ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ 700 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾರ್ಯ: ನಳಿನ್ ಕುಮಾರ್ ಕಟೀಲು

ಮಂಗಳೂರು, ಫೆ.26: ಮಂಗಳೂರು ಮಹಾನಗರ ಪಾಲಿಕೆ ಅಭಿವೃದ್ಧಿಯತ್ತ ಸಾಗುತ್ತಿದೆ.ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರಿನಲ್ಲಿ 700 ಕೋಟಿ ರೂ. ವೆಚ್ಚದ ಕಾಮಗಾರಿ ಅನುಷ್ಟಾನಗೊಂಡಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಾಣಗೊಂಡ ಮಂಗಳಾ ಕ್ರೀಡಾಂಗಣದ ನೂತನ ಪೆವಿಲಿಯನ್ ನ್ನು ರವಿವಾರ ಉದ್ಘಾಟಿಸಿ ಮಾತನಾಡಿದರು.
2014ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಯ್ಕೆ ಮಾಡಿರುವ ನಗರಗಳನ್ನು ಸ್ಮಾರ್ಟ್ ಸಿಟಿಯಾಗಿ ಮಾಡುವ ಆಶಯ ವ್ಯಕ್ತಪಡಿಸಿದ್ದರು. ಹೀಗೆ ಆಯ್ಕೆಯಾಗಿರುವ ನಗರಗಳಲ್ಲಿ ಮಂಗಳೂರು ಕೂಡಾ ಒಂದು. ಇಲ್ಲಿಗೆ ಅಮೃತ ಮತ್ತು ಸ್ಮಾರ್ಟ್ ಯೋಜನೆಗಳು ಕೇಂದ್ರದ ಯೋಜನೆಗಳು ಬಂದಿವೆ ಎಂದರು.
ಮಂಗಳೂರು ಮಹಾನಗರ ಪಾಲಿಕೆ ಸ್ಮಾರ್ಟ್ ಯೋಜನೆಯಡಿ ಮೊದಲ ಹಂತದಲ್ಲಿ ಆಯ್ಕೆಯಾಗಿಲ್ಲವೆಂದು ಹಲವರಿಂದ ಟೀಕೆ ವ್ಯಕ್ತವಾಗಿತ್ತು. ಆದರೆ ಸ್ಮಾರ್ಟ್ ಸಿಟಿ ಯೋಜನೆ ಎರಡನೇ ಹಂತದಲ್ಲಿ ಮಂಜೂರಾದಾಗ ಹಿಂದೆ ಟೀಕಿಸಿದವರು ಸ್ಮಾರ್ಟ್ ಸಿಟಿಯನ್ನು ನಾವೇ ತಂದವರೆಂದು ಇದರ ಲಾಭ ಪಡೆಯಲು ಮುಂದಾದರು ಎಂದು ಕುಟುಕಿದರು.
ಆರಂಭದಲ್ಲಿ ಸ್ಮಾರ್ಟ್ ಯೋಜನೆಯ ಕಾಮಗಾರಿ ಮಹಾನಗರ ಪಾಲಿಕೆ ಮತ್ತು ರಾಜಕಾರಣಿಗಳ ಅಸಡ್ಡೆಯಿಂದಾಗಿ ನಿಧಾನವಾಗಿ ಸಾಗಿತು. ಡಿ.ವೇದವ್ಯಾಸ ಕಾಮತ್ ಶಾಸಕರಾದ ಬಳಿಕ ಈ ಯೋಜನೆಯ ಕಾಮಗಾರಿಯ ವೇಗ ಪಡೆದುಕೊಂಡಿತು. ಮಂಗಳೂರು ರಾಜ್ಯದ ಮೂರನೇ ನಗರವಾಗಿ ಪರಿವರ್ತನೆಯಾಗುತ್ತಿದೆ ಎಂದು ನುಡಿದರು.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್, ಮನಪಾ ಆಯುಕ್ತ ಚನ್ನಬಸಪ್ಪ, ಕರ್ನಾಟಕ ವಿದ್ಯುನ್ಮಾನ ಅಭಿವೃದ್ಧಿ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ ಉಪಸ್ಥಿತರಿದ್ದರು.