2024ರಲ್ಲಿ ಬಿಜೆಪಿ ಮುಕ್ತ ಭಾರತಕ್ಕೆ ನಿತೀಶ್- ಲಾಲೂ ಕರೆ

ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ’ಮಹಾಘಟಬಂಧನ್’ 2024ರಲ್ಲಿ ಬಿಜೆಪಿಮುಕ್ತ ಭಾರತ ನಿರ್ಮಾಣಕ್ಕೆ ಕರೆ ನೀಡಿದೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಬಿಹಾರದ 40 ಸ್ಥಾನಗಳ ಪೈಕಿ ಒಂದು ಸ್ಥಾನವನ್ನೂ ಗಳಿಸುವುದಿಲ್ಲ. ಏಕೆಂದರೆ ಮೈತ್ರಿ ಪಾಲುದಾರ ಪಕ್ಷಗಳು ಒಗ್ಗಟ್ಟಾಗಿವೆ ಎಂದು ನಿತೀಶ್ ಹೇಳಿದ್ದಾರೆ.
ಬಿಜೆಪಿ ಹಾಗೂ ಆರೆಸ್ಸೆಸ್ ದೇಶದಲ್ಲಿ ಧ್ರುವೀಕರಣ ರಾಜಕಾರಣ ಮಾಡುತ್ತಿವೆ ಹಾಗೂ ದಲಿತರು ಮತ್ತು ಸೌಲಭ್ಯವಂಚಿತ ಸಮುದಾಯಗಳಿಗೆ ಇರುವ ಮೀಸಲಾತಿಯನ್ನು ಕೊನೆಗೊಳಿಸಲು ಹುನ್ನಾರ ನಡೆಸಿವೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಗಂಭೀರ ಆರೋಪ ಮಾಡಿದ್ದಾರೆ.
"ದೇಶವನ್ನು ಮತ್ತು ಅಲ್ಪಸಂಖ್ಯಾತರನ್ನು ರಕ್ಷಿಸಲು 2024ರಲ್ಲಿ ಬಿಜೆಪಿಯನ್ನು ಪದಚ್ಯುತಗೊಳಿಸುವ ಪ್ರತಿಜ್ಞೆ ಮಾಡಿ" ಎಂದು ಪುರ್ನಿಯಾದಲ್ಲಿ ನಡೆದ ಮಹಾಮೈತ್ರಿ ರ್ಯಾಲಿಯನ್ನು ಉದ್ದೇಶಿಸಿ ದೆಹಲಿಯಿಂದ ಡಿಜಿಟಲ್ ಬಾಷಣ ಮಾಡಿದ ಲಾಲೂ ಕರೆ ನೀಡಿದರು.
ದೇಶಾದ್ಯಂತ ಬಿಜೆಪಿಯೇತರ ವಿರೋಧ ಪಕ್ಷಗಳನ್ನು ಸಂಘಟಿಸುವಲ್ಲಿ ತ್ವರಿತ ನಿರ್ಧಾರ ಕೈಗೊಳ್ಳದಿದ್ದರೆ ಅದರ ಲಾಭ ಯಾರಿಗೆ ಆಗುತ್ತದೆ ಎನ್ನುವ ಬಗ್ಗೆ ಕಾಂಗ್ರೆಸ್ ಪಕ್ಷವನ್ನು ನಿತೀಶ್ ಪ್ರಶ್ನಿಸಿದರು. "ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕಿದ್ದರೆ, ನೀವು ತಕ್ಷಣ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ" ಎಂದು ಸ್ಪಷ್ಟಪಡಿಸಿದರು.
"ಬಿಜೆಪಿಯೇತರ ವಿರೋಧ ಪಕ್ಷಗಳು ಒಗ್ಗಟ್ಟಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಬಿಜೆಪಿ 2024ರ ಚುನಾವಣೆಯಲ್ಲಿ ನೂರು ಸ್ಥಾನವನ್ನೂ ಗಳಿಸದು" ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಹಾಗೂ ರಾಜ್ಯಸಭಾ ಸದಸ್ಯ ಅಖಿಲೇಶ್ ಪ್ರಸಾದ್ ಸಿಂಗ್ ಅವರತ್ತ ನೋಡಿ ನಿತೀಶ್ ಭವಿಷ್ಯ ನುಡಿದರು.
ಬಿಹಾರ ಸೀಮಾಂಚಲ್ ಪ್ರದೇಶದ ನಾಲ್ಕು ಜಿಲ್ಲೆಗಳನ್ನು ಮತ್ತು ಉತ್ತರ ಬಂಗಾಳದ ಕೆಲ ಪ್ರದೇಶಗಳನ್ನು ಒಟ್ಟುಗೂಡಿಸಿ ಕೇಂದ್ರಾಡಳಿತ ಪ್ರದೇಶವನ್ನು ಸೃಷ್ಟಿಸುವ ಪ್ರಸ್ತಾವದ ಬಗ್ಗೆ ಉಲ್ಲೇಖಿಸಿದ ನಿತೀಶ್, "ರಾಜ್ಯ ವಿಭಜನೆಗೆ ಬಿಜೆಪಿ ಹೊರಟಿದೆ. ಆದರೆ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ" ಎಂದು ಖಡಾಖಂಡಿತವಾಗಿ ಹೇಳಿದರು.







