ರಾಷ್ಟ್ರೀಯ ಡ್ರ್ಯಾಗನ್ ಬೋಟ್ ಚಾಂಪಿಯನ್‌ಷಿಪ್: ಕರ್ನಾಟಕಕ್ಕೆ ಸಮಗ್ರ ಚಾಂಪಿಯನ್ ಪ್ರಶಸ್ತಿ
ದಿಲ್ಲಿ ತಂಡ ರನ್ನರ್ ಅಪ್

ಬ್ರಹ್ಮಾವರ, ಫೆ.26: ಇಲ್ಲಿನ ಹೇರೂರು ಸೇತುವೆ ಬಳಿ ಮಡಿಸಾಲು ನದಿಯಲ್ಲಿ ರವಿವಾರ ಮುಕ್ತಾಯಗೊಂಡ 11ನೇ ರಾಷ್ಟ್ರೀಯ ಡ್ರ್ಯಾಗನ್ ಬೋಟ್ ಚಾಂಪಿಯನ್ ಶಿಪ್‌ನಲ್ಲಿ ಅತಿಥೇಯ ಕರ್ನಾಟಕ ತಂಡ ಸಮಗ್ರ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿತು. ದಿಲ್ಲಿ ತಂಡ ರನ್ನರ್ ಅಪ್ ಬಹುಮಾನ ಪಡೆಯಿತು.
ಇಂದು ನಡೆದ ಕೊನೆಯ ದಿನದ ಸ್ಪರ್ಧೆಗಳಲ್ಲಿ ಕರ್ನಾಟಕ ಪುರುಷರ ತಂಡಗಳು 200ಮೀ.ನ ಡಿ-20 ಮತ್ತು ಡಿ-10 ಸ್ಪರ್ಧೆಗಳಲ್ಲಿ ಮೊದಲಿಗರಾಗಿ ಗುರಿ ಮುಟ್ಟಿ ಚಿನ್ನದ ಪದಕಗಳನ್ನು ಗೆದ್ದು ಕೊಂಡವು. ಅಲ್ಲದೇ ಅತಿಥೇಯ ತಂಡ 2 ಕಂಚಿನ ಪದಕವನ್ನು ಗೆಲ್ಲುವಲ್ಲಿ ಸಫಲವಾಯಿತು.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಯಾಕಿಂಗ್ ಮತ್ತು ಕನೂಯಿಂಗ್ ಅಸೋಸಿಯೇಶನ್ ಸಹಯೋಗದೊಂದಿಗೆ ನಡೆದ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಸಂಸದ ಹಾಗೂ ಬಿ.ಜೆ.ಪಿ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಬಹುಮಾನ ವಿತರಿಸಿದರು.
ಉಡುಪಿ ಶಾಸಕ ರಘುಪತಿ ಭಟ್, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಜಿಲ್ಲಾಧಿಕಾರಿ ಕೂರ್ಮಾ ರಾವ್, ಭಾರತೀಯ ಕಯಾಕಿಂಗ್ ಮತ್ತು ಕನೂಯಿಂಗ್ ಅಸೋಸಿಯೇಷನ್ ಅಧ್ಯಕ್ಷ ಪ್ರಶಾಂತ್ ಕುಶ್ವಾಹಾ, ಕರ್ನಾಟಕದ ಅಧ್ಯಕ್ಷ ಎಂ.ಎನ್.ದೇವಯ್ಯ, ಕಾರ್ಯದರ್ಶಿ ದಿಲೀಪ್ ಕುಮಾರ್, ಡ್ರ್ಯಾಗನ್ ಬೋಟ್ ರಾಷ್ಟ್ರೀಯ ತಂಡದ ನಾಯಕ ಮಂಜೀತ್ ಸಿಂಗ್, ಕರ್ನಾಟಕ ಕಯಾಕಿಂಗ್ ಮತ್ತು ಕನೋಯಿಂಗ್ ಅಸೀಸಿಯೇಶನ್‌ನ ಅಧ್ಯಕ್ಷ ಮೇಜರ್ ಎಂ.ಎನ್.ದೇವಯ್ಯ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಸ್ಪರ್ಧೆಯ ಸ್ವಾಗತ ಸಮಿತಿಯ ಅಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿ, ದಿನಕರ ಶೆಟ್ಟಿ ಅಂಪಾರು ಮತ್ತಿತರರು ಉಪಸ್ಥಿತರಿದ್ದರು.
ದೇಶದ ಒಟ್ಟು 16ರಾಜ್ಯಗಳ 566 ಸ್ಪರ್ಧಿಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.








.jpeg)

.jpeg)


