ಬಜೆಟ್‌ನಲ್ಲಿನ ಹಸಿರು ಬೆಳವಣಿಗೆ ಪರಿಸರ ಸವಾಲು ಎದುರಿಸಲು ಸಾಲಾದು: ಡಾ.ರೆಸ್ಮಿ

ಮಣಿಪಾಲ, ಫೆ.26: ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಲಾದ ಯೂನಿಯನ್ ಬಜೆಟ್, ಪರಿಸರ ಅರ್ಥಶಾಸ್ತ್ರದ ದೃಷ್ಟಿಕೋನದಿಂದ ವಿಶ್ಲೇಷಿಸಿದಾಗ ನಿರೀಕ್ಷೆಗಳಿಗಿಂತ ಕಡಿಮೆಯಾಗಿದೆ. ಬಜೆಟ್‌ನಲ್ಲಿ ಭರವಸೆ ನೀಡಿರುವ ಹಸಿರು ಬೆಳವಣಿಗೆ ಸದ್ಯದ ಪರಿಸರಕ್ಕೆ ಒದಗಿರುವ ಸವಾಲುಗಳನ್ನು ಎದುರಿಸಲು ಸಾಕಾಗುವುದಿಲ್ಲ ಎಂದು ಅರ್ಥಶಾಸ್ತ್ರಜ್ಞೆ ಮತ್ತು ಲೇಖಕಿ ಡಾ.ರೆಸ್ಮಿ ಭಾಸ್ಕರನ್ ಅಭಿಪ್ರಾಯಪಟ್ಟಿದ್ದಾರೆ.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಆಶ್ರಯದಲ್ಲಿ ಕೇಂದ್ರ ಬಜೆಟ್ ಮತ್ತು ಪರಿಸರ ಅರ್ಥಶಾಸ್ತ್ರದ ಕುರಿತು ಅವರು ಉಪನ್ಯಾಸ ನೀಡಿದರು.
ಹಸಿರು ಬೆಳವಣಿಗೆಯ ಭಾಗವಾಗಿ ಶಕ್ತಿ ಪರಿವರ್ತನೆ ಮತ್ತು ಹಸಿರು ಕ್ರೆಡಿಟ್ ಕಾರ್ಯಕ್ರಮದಂತಹ ಕ್ರಮಗಳು ಸದ್ಯದ ಪರಿಸರದ ಸವಾಲುಗಳನ್ನು ಪರಿಹರಿಸಲು ಸಾಲದು ಎಂದರು.
ಅದಕ್ಕೂ ಮಿಗಿಲಾಗಿ ಕೇವಲ ಬೆಳವಣಿಗೆಯನ್ನು ದೃಷ್ಟಿಯಲ್ಲಿಕೊಂಡ ಪರಿಹಾರಗಳು ಅಸಮಾನತೆಯನ್ನು ತೊಡೆದು ಹಾಕುವುದಿಲ್ಲ. ಬಜೆಟ್ ವೈಯಕ್ತಿಕ ಆದಾಯ ಅಥವಾ ಪ್ರಾದೇಶಿಕ ಅಸಮತೋಲನವನ್ನು ಒಳಗೊಂಡು ಎಲ್ಲಾ ರೀತಿಯ ಅಸಮಾನತೆಗಳನ್ನು ತೆಗೆದುಹಾಕುವ ಗುರಿಯನ್ನು ಹೊಂದಿರಬೇಕು. ಅಭಿವೃದ್ಧಿಯು ಬೆಳವಣಿಗೆಗಿಂತ ಭಿನ್ನವಾದದ್ದು. ನಿಜ ಅರ್ಥದಲ್ಲಿ ಇದು ಪ್ರಾಥಮಿಕ ವಿವಿಧ ಮಾನವ ಅಭಿವೃದ್ಧಿ ಸೂಚ್ಯಂಕಗಳ ಮೇಲೆ ಕೇಂದ್ರೀಕೃತವಾಗಿ ರಬೇಕು ಎಂದು ಅವರು ತಿಳಿಸಿದರು.
ಬಜೆಟ್ ಬೆಳವಣಿಗೆಯೊಂದಿಗೆ ಅಭಿವೃದ್ಧಿಯ ಪರಿಕಲ್ಪನೆಯನ್ನು ತಪ್ಪಾಗಿ ಅರ್ಥೈಸಿಕೊಂಡರೆ ಕೇವಲ ಬೆಳವಣಿಗೆಯ ಮೇಲೆ ಹೆಚ್ಚು ಮತ್ತು ಅಭಿವೃದ್ಧಿಯ ಮೇಲೆ ಕಡಿಮೆ ಗಮನಹರಿಸುತ್ತದೆ ಮತ್ತು ನಿರೀಕ್ಷೆಗಳನ್ನು ಹುಸಿಮಾಡುತ್ತದೆ. ಕೇವಲ ಬೆಳವಣಿಗೆಯು ಸಾಮಾಜಿಕ ನ್ಯಾಯವನ್ನು ಖಾತರಿಪಡಿಸುವುದಿಲ್ಲ ಮತ್ತು ಹಸಿರು ಬೆಳವಣಿಗೆ ಕೂಡ ಇದಕ್ಕೆ ಹೊರತಾಗಿಲ್ಲ ಎಂದು ಅವರು ಹೇಳಿದರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಪರಿಸರ ಅರ್ಥಶಾಸ್ತ್ರವು ಈ ಕಾಲದ ಅಗತ್ಯವಾಗಿದ್ದು, ಇದು ಸರ್ವೋದಯ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರದ ಕಾಳಜಿಯನ್ನು ಒಳಗೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಮಾಹೆಯ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಡಾ.ವಿಕ್ರಂ ಬಾಳಿಗಾ, ಡಾ.ಅಂಬಿಗೈ ಹಾಗೂ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.







