ದ್ವೇಷಾಪರಾಧ ತಡೆಗೆ ಹೊಸ ಕಾನೂನು: ಕಾಂಗ್ರೆಸ್ ಭರವಸೆ

ರಾಯಪುರ: ದೇಶದಲ್ಲಿ ಹೆಚ್ಚುತ್ತಿರುವ ದ್ವೇಷ ಹಾಗೂ ಧ್ರುವೀಕರಣ ರಾಜಕಾರಣದ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸರ್ಕಾರ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, "ದೇಶದಿಂದ ಪ್ರಜಾಪ್ರಭುತ್ವ ನಿರ್ನಾಮವಾಗುವ ಅಪಾಯ ಎದುರಾಗಿದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಜತೆಗೆ ದ್ವೇಷಪರಾಧವನ್ನು ತಡೆಯಲು ಮತ್ತು ಶಿಕ್ಷಿಸಲು ಹೊಸ ಕಾನೂನನ್ನು ಕಾಂಗ್ರೆಸ್ ತರಲಿದೆ ಎಂದು ಭರವಸೆ ನೀಡಿದರು. ಇದರ ಜತೆಗೆ ಮನೆ, ಹಾಸ್ಟೆಲ್, ಹೋಟೆಲ್ ಹಾಗೂ ಕ್ಲಬ್‌ಗಳು ಮತ್ತಿತರ ಸರಕು ಮತ್ತು ಸೇವಾ ಕ್ಷೇತ್ರದಲ್ಲಿ ಧರ್ಮ, ಲಿಂಗ, ಜಾತಿ ಮತ್ತು ಭಾಷೆ ಆಧಾರದಲ್ಲಿ ನಡೆಯುವ ತಾರತಮ್ಯವನ್ನು ತಡೆಯಲು ಕಾನೂನು ರೂಪಿಸಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರಗಳನ್ನು ಬುಡಮೇಲು ಮಾಡಲು ಶಾಸಕರನ್ನು ಖರೀದಿಸುವ ಬಿಜೆಪಿಯನ್ನು ಗುರಿ ಮಾಡಿ "ಸಾಮೂಹಿಕ ಭಿನ್ನಮತವನ್ನು ತಡೆಯಲು ಸೂಕ್ತ ಸಂವಿಧಾನ ತಿದ್ದುಪಡಿಯನ್ನೂ ಪಕ್ಷ ಮಾಡಲಿದೆ" ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್ ಪಕ್ಷದ ಅಧಿವೇಶನದಲ್ಲಿ ಆಂಗೀಕರಿಸಿದ ನಿರ್ಣಯಗಳಲ್ಲಿ ಈ ಆಂಶ ಕೂಡಾ ಸೇರಿದೆ. 2024ಕ್ಕೆ ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸುವ ಭರವಸೆಯನ್ನೂ ಅಧಿವೇಶನದಲ್ಲಿ ನೀಡಲಾಗಿದೆ.
ರಾಹುಲ್‌ಗಾಂಧಿಯವರ ಮೂಲ ತತ್ವವಾದ ’ಭಾರತ್ ಜೋಡೊ’ಗೆ ಅನುಗುಣವಾಗಿ ದ್ವೇಷಾಪರಾಧ ತಡೆ ಕಾನೂನಿನ ಭರವಸೆ ನೀಡಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ದ್ವೇಷ ಹಾಗೂ ಭೀತಿಯ ವಾತಾವರಣ ಸೃಷ್ಟಿಯಾಗಲು ಬಿಜೆಪಿ ಕಾರಣ ಎಂದು ಆಪದಿಸಿದರು. ಬಿಜೆಪಿ ದ್ವೇಷಾಗ್ನಿಗೆ ತುಪ್ಪ ಸುರಿಯುತ್ತಿದೆ ಎಂದು ಸೋನಿಯಾ ಕಿಡಿ ಕಾರಿದರು.







