ಪುತ್ತಿಗೆಯಲ್ಲಿ 'ನಮ್ಮೂರ ಮಸೀದಿ ನೋಡ ಬನ್ನಿ' ವಿಶಿಷ್ಟ ಕಾರ್ಯಕ್ರಮ
ನೂರಾನಿ ಮಸೀದಿಯ ನೂತನ ಕಟ್ಟಡ ಲೋಕಾರ್ಪಣೆ: ಊರಿನ ಸರ್ವಧರ್ಮೀಯರಿಗೆ ಸಂಭ್ರಮ

ಮಂಗಳೂರು, ಫೆ.26: ಮೂಡುಬಿದಿರೆ ಪಳಕಳ ಪುತ್ತಿಗೆಯ ನೂರಾನಿ ಮಸೀದಿ ಕಟ್ಟಡ ನವೀಕೃತಗೊಂಡ ಪ್ರಯುಕ್ತ ಸರ್ವ ಧರ್ಮೀಯರು ಮಸೀದಿ ಸಂದರ್ಶಿಸುವ 'ನಮ್ಮೂರ ಮಸೀದಿ ನೋಡಬನ್ನಿ' ಕಾರ್ಯಕ್ರಮ ಮಸೀದಿ ವಠಾರದಲ್ಲಿ ರವಿವಾರ ಬೆಳಗ್ಗೆ ನಡೆಯಿತು.
ಸಮಾರಂಭವನ್ನು ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಿಸುವ ಮೂಲಕ ಉದ್ಘಾಟಿಸಿ, ಸೌಹಾರ್ದ ಸಂದೇಶ ನೀಡಿದ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇಸ್ಥಾನದ ಪ್ರಧಾನ ಅರ್ಚಕರಾದ ಈಶ್ವರ ಭಟ್ ಅವರು, ದೇವರೊಬ್ಬನೆ. ದೇವರು ಎಂದರೆ ಒಂದು ಚೈತನ್ಯ ಶಕ್ತಿ. ಆ ಶಕ್ತಿಯನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಿದರೆ ಎಲ್ಲಾ ಕಾರ್ಯಗಳಲ್ಲೂ ಗೆಲುವು ಖಂಡಿತ. ವ್ಯಕ್ತಿಯನ್ನು ಆತನ ಜಾತಿ, ಧರ್ಮದ ಜೊತೆ ಗುರುತಿಸುವ ಬದಲು ಆತನ ಪ್ರಮಾಣಿಕತೆಯ ಜೊತೆ ಗುರುತಿಸಬೇಕು. ದೇವರ ಕಾರ್ಯಗಳಿಗೆ ಪ್ರಾಮಾಣಿಕತೆ ಮುಖ್ಯ ಎಂದರು.
ಜಾತಿ, ಧರ್ಮ, ಪಂಥ, ಕೋಮು ಗಲಭೆಗಳೆಲ್ಲವನ್ನೂ ಮೀರಿ ಪ್ರೀತಿ, ಸೌಹಾರ್ದಯುತ ಜೀವನ ನಡೆಸುತ್ತಾ ಆ ಮೂಲಕ ಶಾಂತಿ, ಸೌಹಾರ್ದಯುತ ಭಾರತ ನಿರ್ಮಾಣಕ್ಕೆ ಅಡಿ ಇಡಬೇಕೆಂದು ಅವರು ಕರೆ ನೀಡಿದರು.
ಬಳಿಕ ಮಾತನಾಡಿದ ಪಕ್ಷಿಕೆರೆ ಸಂತ ಜೂದರ ಧರ್ಮ ಕೇಂದ್ರದ ಪ್ರಧಾನ ಧರ್ಮಗುರುಗಳಾದ ಸ್ವಾಮಿ ಮೆಲ್ವಿನ್ ನೊರೊನ್ಹಾ, ಸೌಹಾರ್ದ ಸಮಾಜ ನಿರ್ಮಾಣಕ್ಕಾಗಿ ಸರ್ವ ಧರ್ಮೀಯರು ಅವರ ಧಾರ್ಮಿಕ ಆಚಾರಗಳ ಮೂಲಕ ಶ್ರಮ ವಹಿಸಬೇಕು. ಕೆಲವರು ತಮ್ಮ ಸ್ವಾರ್ಥ ಸಾಧನೆಗಾಗಿ ಜಾತಿ, ಧರ್ಮಗಳ ಮಧ್ಯೆ ಎತ್ತಿಕಟ್ಟಿ ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತಿದ್ದಾರೆ. ಅಂತವರನ್ನು ಪ್ರಥಮವಾಗಿ ಗುರುತಿಸುವ ಕೆಲಸವಾಗಬೇಕು. ಬಳಿಕ ಅವರು ಸನ್ಮಾರ್ಗದತ್ತ ಬರುವಂತಾಗಲೆಂದು ಅವರಿಗಾಗಿ ದೇವರನ್ನು ಪ್ರಾರ್ಥಿಸಬೇಕು ಎಂದರು.
ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕದಡುತ್ತಿರುವ ಬೆರಳೆಣಿಕೆಯ ಜನರಿಗೆ ನಾವು ಸೌಹಾರ್ದದ ಮೂಲಕ ಪಾಠ ಕಲಿಸಬೇಕು ಎಂದು ಸೌಹಾರ್ದ ಸಂದೇಶ ನೀಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮುಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಯಾವುದೇ ಜಾತಿ, ಧರ್ಮದಲ್ಲಿ ಹುಟ್ಟಿದರೂ ಎಲ್ಲಕಿಂತಲೂ ಮೇಲು ಮನುಷ್ಯ ಧರ್ಮ. ಜಾತಿ, ಧರ್ಮಕ್ಕಿಂತಲೂ ಮೊದಲು ಮನುಷ್ಯತ್ವ ಇರಬೇಕು. ಅನ್ಯರಿಗೆ ಉಪಕಾರ ಮಾಡದಿದ್ದರೂ ಚಿಂತೆ ಇಲ್ಲ. ಅನ್ಯಾಯ, ಅಪಚಾರ ಮಾಡದೇ ಬದುಕುವುದು ಮುಖ್ಯ. ನನ್ನ ಅಧಿಕಾರಾವಧಿಯ ನಾಲ್ಕು ಮುಕ್ಕಾಲು ವರ್ಷಗಳಲ್ಲಿ ಜಾತಿ, ಧರ್ಮ ಎಲ್ಲವನ್ನೂ ಮಟ್ಟಿನಿಂತು ಎಲ್ಲರನ್ನೂ ಮನುಷ್ಯರಾಗಿ ಗುರುತಿಸಿ, ಎಲ್ಲರನ್ನೂ ಒಂದಾಗಿಸಿಕೊಂಡು ಮುನ್ನಡೆಸಿದ್ದೇನೆ ಎಂಬುವುದು ನನಗೆ ಸಂತೋಷ ತಂದಿದೆ. ಗ್ರಾಮ ಪಂಚಾಯತ್‌ನಿಂದ ಹಿಡಿದು ತಾಲೂಕು, ಜಿಲ್ಲೆ, ಶಾಸಕ, ಸಂಸದ ಎಲ್ಲರೂ ಮಾನವೀಯತೆಯಿಂದ ಕೆಲಸ ಮಾಡಬೇಕಾಗಿರುವುದು ಜನಪ್ರತಿನಿಧಿಯಾಗಿ ಆತನ ಧರ್ಮ. ದೇವರು ಎಂದರೆ ನಂಬಿಕೆ. ಧರ್ಮಗಳಿಗೆ ಅನುಗುಣವಾಗಿ ದೇವರನ್ನು ಪೂಜಿಸುತ್ತೇವೆ. ಪೂಜಿಸುವ ವಿಧಾನಗಳು ಬದಲಾಗಿದ್ದರೂ ದೇವರು ಒಬ್ಬನೇ ಎಂದು ನುಡಿದರು.
ಜಿಲ್ಲೆಯಲ್ಲಿ ಕೋಮು ಭಾವನೆ ಪಸರಿಸುತ್ತಿರುವಾಗ ಮೂಡುಬಿದಿರೆ ಪಳಕಳ ಪುತ್ತಿಗೆಯ ನೂರಾನಿ ಮಸೀದಿ ಕಟ್ಟಡ ನವೀಕೃತಗೊಂಡ ಪ್ರಯುಕ್ತ ಸರ್ವ ಧರ್ಮೀಯರಿಗೆ ಮಸೀದಿ ಸಂದರ್ಶಿಸುವ ʼನಮ್ಮೂರ ಮಸೀದಿ ನೋಡಬನ್ನಿʼ ಕಾರ್ಯಕ್ರಮವು ಸಹೋದರ ಭಾವನೆ ಮುಂದುವರಿಸಲು ಮಸೀದಿ ಸಮಿತಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಅಭಿನಂದಿಸಿದರು.
ಮೂಡುಬಿದಿರೆ ಮತ್ತು ಭಟ್ಕಳದಲ್ಲಿ ಮುಸ್ಲಿಂ ಸಮುದಾಯ ಜೈನ ಧರ್ಮದ ಆಶಯಗಳನ್ನೂ ಪಾಲಿಸುತ್ತಿವೆ. ಮುಸ್ಲಿಮ್ ಸಮುದಾಯದ ಕೆಲವೊಂದು ಹಿರಿಯರು ಈಗಲೂ ಜೈನ ಸಮುದಾಯದವರಂತೆ ಸಂಜೆ 6ರ ಬಳಿಕ ಊಟೋಪಚಾರವನ್ನು ಮಾಡುವುದಿಲ್ಲ. ಇದು ಇಸ್ಲಾಂ ಮತ್ತು ಜೈನ ಧರ್ಮದ ಸಮ್ಮಿಲನದ ಸಂಕೇತವಾಗಿದೆ. ಮುಸ್ಲಿಮ್ ದೇಶಗಳಲ್ಲಿ ಎಲ್ಲಾ ಜಾತಿ, ಧರ್ಮದ ಜನರು ಉದ್ಯೋಗ ನಿಮಿತ್ತ ಅಥವಾ ಕಾರ್ಯಕ್ರಮ ನಿಮಿತ್ತ ಹೋದರೂ ಅಲ್ಲಿ ಧರ್ಮಗಳನ್ನು ಸಮಾನ ದೃಷ್ಠಿಯಿಂದ, ಸಹೋದರ ಭಾವದಿಂದಲೇ ಕಾಣುತ್ತಾರೆ. ಇದು ಸಹೋದರೆತೆಯ ಕೊಂಡಿ ಎಂದು ಅಭಯಚಂದ್ರ ಜೈನ್ ನುಡಿದರು.
ದೇವರನ್ನು ನಂಬುವವರೆಲ್ಲಾ ದೇವರನ್ನು ನೆನಪಿಟ್ಟುಕೊಳ್ಳಬೇಕೆಂದಿಲ್ಲ. ದೇವರನ್ನು ನೆನಪಿನಲ್ಲಿಟ್ಟುಕೊಳ್ಳಲು ಪ್ರತೀ ದಿನ ಐದು ಹೊತ್ತು ನಮಾಝ್ ನಿರ್ವಹಿಸಲಾಗುತ್ತದೆ. ಪ್ರವಾದಿ ಮುಹಮ್ಮದ್ (ಸ.ಅ) ಅವರು ಮದೀನದಲ್ಲಿ ನಿರ್ಮಿಸಿದ ಪ್ರಥಮ ಮಸೀದಿ ಕೇವಲ ಆರಾಧನೆಗೆ ಮಾತ್ರ ಸೀಮಿತವಾಗಿರಲಿಲ್ಲ. ಬದಲಾಗಿ ಸಮಾಜಕ್ಕೆ ಮಾರ್ಗದರ್ಶನ ನೀಡುವ ಸ್ಥಳವಾಗಿತ್ತು. ಸಮಾಜದ ಪ್ರತೀ ವ್ಯಕ್ತಿಯ ಸಮಸ್ಯೆಗಳನ್ನು ಗುರುತಿಸಿ ಬಗೆಹರಿಸುವ ಕೇಂದ್ರವಾಗಿತ್ತು. ಪ್ರವಾದಿ ಮುಹಮ್ಮದ್ (ಸ.ಅ) ಮಸೀದಿಗೆ ಬರುತ್ತಿದ್ದವರ ಕ್ಷೇಮ ವಿಚಾರಿಸುತ್ತಿದ್ದರು. ಜೊತೆಗೆ ಮಸೀದಿಗೆ ಬರುವ ಎಲ್ಲರ ಅಗತ್ಯಗಳನ್ನು ತನ್ನಲ್ಲಿ ಸಾಧ್ಯವಾದಷ್ಟು ಪೂರ್ತಿಗೊಳಿಸುತ್ತಿದ್ದರು. ಮದೀನ ಮಸೀದಿಯಲ್ಲಿ ಸರ್ವ ಧರ್ಮದ ಹಸಿದವರಿಗೆ ತಕ್ಕ ಮಟ್ಟಿನ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗುತ್ತಿತ್ತು.
ಮಸೀದಿಗಳಲ್ಲಿ ದೇವರಿಗೆ ಸಂಬಂಧಿಸಿ ವಿಚಾರಗಳನ್ನು ಹೇಳಿಕೊಡಲಾಗುತ್ತದೆ. ದೇವರು ನಿರಾಕಾರ, ಏಕ ಕಾಲದಲ್ಲಿ ಎಲ್ಲವನ್ನೂ ನೋಡುತ್ತಿರುವವನು, ದೇವರು ಎಂದರೆ ಮನುಷ್ಯನ ಅಪೇಕ್ಷೆಗಳನ್ನು ಈಡೇರಿಸಲು ಮಾತ್ರ ಇರುವವನಲ್ಲ. ನಿಮ್ಮ ಚಾರಿತ್ರ್ಯವನ್ನು ವೀಕ್ಷಿಸುವವನೂ ಆಗಿದ್ದಾನೆ. ಮಸೀದಿಗಳಲ್ಲಿ ಮೀಸಲಾತಿ ಎಂಬುವುದಿಲ್ಲ. ಎಷ್ಟೇ ದೊಡ್ಡ ಶ್ರೀಮಂತನಾಗಿದ್ದರೂ ಸರಿ ಮಸೀದಿಗೆ ಮೊದಲು ಬಂದರೆ ಮೊದಲ ಸಾಲಿನಲ್ಲಿ ಸ್ಥಳ ಇರುತ್ತದೆ. ಕೊನೇಗೆ ಬಂದರೆ ಕೊನೇಯ ಸಾಲಿನಲ್ಲೇ ನಿಲ್ಲಬೇಕು. ಮಸೀದಿಗಳಲ್ಲಿ ಯಾವುದೇ ರೀತಿಯ ತಾರತಮ್ಯಗಳಿಲ್ಲ. ಯಾವುದೇ ಜಾತಿ, ಯಾವುದೇ ಧರ್ಮದವರೂ ಮಸೀದಿಗೆ ಬರಬಹುದು. ಮಹಿಳೆಯರಿಗೂ ಮಸೀದಿಗಳಲ್ಲಿ ಪ್ರತ್ಯೇಕ ಸ್ಥಳಾವಕಾಶಗಳಿರುತ್ತದೆ. ಪ್ರತೀ ಸಲ ಮಸೀದಿಗೆ ಹೋದಾಗಳೂ ಅಲ್ಲಿರುವ ಎಲ್ಲರಿಗೂ ಆತನ ಸಾಮಾಜಿಕ, ಧಾರ್ಮಿಕ ಮತ್ತು ಕೌಟುಂಬಿಕ ಕರ್ತವ್ಯಗಳನ್ನು ನೆನಪಿಸಲಾಗುತ್ತದೆ. ಇದು ಮಸೀದಿಯ ಪೂರ್ಣರೂಪವಾಗಿರುತ್ತದೆ ಎಂದು ʼವಾರ್ತಾಭಾರತಿʼ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಅವರು ಸೌಹಾರ್ದ ಸಂದೇಶ ನೀಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ, ಸರ್ವ ಧರ್ಮಗಳು, ಅವುಗಳ ಪವಿತ್ರ ಗ್ರಂಥಗಳೂ ಸೌಹಾರ್ದವನ್ನೇ ಭೋದಿಸುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಜಾತಿ ಧರ್ಮಗಳ ನಡುವೆ ವಿಷಬೀಜ ಬಿತ್ತಿ ಘರ್ಷಣೆಗಳನ್ನು ಮಾಡುವ ಕೆಲಸಗಳನ್ನು ಮಾಡಲಾಗುತ್ತಿದೆ. ವಿಷ ಬೀಜ ಬಿತ್ತುತ್ತಿರುವವರಿಗೆ ನೂರಾನಿ ಮಸೀದಿ ನೀಡುತ್ತಿರುವ ಸೌಹಾರ್ದದ ಸಂದೇಶವನ್ನು ಮನವರಿಕೆ ಮಾಡಿಸಬೇಕಾದ ಅನಿವಾರ್ಯತೆ ಇದೆ. ಈ ಕೆಲಸಗಳು ಎಲ್ಲಿಯವರೆಗೆ ಆಗುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಜಿಲ್ಲೆಯಲ್ಲಿ ಜಾತಿ, ಧರ್ಮಗಳ ನಡುವಿನ ಒಡಕುಗಳನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುತ್ತಿಗೆ ನೂರಾನಿ ಜುಮಾ ಮಸೀದಿಯ ಅಧ್ಯಕ್ಷ ಅಬುಲ್ ಅಲಾ ಪುತ್ತಿಗೆ ಅವರು ಊರಿನ ಸೌಹಾರ್ದ ಪರಂಪರೆಯನ್ನು ಸ್ಮರಿಸಿದರು. ಈ ಮಸೀದಿ ಕೇವಲ ನಮಾಝ್ ನಿರ್ವಹಿಸಲು ಮಾತ್ರ ಸೀಮಿತವಾಗಿರದೆ, ಊರಿನ ಸರ್ವಧರ್ಮೀಯರ ಕಷ್ಟ ಸುಖಗಳಿಗೂ ಸಹಕಾರಿಯಾಗಲಿದೆ. ಜೊತೆಗೆ ಮಸೀದಿಯ ವತಿಯಿಂದಲೇ ಶುಭಸಮಾರಂಭದ ಸಭಾಂಗಣವನ್ನು ನಿರ್ಮಾಣ ಮಾಡುವ ಯೋಜನೆ ಇದ್ದು, ಇದನ್ನೂ ಸರ್ವ ಧರ್ಮೀಯರ ಉಪಯೋಗಕ್ಕೆ ನೀಡಲಾಗುವುದು. ಅದರೊಂದಿಗೆ ಊರಿನವರ ಕಷ್ಟ, ಸುಖದಲ್ಲಿ ಭಾಗಿಗಳಾಗುವ ಉದ್ದೇಶದಿಂದ ಕಚೇರಿ ಆರಂಭಿಸಲಾಗುವುದು. ಈ ಕಚೇರಿಯಲ್ಲಿ ಸರಕಾರದ ಯೋಜನೆಗಳ ಮಾಹಿತಿ, ರಕ್ತದಾನ ಶಿಬಿರಗಳು, ಉಚಿತ ವೈದ್ಯಕೀಯ ಸೇವೆಗಳು ಸಹಿತ ಮಸೀದಿಯಲ್ಲಿ ಧಾರ್ಮಿಕತೆಯೊಂದಿಗೆ ಸಾಮಾಜಿಕ ಸೇವೆಗಳನ್ನೂ ಮಾಡಲಾಗುವುದು. ಸರ್ವಧರ್ಮೀಯರೂ ಇದರ ಸದುಪಯೋಗ ಪಡೆಯಬೇಕೆಂದು ಅವರು ನುಡಿದರು.
ಇದೇ ಸಂದರ್ಭ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾ ಆರ್ಥಿಕವಾಗಿ ಹಿಂದುಳಿದಿರುವ ಮುಹಮ್ಮದ್ ಶರಾಸ್, ಜಯಂತಿ ಮತ್ತು ಸ್ಟಾನಿ ಪ್ರಕಾಶ್ ಡಿಸೋಜ ಎಂಬವರಿಗೆ ಸಹಾಯ ಧನದ ಚೆಕ್ ವಿತರಿಸಲಾಯಿತು. ಅಲ್ಲದೆ, ಮಸೀದಿಯ ಕಟ್ಟಡ ಕಾರ್ಮಿಕನಾಗಿ ದುಡಿದಿದ್ದ ಉತ್ತರ ಪ್ರದೇಶ ಮೂಲದ ಅಂಗವಿಕಲ ಕಾರ್ಮಿಕ ರಾಮ್ ಜನಮ್ ಎಂಬವರಿಗೆ ನಡೆದಾಡಲು ಸಹಾಯವಾಗುವ ಸಾಧನ, ಮಸೀದಿಯ ಕೆಲಸ ಆರಂಭದಿಂದ ಕೊನೇಯವರೆಗೆ ಪ್ರಾಮಾಣಿಕವಾಗಿ ದುಡಿದ ಆನಂದ ಪುತ್ತಿಗೆ ಎಂಬವರಿಗೆ ಮಸೀದಿ ಆಡಳಿತ ಸಮಿತಿ ಸೈಕಲ್ ಅನ್ನು ಉಡುಗೊರೆಯಾಗಿ ನೀಡಿತು. ಅಲ್ಲದೆ, ಮಸೀದಿ ಕಟ್ಟಡ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ ಎಲ್ಲಾ ಕಾರ್ಮಿಕರನ್ನು ಗುರುತಿಸಿ ಉಡುಗೊರೆಗಳನ್ನು ನೀಡಲಾಯಿತು.
ಸಮಾರಂಭದಲ್ಲಿ ಪುತ್ತಿಗೆ ನೂರಾನಿ ಮಸೀದಿಯ ಖತೀಬ್, ಇಮಾಮ್ ಮೌಲಾನಾ ಝಿಯಾವುಲ್ಲಾ ಖಾನ್, ಪಳಕಳ ಮಿತ್ರ ಮಂಡಳಿ ಅಧ್ಯಕ್ಷರಾದ ರವಿಶಂಕರ್ ಭಟ್, ನೂರಾನಿ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಖಯ್ಯೂಮ್, ಪುತ್ತಿಗೆ ಗ್ರಾಪಂ ಸದಸ್ಯ ಮುಹಮ್ಮದ್ ಶರೀಫ್ ಮೊದಲಾದವರು ಉಪಸ್ಥಿತರಿದ್ದರು.
ನೂರಾನಿ ಮಸೀದಿಯ ಸದಸ್ಯ ಶೈಖ್ ಇಕ್ಬಾಲ್ ಸ್ವಾಗತಿಸಿದರು. ಅಲ್ ಫುರ್ಖಾನ್ ವಿದ್ಯಾಸಂಸ್ಥೆಯ ಉಪನ್ಯಾಸಕ ಮುಹಮ್ಮದ್ ಮುಫೀಝ್ ಕಾರ್ಯಕ್ರಮ ನಿರೂಪಣೆಗೈದರು. ನೂರಾನಿ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಖಯ್ಯೂಮ್ ವಂದಿಸಿದರು.
ಪುತ್ತಿಗೆ ಹಾಗೂ ಮೂಡುಬಿದಿರೆಯ ಸಾವಿರಾರು ಸರ್ವಧರ್ಮೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಸೀದಿ ವೀಕ್ಷಿಸಿ ಶುಭ ಹಾರೈಸಿದರು.
"ಮಾಜಿ ಸಚಿವರಾದ ಅಭಯಚಂದ್ರ ಜೈನ್ ಅವರು ಅವರಿಗೆ ಸಾಧ್ಯವಿದ್ದಷ್ಟು ಅಭಿವೃದ್ಧಿಪಡಿಸಿದ್ದಾರೆ. ಉಳಿದ ಕೆಲಸಗಳನ್ನು ನಾನು ಮಾಡುತ್ತಿದ್ದೇನೆ. ಅವರ ಮಾತುಗಳನ್ನು ಸಲಹೆಯಂತೆ ಸ್ವೀಕರಿಸುತ್ತೇನೆ. ಮುಲ್ಕಿ-ಮೂಡುಬಿದಿರೆಯನ್ನು ರಾಜ್ಯದಲ್ಲೀ ಒಂದು ಮಾದರಿ ತಾಲೂಕು ಆಗಿ ಮಾಡಬೇಕೆಂಬ ಹಂಬಲದೊಂದಿಗೆ ಕೆಲಸ ಮಾಡುತ್ತಿದ್ದೇನೆ. ಎಲ್ಲಾ ಮೂಲಭೂತ ಸೌಲಭ್ಯಗಳನ್ನು ತಾಲೂಕಿಗೆ ನೀಡಬೇಕೆಂದು ಎಲ್ಲ ರೀತಿಯಲ್ಲೂ ಕ್ರಮವಹಿಸಲಾಗುವುದು".
- ಉಮಾನಾಥ ಕೋಟ್ಯಾನ್, ಮುಲ್ಕಿ - ಮೂಡಬಿದಿರೆ ಕ್ಷೇತ್ರ ಶಾಸಕ






.jpeg)

.jpeg)



.jpeg)



.jpeg)
.jpeg)
.jpeg)

.jpeg)


