ಕೊರಗರಿಗೆ ಒಳಮೀಸಲಾತಿಗಿಂತ ಪ್ರತ್ಯೇಕ ಮೀಸಲಾತಿ ಅಗತ್ಯ: ಜಯಪ್ರಕಾಶ್ ಹೆಗ್ಡೆ
ಉಡುಪಿ ಪುತ್ತೂರಿನಲ್ಲಿ ಆದಿವಾಸಿ ಸಮುದಾಯ ಭವನ ಉದ್ಘಾಟನೆ

ಉಡುಪಿ, ಫೆ.26: ಶಿಕ್ಷಣ ಹಾಗೂ ಉದ್ಯೋಗದಲ್ಲಿ ಕೊರಗ ಸಮುದಾಯದ ಮಕ್ಕಳು ಪರಿಶಿಷ್ಟ ಪಂಗಡದ ಇತರ ಮಕ್ಕಳ ಜೊತೆ ಕೂಡ ಸ್ಪರ್ಧೆ ಮಾಡಲು ಇಂದಿಗೂ ಆಗುತ್ತಿಲ್ಲ. ಆದುದರಿಂದ ಈ ಸಮುದಾಯಕ್ಕೆ ಒಳ ಮೀಸಲಾತಿಗಿಂತ ಪರಿಶಿಷ್ಟ ಪಂಗಡದಲ್ಲಿಯೇ ಪ್ರಾಚೀನ ಬುಡಕಟ್ಟು ಎಂಬುದಾಗಿ ಪ್ರತ್ಯೇಕ ಮಾಡಿ ಮೀಸಲಾತಿ ನೀಡಬೇಕಾಗಿದೆ. ಇದರಿಂದ ಕೊರಗ ಮಕ್ಕಳಿಗೆ ಹೆಚ್ಚಿನ ಅನುಕೂಲ ದೊರೆಯಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಉಡುಪಿ ನಗರಸಭೆ ಹಾಗೂ ಕೊರಗ ಸಂಘಟನೆಗಳ ಸಹಯೋಗದೊಂದಿಗೆ ಉಡುಪಿ ಪುತ್ತೂರಿನಲ್ಲಿ 3 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಆದಿವಾಸಿ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ರವಿವಾರ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕೊರಗ ಸಮುದಾಯ ಪರಿಶಿಷ್ಟ ಪಂಗಡದಲ್ಲಿದ್ದರೂ ಕಟ್ಟಕಡೆಯ ಸಮುದಾಯವಾಗಿ ಬಹಳಷ್ಟು ನೋವು ಅನುಭವಿಸಿದೆ. ಪರಿಶಿಷ್ಟ ಪಂಗಡದ ಹೆಚ್ಚಿನವರಿಗೆ ಈಗಾಗಲೇ ಶಿಕ್ಷಣ, ಉದ್ಯೋಗ ದೊರೆಕಿದೆ. ಆದರೆ ಇನ್ನು ಸರಿಯಾಗಿ ಮೀಸ ಲಾತಿ ಸೌಲಭ್ಯ ದೊರೆಯದ ಕೊರಗ ಸಮುದಾಯಕ್ಕೆ ಇನ್ನಷ್ಟು ಆದ್ಯತೆ ಕೊಡಬೇಕಾಗಿದೆ. ಸರಕಾರ ಈ ಬದಲಾವಣೆ ಬಗ್ಗೆ ತೀರ್ಮಾನ ಮಾಡಬೇಕು. ಅಲ್ಲದೆ ಇದರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಉಳಿದ ಸಮುದಾಯದವರು ಕೂಡ ಕೈಜೋಡಿಸಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಕೊರಗರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ. ಈ ಮೂಲಕ ಸಾಮಾನ್ಯ ಮಕ್ಕಳೊಂದಿಗೆ ಸ್ಪರ್ಧಿಸುವ ಮಟ್ಟಕ್ಕೆ ತಮ್ಮ ಮಕ್ಕಳನ್ನು ಬೆಳೆಸಬೇಕಾಗಿದೆ. ಪ್ರಾಥಮಿಕ ಹಂತದಲ್ಲಿಯೇ ಉತ್ತಮ ಶಿಕ್ಷಣ ಕೊಡುವ ವ್ಯವಸ್ಥೆ ಆಗದಿದ್ದರೆ ಪರಿಶಿಷ್ಟ ಪಂಗಡದ ಉಳಿದ ಸಮುದಾಯದೊಂದಿಗೆ ಕೊರಗ ಮಕ್ಕಳಿಗೆ ಸ್ಪರ್ಧೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅವರು ತಿಳಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ಮಾತನಾಡಿ, ಕೊರಗ ಸಮುದಾಯದವರು ತಮ್ಮ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ನೀಡಬೇಕು, ಜಿಲ್ಲೆಯಲ್ಲಿ ಆಶ್ರಮ ಶಾಲೆಗಳಲ್ಲಿ ಉಚಿತ ಊಟ ವಸತಿಯೊಂದಿಗೆ ಉತ್ತಮ ಶಿಕ್ಷಣ ಸೌಲಭ್ಯಗಳಿದ್ದು, ತಮ್ಮ ಮಕ್ಕಳನ್ನು ಅಲ್ಲಿಗೆ ಸೇರ್ಪಡೆ ಮಾಡಬೇಕು. ಸಮುದಾಯದ ಸಮಗ್ರ ಅಧ್ಯಯನ ಕುರಿತಂತೆ ಸಮೀಕ್ಷೆ ನಡೆಸಲಾಗುತ್ತಿದ್ದು, ಇವರ ಸಮಗ್ರ ಶ್ರೇಯೋಭಿವೃದ್ದಿಗೆ ಜಿಲ್ಲಾಡಳಿತ ಬದ್ದವಾಗಿದೆ ಎಂದರು.
ಸಮುದಾಯ ಭವನವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಉದ್ಘಾಟಿಸಿ ದರು. ಇದೇ ಸಂದರ್ಭದಲ್ಲಿ ಕೊರಗ ಸಮುದಾಯದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಹಾಯಧನದ ಚೆಕ್ ಗಳನ್ನು ಶಾಸಕರು ವಿತರಿಸಿದರು. ಅಧ್ಯಕ್ಷತೆಯನ್ನು ಉಡುಪಿ ನಗರಸಭೆ ಅಧ್ಯಕ್ಷೆ ಸಮಿತ್ರಾ ನಾಯಕ್ ವಹಿಸಿದ್ದರು.
ಕುಂದಾಪುರ ಪುರಸಭೆ ಸದಸ್ಯ ಪ್ರಭಾಕರ್, ಉಡುಪಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ರಮೇಶ್, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಹಾಯಕ ಇಂಜಿನಿಯರ್ ರಾಮು ವೈ.ಎಚ್., ಕುಂದಾಪುರ ಪುರಸಭೆ ಸದಸ್ಯ ಪ್ರಭಾಕರ್, ಕೊರಗ ಸಮುದಾಯುದ ಮುಖಂಡರಾದ ಬಾಬು ಪಾಂಗಾಳ, ಬೊಗ್ರ ಕೊರಗ, ಸಂಜೀವ ಕೊರಗ, ಸುಶೀಲ ನಾಡ, ಗೌರಿ ಕೊರಗ, ಗಣೇಶ್ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ದಿ ಯೋಜನೆಯ ಯೋಜನಾ ಸಮನ್ವಯಾಧಿ ಕಾರಿ ದೂದ್‌ಪೀರ್ ಪಿ. ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.
‘ಕೊರಗ ಸಮುದಾಯಕ್ಕೆ ಸಂಬಂಧಿಸಿ ಮುಹಮ್ಮದ್ ಪೀರ್ ಸಮಿತಿ ನೀಡಿದ ಹೆಚ್ಚಿನ ಸಲಹೆಗಳು ಈಗಾಗಲೇ ಜಾರಿ ಬಂದಿವೆ. ಆದರೆ ಭೂಮಿ ಮಾತ್ರ ಎಲ್ಲ ಕೊರಗ ಕುಟುಂಬಗಳಿಗೆ ದೊರೆತಿಲ್ಲ. ಆದುದರಿಂದ ಜಿಲ್ಲಾಧಿಕಾರಿಗಳ ಜೊತೆ ಮಾತುಕತೆ ನಡೆಸಿ ಇನ್ನು ಹೆಚ್ಚಿನ ಕಡೆಗಳಲ್ಲಿ ಭೂಮಿಯನ್ನು ಗುರುತಿಸಿ, ಅರ್ಹ ಫಲಾನುಭವಿಗಳಿಗೆ ಭೂಮಿ ವಿತರಿಸುವ ಕಾರ್ಯ ಮಾಡಬೇಕಾಗಿದೆ’
-ಕೆ.ಜಯಪ್ರಕಾಶ್ ಹೆಗ್ಡೆ, ಅಧ್ಯಕ್ಷರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ
ಸಮುದಾಯ ಭವನದಲ್ಲಿ ಲೋಪದೋಷ: ತರಾಟೆ
ನೂತನ ಆದಿವಾಸಿ ಸಮುದಾಯ ಭವನದಲ್ಲಿನ ಲೋಪದೋಷಗಳ ಬಗ್ಗೆ ಕಾರ್ಯಕ್ರಮದ ವೇದಿಕೆಯಲ್ಲಿಯೇ ಇಂಜಿನಿಯರ್‌ರನ್ನು ತರಾಟೆಗೆ ತೆಗೆದು ಕೊಂಡ ಶಾಸಕ ಕೆ.ರಘುಪತಿ ಭಟ್, ಮೂರು ತಿಂಗಳೊಳಗೆ ಇಲ್ಲಿನ ಎಲ್ಲ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಬೇಕೆಂದು ತಾಕೀತು ಮಾಡಿದರು.
ಸಮುದಾಯ ಭವನದಲ್ಲಿ ಸೌಂಡ್ ಸಿಸ್ಟಮ್ ಸರಿಯಾಗಿಲ್ಲ. ಇದರಿಂದ ಮುಂದೆ ನಡೆಯುವ ವಿಚಾರಗೋಷ್ಠಿ, ಸಭೆಗಳಲ್ಲಿ ಸಭಿಕರಿಗೆ ಕೇಳದ ಪರಿಸ್ಥಿತಿ ಎದುರಾಗಬಹುದು. ಅದೇ ರೀತಿ ಫ್ಯಾನ್ ಕೂಡ ಸಣ್ಣದಾಗಿ ಅಳವಡಿಸಲಾಗಿದೆ. ಈ ಎಲ್ಲ ತಾಂತ್ರಿಕ ಸಮಸ್ಯೆಗಳನ್ನು ಇಲಾಖೆಯಿಂದ ಅನುದಾನ ತರಿಸಿಕೊಂಡು ಸರಿಪಡಿಸ ಬೇಕು ಎಂದು ಶಾಸಕ ರಘುಪತಿ ಭಟ್ ವೇದಿಕೆ ಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಮು ವೈ.ಎಚ್. ಅವರನ್ನು ತರಾಟೆಗೆ ತೆಗೆದುಕೊಂಡರು.
ಕೊರಗ ಪಾರ್ಕ್ ಸ್ಥಾಪನೆಗೆ ಒತ್ತಾಯ:
ಇಡೀ ಕೊರಗ ಸಮುದಾಯ ಉಳಿಯಬೇಕಾದರೆ ಕೊರಗರ ಕೆಲವೊಂದು ಅಸ್ಮಿತೆಯನ್ನು ನಾವು ಸ್ಥಾಪನೆ ಮಾಡಬೇಕಾಗಿದೆ. ಅದರಲ್ಲಿ ಮುಖ್ಯವಾಗಿ ಥೀಮ್ ಪಾರ್ಕ್ ಮಾದರಿಯಲ್ಲಿ ಸುಮಾರು 30-40 ಎಕರೆ ಜಾಗದಲ್ಲಿ ಕೊರಗ ಪಾರ್ಕ್ ನಿರ್ಮಾಣ ಮಾಡಬೇಕು. ಅದರಲ್ಲಿ ಕಾಡು, ಕೊರಗರ ಕುಟುಂಬಗಳ ವಾಸ, ತರಬೇತಿ ಕೇಂದ್ರಗಳು, ಕೊರಗರ ಬಗ್ಗೆ ಅಧ್ಯಯನ ಮಾಡುವಂತಹ ಪುಸ್ತಕ, ಪ್ರಾಚೀನ ಪರೀಕಗಳು. ಗ್ರಂಥಾಲಯಗಳು ಇರಬೇಕು. ಈ ಬಗ್ಗೆ ಸರಕಾರ ಗಂಭೀರವಾಗಿ ಚಿಂತನೆ ಮಾಡಬೇಕು ಎಂದು ಕೊರಗ ಭಾಷಾ ತಜ್ಞ ಬಾಬು ಪಾಂಗಾಳ ತಿಳಿಸಿದರು.
ಕೊರಗರ ಕುಲದೈವ ಕೊರಗ ತನಿಯವೇ ಹೊರತು ಕೊರಗ ಅಜ್ಜ ಅಲ್ಲ. ಕೊರಗ ತನಿಯರ ಮೂಲಸ್ಥಾನ ಕುತ್ತಾರು ಅಲ್ಲ. ಬಾರಕೂರಿನಲ್ಲಿರುವ ಕೊರ್ರೆಪಾಡಿ ಕೊರಗ ತನಿಯರ ಜನ್ಮಸ್ಥಳವಾಗಿದೆ. ಇದು ಇಂದಿನ ಕೂರಾಡಿ ಆಗಿರ ಬಹುದು ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕು. ಮುಂದೆ ಈ ಸ್ಥಳವನ್ನು ಗುರುತಿಸಿ ಅಭಿವೃದ್ಧಿ ಪಡಿಸಿ ಶಾಶ್ವತವಾಗಿ ಉಳಿಯುವಂತೆ ಮಾಡಬೇಕು ಎಂದರು.







