಬೇಕಾದ ಅನಿವಾರ್ಯತೆಯನ್ನೂ ಗುರುತಿಸಬಹುದು. ರಾಜಕಾರಣ ದೊಡ್ಡ ಜನ ಸಮೂಹವೊಂದರ exhibitionism ಮಾತ್ರವಲ್ಲ. ಮಣ್ಣಾಗಿ ಹೋದ ಮನುಷ್ಯರೂ ಚರಿತ್ರೆಯನ್ನು ನಿಯಂತ್ರಿಸುತ್ತಿದ್ದಾರೆ.







