"ಬಿಲ್ಕಿಸ್ ಬಾನು, ಬುಲ್ಡೋಝರ್ ಕಾರ್ಯಾಚರಣೆಯಂತಹ ವಿಚಾರಗಳ ವಿರುದ್ಧ ಕಾಂಗ್ರೆಸ್ ಗಟ್ಟಿಯಾಗಿ ಧ್ವನಿಯೆತ್ತಬೇಕಾಗಿದೆ"
ಶಶಿ ತರೂರ್

ನವ ರಾಯಪುರ: ‘ಎಲ್ಲರನ್ನೂ ಒಳಗೊಂಡ ಭಾರತ’ದ ಪರವಾದ ತನ್ನ ಸೈದ್ಧಾಂತಿಕ ನಿಲುವಿನ ಬಗ್ಗೆ ಕಾಂಗ್ರೆಸ್ ಸಂಪೂರ್ಣವಾಗಿ ಸ್ಪಷ್ಟತೆಯನ್ನು ಹೊಂದಿರಬೇಕೆಂದು ಪಕ್ಷದ ಹಿರಿಯ ನಾಯಕ ಶಶಿ ತರೂರ್ ಅವರು ಪ್ರತಿಪಾದಿಸಿದ್ದಾರೆ. ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಬಿಡುಗಡೆ, ಒತ್ತುವರಿಯ ನೆಪದಲ್ಲಿ ಬುಲ್ಡೋಜರ್ ಕಾರ್ಯಾಚರಣೆಯಿಂದ ಮನೆಗಳ ಧ್ವಂಸ ಹಾಗೂ ಗೋಸಂರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹತ್ಯೆಯಂತಹ ವಿಚಾರಗಳ ಬಗ್ಗೆ ಪಕ್ಷವು ಇನ್ನೂ ಹೆಚ್ಚು ಗಟ್ಟಿಯಾಗಿ ಧ್ವನಿಯೆತ್ತಬೇಕಾಗಿದೆ ಎಂದವರು ಹೇಳಿದ್ದಾರೆ.
ಚತ್ತೀಸ್ಗಢದ ನವರಾಯ್ಪುರದಲ್ಲಿ ಕಾಂಗ್ರೆಸ್ ಪಕ್ದದ 85ನೇ ಮಹಾಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ತರೂರ್, ‘‘ಎಲ್ಲರನ್ನೂ ಒಳಗೊಡ ಭಾರತದ ಕುರಿತಾದ ನಮ್ಮ ಸೈದ್ಧಾಂತಿಕ ನಿಲುವಿನ ಬಗ್ಗೆ ನಾವು ಸಂಪೂರ್ಣ ಸ್ಪಷ್ಟತೆಯನ್ನು ಹೊಂದಿರಬೇಕಾಗಿದೆ. ಕೆಲವು ವಿಚಾರಗಳಲ್ಲಿ ಪಕ್ಷದ ನಿಲುವನ್ನು ತೋರ್ಪಡಿಸಿಕೊಳ್ಳದೆ ಇರುವುದು ಅಥವಾ ಇನ್ನು ಕೆಲವು ವಿಷಯಗಳಲ್ಲಿ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆಯುಂಟಾದಿತಂದು ಭಾವಿಸಿಕೊಂಡು ಯಾವುದೇ ನಿಲುವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿಕೊಳ್ಳುವುದರಿಂದ ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿದಂತಾಗುತ್ತದೆ’’ ಎಂದು ತರೂರ್ ಹೇಳಿದರು.
‘‘ನಮ್ಮ ಬದ್ಧತೆಗಳ ಬಗ್ಗೆ ನಾವು ದಿಟ್ಟತನವನ್ನು ತಾಳಬೇಕಾಗಿದೆ. 2002ರ ಗುಜರಾತ್ ಗಲಭೆ ಸಂದರ್ಭ ನಡೆದ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗುಜರಾತ್ ಸರಕಾರವು ಕ್ಷಮದಾನ ನೀಡಿ ಅವರು ಜೈಲಿನಿಂದ ಬಂಧಮುಕ್ತರಾಗುವಂತೆ ಮಾಡಿತು. ಗುಜರಾತ್ ಸರಕಾರದ ಈ ನಡೆಗೆ ಕಾಂಗ್ರೆಸ್ ಸೇರಿದಂತೆ ವಿವಿಧ ವಲಯಗಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು’’ ಎಂದು ತರೂರ್ ಹೇಳಿದರು. ಭಾರತವು ಎಲ್ಲರಿಗೂ ಸೇರಿದ್ದಾಗಿದೆ. ಒಂದು ವೇಳೆ ಪಕ್ಷವು ಇಂತಹ ಪ್ರಕರಣಗಳ ಬಗ್ಗೆ ಮಾತನಾಡದೇ ಇದ್ದಲ್ಲಿ ಭಾರತದ ವೈವಿಧ್ಯತೆ ಹಾಗೂ ಬಹುತ್ವವಾದವನ್ನು ಎತ್ತಿಹಿಡಿಯುವ ತನ್ನ ಪ್ರಮುಖ ಹೊಣೆಗಾರಿಕೆಯನ್ನು ಅದು ಕೈಬಿಟ್ಟಂತಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ದೇಶದ ಜಾತ್ಯತೀತ ತಳಹದಿಯನ್ನು ಬಲಪಡಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಬೇಕೆಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು. ಕಾಂಗ್ರೆಸ್ ಪಕ್ಷವು ಒಳ್ಳೆಯ ಹೋರಾಟವನ್ನು ನೀಡುವಷ್ಟು ಕಾಲ ಭಾರತದ ಭವಿಷ್ಯವು ಉಜ್ವವಾಗಿರಲಿದೆ ಭಾರತ್ ಜೋಡೊ ಯಾತ್ರೆಯು ಪಕ್ಷದಕಾರ್ಯಕರ್ತರ ಆತ್ಮವಿಶ್ವಾಸಕ್ಕೆ ಮರುಚೈತನ್ಯವನ್ನು ತುಂಬಿದೆ ಎಂದರು.
ಅಧಿವೇಶನದ ಎರಡನೆ ದಿನದಂದು ಪಕ್ಷವು ಅಂಗೀಕರಿಸಿದ ಆರ್ಥಿಕತೆ ಕುರಿತಾದ ನಿರ್ಣಯದ ಬಗ್ಗೆ ಮಾತನಾಡಿದ ಅವರು, ಆರ್ಥಿಕ ಬೆಳವಣಿಗೆಯ ಪ್ರಯೋಜನಗಳು ಬಡವರು ಹಾಗೂ ಕಡೆಗಣಿಸಲ್ಪಟ್ಟವರಿಗೆ ತಲುಪುವುದನ್ನು ಖಾತರಿಪಡಿಸಬೇಕಾಗಿದೆ. ಭಾರತವು ಎಲ್ಲರ ಬದುಕನ್ನು ಬೆಳಗುವ ತನಕ ಅದು ಬೆಳಗಲಾರದು’’ ಎಂದು ತರೂರ್ ಪ್ರತಿಪಾದಿಸಿದರು.
ವಿದೇಶಾಂಗ ನೀತಿಯ ಬಗ್ಗೆ ಪ್ರಸ್ತಾವಿಸಿದ ಅವರು ಕಾಂಗ್ರೆಸ್ನ ವಿದೇಶಾಂಗ ನೀತಿ ಹಾಗೂ ಬಿಜೆಪಿಯ ವಿದೇಶಾಂಗ ನೀತಿ ಎಂಬುದಿಲ್ಲ. ಕೇವಲ ಭಾರತೀಯ ವಿದೇಶಾಂಗ ನೀತಿ ಹಾಗೂ ಭಾರತೀಯ ರಾಷ್ಟ್ರೀಯ ಹಿತಾಸಕ್ತಿ ಎಂಬುದಷ್ಟೇ ಇದೆ. ವಿಷಾದಕರವೆಂದರೆ ಈ ಪರಂಪರೆಯನ್ನು ನರೇಂದ್ರ ಮೋದಿ ಸರಕಾರವು ಕಡೆಗಣಿಸಿದೆ ಎಂದು ತರೂರ್ ತಿಳಿಸಿದರು.
ಚೀನಾದೊಂದಿಗಿನ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ಎಸಿ)ಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಸೇರಿದಂತೆ ವಿದೇಶಾಂಗಕ್ಕೆ ಸಂಬಂಧಿಸಿದ ಮಹತ್ವದ ವಿಷಯಗಳ ಬಗ್ಗೆ ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮೋದಿ ಸರಕಾರ ನಿರಾಕರಿಸುತ್ತಿದೆ ಎಂದು ತರೂರ್ ಟೀಕಿಸಿದರು.
‘‘ಚೀನಾವು ಎದುರು ಹಾಕಿಕೊಳ್ಳಲು ಸಾಧ್ಯವಾಗದಷ್ಟು ಭಾರೀ ಶ್ರೀಮಂತ ರಾಷ್ಟ್ರವಾಗಿದೆ ಎಂಬ ವಿದೇಶಾಂಗ ಸಚಿವರ ಅನಿಸಿಕೆಯನ್ನು ಕೇಳಿ ನನಗೆ ಆಘಾತವಾಯಿತು. ಈ ವಿಷಯದಲ್ಲಿ ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ನಾನು ಆಗ್ರಹಿಸುತ್ತೇನೆ. ನಮ್ಮ ಮಹತ್ವದ ವಿದೇಶಾಂಗ ನೀತಿಯ ಹಿತಾಸಕ್ತಿಗಳ ಬಗ್ಗೆ ಸರಕಾರದ ಏನೆಂದು ಯೋಚಿಸುತ್ತಿದೆ ಎಂಬುದನ್ನು ಇಡೀ ರಾಷ್ಟ್ರಕ್ಕೆ ತಿಳಿಸಬೇಕಾಗಿದೆ’’ ಎಂದು ತರೂರ್ ಹೇಳಿದರು.







