40 ಕೋಟಿ ರೂ., ಮಂತ್ರಿಗಿರಿ ಕೊಡುವುದಾಗಿ ಆಮಿಷವೊಡ್ಡಿದ್ದರೂ ನಾನು BJPಗೆ ಹೋಗಲಿಲ್ಲ: JDS ಶಾಸಕ ಕೆ.ಮಹದೇವ್ ಆರೋಪ

ಮೈಸೂರು: ನಾನು ಶಾಸಕನಾಗಿ ಆಯ್ಕೆಯಾದ ತಕ್ಷಣವೇ ಬಿಜೆಪಿಯವರು 40 ಕೋಟಿ ರೂ. ಹಣ ಮತ್ತು ಮಂತ್ರಿಗಿರಿ ಕೊಡುವುದಾಗಿ ಆಮಿಷ ಒಡ್ಡಿದ್ದರು. ಆದರೆ ನಾನು ಹೋಗಲಿಲ್ಲ ಎಂದು ಪಿರಿಯಾಪಟ್ಟಣದ ಜೆಡಿಎಸ್ ಶಾಸಕ ಕೆ.ಮಹದೇವ್ ಆರೋಪಿಸಿದ್ದಾರೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದ ಅವರು, ಹಣದ ಆಸೆಗಾಗಿ ರಾಮಕೃಷ್ಣ ಹೆಗ್ಗಡೆ ಅವರೊಂದಿಗೆ ಹೋಗಿ ಎಚ್.ಡಿ.ದೇವೇಗೌಡರಿಗೆ ಅನ್ಯಾಯ ಮಾಡಿದ್ದ ಕೆ.ವೆಂಕಟೇಶ್ ಈಗ ಭ್ರಷ್ಟಾಚಾರದ ವಿಚಾರದಲ್ಲಿ ಎಲ್ಲರಿಗೂ ಪಾಠ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಶಾಸಕ ಕೆ.ಮಹದೇವ್ ಅವರ ಪುತ್ರ ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಮಾತನಾಡಿ, ತಾಲೂಕಿಗೆ ನೀರು ತಂದ ಭಗೀರಥ ಎಂದು ಸುಳ್ಳು ಹೇಳಿಕೊಳ್ಳುತ್ತಿರುವ ಮಾಜಿ ಶಾಸಕ ಕೆ.ವೆಂಕಟೇಶ್, 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಾರಂಭಿಸಿ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಸಿಲ್ಲ. ಕೆ.ಮಹದೇವ್ ಶಾಸಕರಾದ ಮೇಲೆ ನೂರಾರು ಕೋಟಿ ಅನುದಾನ ತಂದು ಯೋಜನೆ ಜಾರಿಯಾಗುವಂತೆ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.
ಅಪ್ಪ ಮಕ್ಕಳು ಎಂದು ಟೀಕೆ ಮಾಡುವ ಮೊದಲು ನೀವು ಮಾಡಿರುವ ಅಭಿವೃದ್ಧಿಯನ್ನು ಜನರಿಗೆ ಹೇಳಿ ಮತ ಕೇಳಿ. ನಮ್ಮ ಮೇಲೆ ಅಪಪ್ರಚಾರ ಮಾಡುವುದು, ಜೆಡಿಎಸ್ ಕಾರ್ಯಕರ್ತರೆಲ್ಲಾ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿಸುವುದನ್ನು ಬಿಡಬೇಕು ಎಂದು ಸಲಹೆ ನೀಡಿದರು.








