ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದ ಪಾಕಿಸ್ತಾನಕ್ಕೆ 700 ದಶಲಕ್ಷ ಡಾಲರ್ ಸಾಲ ನೀಡಿದ ಚೀನಾ
ಸಾಲ ನೀಡಿ ನಿಯಂತ್ರಣ ಸಾಧಿಸುತ್ತಿರುವ ಚೀನಾ: ಅಮೆರಿಕ ಕಳವಳ

ಇಸ್ಲಮಾಬಾದ್, ಫೆ.25: ಐಎಂಎಫ್‌ನಿಂದ ಆರ್ಥಿಕ ನೆರವು ವಿಳಂಬವಾಗುವ ಸಾಧ್ಯತೆಯ ನಡುವೆಯೇ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದ ಪಾಕಿಸ್ತಾನಕ್ಕೆ ಚೀನಾ 700 ದಶಲಕ್ಷ ಡಾಲರ್ ಸಾಲ ಬಿಡುಗಡೆಗೊಳಿಸಿದೆ ಎಂದು ವರದಿಯಾಗಿದೆ.
700 ದಶಲಕ್ಷ ಡಾಲರ್‌ನಷ್ಟು ಆರ್ಥಿಕ ನೆರವನ್ನು ಈದಿನ ಚೀನಾ ಅಭಿವೃದ್ಧಿ ಬ್ಯಾಂಕ್‌ನಿಂದ ಸ್ಟೇಟ್‌ಬ್ಯಾಂಕ್ ಆಫ್ ಪಾಕಿಸ್ತಾನಕ್ಕೆ ವರ್ಗಾವಣೆಯಾಗಿದೆ ಎಂದು ಪಾಕಿಸ್ತಾನದ ವಿತ್ತಸಚಿವ ಇಷಾಕ್ ದಾರ್ ಟ್ವೀಟ್ ಮಾಡಿದ್ದಾರೆ. ಅಗತ್ಯದ ಸಂದರ್ಭ ತುರ್ತು ನೆರವು ಒದಗಿಸಿರುವ ನಮ್ಮ ವಿಶೇಷ ಮಿತ್ರ ಚೀನಾಕ್ಕೆ ಕೃತಜ್ಞತೆಗಳು ಎಂದು ಪಾಕ್ ಪ್ರಧಾನಿ ಶಹಬಾರ್ ಶರೀಫ್ ಅಭಿನಂದನೆ ಸಲ್ಲಿಸಿದ್ದಾರೆ.
ಪಾಕಿಸ್ತಾನದ ಮಿತ್ರರಾಷ್ಟ್ರವು ಐಎಂಎಫ್‌ನ ಒಪ್ಪಂದ ಅಂತಿಮಗೊಳ್ಳುವವರೆಗೆ ಕಾಯದೆ ತಮ್ಮ ಪಾಲನ್ನು ವರ್ಗಾಯಿಸಿದ್ದಾರೆ. ಈ ವಿಷಯವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಪಾಕಿಸ್ತಾನ ಡಿಫಾಲ್ಟರ್ ಪಟ್ಟಿಗೆ ಸೇರುವುದನ್ನು ತಪ್ಪಿಸಲು ಮತ್ತು ದೈನಂದಿನ ಅಗತ್ಯದ ವಸ್ತುಗಳ ಆಮದಿಗೆ ಈ ಹಣವು ಸಂಜೀವಿನಿಯಂತೆ ಒದಗಿಬಂದಿದೆ ಎಂದು ಶರೀಫ್ ಭದ್ರತಾ ಅಧಿಕಾರಿಗಳ ಸಭೆಯಲ್ಲಿ ಹೇಳಿದರು.
ಚೀನಾದ ನೆರವಿನೊಂದಿಗೆ 2.9 ಶತಕೋಟಿ ಡಾಲರ್‌ಗೆ ಕುಸಿದಿದ್ದ ಪಾಕಿಸ್ತಾನದ ವಿದೇಶಿ ವಿನಿಮಯ ದಾಸ್ತಾನು 4 ಶತಕೋಟಿ ಡಾಲರ್‌ಗೆ ತಲುಪಿದೆ. ಐಎಂಎಫ್‌ನಿಂದ 1.1 ಶತಕೋಟಿ ಡಾಲರ್ ಸಾಲವನ್ನು ಪಾಕ್ ಎದುರು ನೋಡುತ್ತಿದೆ.
ಸಾಲ ನೀಡಿ ನಿಯಂತ್ರಣ ಸಾಧಿಸುವ ಚೀನಾ: ಅಮೆರಿಕ ಕಳವಳ
ವಾಷಿಂಗ್ಟನ್, ಫೆ.25: ಭಾರತದ ನೆರೆಯ ದೇಶಗಳಾದ ಪಾಕಿಸ್ತಾನ, ಶ್ರೀಲಂಕಾಕ್ಕೆ ಸಾಲದ ನೆರವು ನೀಡುವ ಮೂಲಕ ಆ ದೇಶಗಳನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳುವ ಚೀನಾದ ಉದ್ದೇಶ ತೀವ್ರ ಕಳವಳಕಾರಿಯಾಗಿದೆ ಎಂದು ಅಮೆರಿಕ ಹೇಳಿದೆ.
ಹೀಗೆ ನೀಡುವ ಸಾಲವು ಸಾಲ ಪಡೆದವರನ್ನು ಬಲವಂತವಾಗಿ ಹತೋಟಿಗೆ ಒಳಪಡಿಸುವ ಉದ್ದೇಶ ಹೊಂದಿರುವ ಸಾಧ್ಯತೆಯಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ದಕ್ಷಿಣ ಮತ್ತು ಮಧ್ಯಏಶ್ಯಾದ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು ಹೇಳಿದ್ದಾರೆ. ಭಾರತವನ್ನು ಒಳಗೊಂಡಿರುವ ಈ ಪ್ರದೇಶದ ದೇಶಗಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಮತ್ತು ಯಾವುದೇ ಹೊರಗಿನ ಪಾಲುದಾರ ರಾಷ್ಟ್ರದಿಂದ ಬಲವಂತಕ್ಕೆ ಒಳಗಾಗಬಾರದು ಎಂದು ಲು ಆಗ್ರಹಿಸಿದ್ದಾರೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಮಾರ್ಚ್ 1ರಿಂದ 3ರವರೆಗೆ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭ ಭಾರತದ ಜತೆ ಮಾತುಕತೆ ನಡೆಸಲಿದ್ದೇವೆ. ಈ ಪ್ರದೇಶದ ದೇಶಗಳು ಚೀನಾ ಸೇರಿದಂತೆ, ಹೊರಗಿನ ಪಾಲುದಾರರ ಒತ್ತಾಯಕ್ಕೆ ಕಟ್ಟುಬೀಳದೆ ತಮ್ಮದೇ ಆದ ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂಬುದು ನಮ್ಮ ನಿಲುವಾಗಿದೆ. ಚೀನಾದ ವಿಷಯಕ್ಕೆ ಸಂಬಂಧಿಸಿ ಅಮೆರಿಕ ಮತ್ತು ಭಾರತದ ನಡುವೆ ಗಂಭೀರ ಮಾತುಕತೆ ನಡೆದಿದೆ. ಕಣ್ಗಾವಲು ಬಲೂನು ಪ್ರಕರಣದ ಮೊದಲು ಹಾಗೂ ನಂತರದ ದಿನದಲ್ಲಿ ಚೀನಾದ ಕುರಿತ ಗಂಭೀರ ಮಾತುಕತೆ ಮುಂದುವರಿದಿದೆ ಎಂದ ಅವರು, ಕ್ವಾಡ್ ಸಂಘಟನೆ ಮಿಲಿಟರಿ ಒಕ್ಕೂಟವಲ್ಲ ಎಂದು ಸ್ಪಷ್ಟಪಡಿಸಿದರು. ಕ್ವಾಡ್ ಯಾವುದೇ ದೇಶದ ವಿರುದ್ಧದ ಒಕ್ಕೂಟವಲ್ಲ. ಇದು ಮುಕ್ತ ಇಂಡೊ-ಪೆಸಿಫಿಕ್ ಅನ್ನು ಬೆಂಬಲಿಸುವ ಚಟುವಟಿಕೆಗಳು ಹಾಗೂ ಸಿದ್ಧಾಂತಗಳನ್ನು ಪ್ರೋತ್ಸಾಹಿಸುವ ಒಕ್ಕೂಟವಾಗಿದೆ ಎಂದರು.
ಭಾರತ-ರಶ್ಯ ಮಿಲಿಟರಿ ಸಂಬಂಧದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅಂತರಾಷ್ಟ್ರೀಯ ವೇದಿಕೆಯಲ್ಲಿ ಒಬ್ಬಂಟಿಯಾಗುತ್ತಿರುವ ರಶ್ಯಕ್ಕೆ ತನ್ನ ಮಿಲಿಟರಿ ಒಪ್ಪಂದವನ್ನು ನಿರ್ವಹಿಸಲು ಕಷ್ಟವಾಗುತ್ತಿದೆ ಎಂದರು.







