ರಂಗಭೂಮಿಯಲ್ಲಿ ಪ್ರಭುತ್ವಕ್ಕೆ ಜೈಕಾರ ಹಾಕಿದರೆ ಕಲೆ ನಾಶ: ಸಿ.ಬಸವಲಿಂಗಯ್ಯ
ಸುಮನಸಾ ಕೊಡವೂರು ರಂಗಹಬ್ಬ ಉದ್ಘಾಟನೆ

ಉಡುಪಿ: ರಂಗಭೂಮಿಯಲ್ಲಿ ರಾಜಕೀಯವನ್ನು ವಸ್ತುವಾಗಿ ಇಟ್ಟು ಕೊಂಡು ನಾಟಕ ಮಾಡಬೇಕು. ಆದರೆ ರಾಜಕೀಯ ಮಾಡಬಾರದು. ರಂಗಾ ಯಣವೂ ಸೇರಿದಂತೆ ರಂಗಭೂಮಿಯಲ್ಲಿ ಕೆಲಸ ಮಾಡುವವರು ಪ್ರಭುತ್ವಕ್ಕೆ ಜೈಕಾರ ಹಾಕಿದರೆ ಕಲೆ ನಶಿಸುತ್ತದೆ ಎಂದು ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಹೇಳಿದ್ದಾರೆ.
ಸಾಂಸ್ಕೃತಿಕ ಸಂಘಟನೆ ಸುಮನಸಾ ಕೊಡವೂರು ವತಿಯಿಂದ ಅಜ್ಜರಕಾಡು ಬಯಲು ರಂಗ ಮಂದಿರದಲ್ಲಿ ಹಮ್ಮಿಕೊಂಡಿರುವ ರಂಗಹಬ್ಬವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ರಂಗಭೂಮಿ ವ್ಯವಸ್ಥೆಯ ಪ್ರತಿರೋಧ. ಅದನ್ನು ಬಿಟ್ಟು ಯಾರ ಬಗ್ಗೆಯೋ ಭಜನೆ ಮಾಡಲು ಹೊರಟರೆ ರಂಗಭೂಮಿ ಉಳಿಯುವುದಿಲ್ಲ. ನೀತಿ ಬೋಧನೆ, ಧರ್ಮಬೋಧನೆ ರಂಗಭೂಮಿಯ ಕೆಲಸವಲ್ಲ. ಆ ಕೆಲಸ ಮಾಡಲು ಬೇರೆ ಯವರು ಇದ್ದಾರೆ. ಮನಸ್ಸುಗಳನ್ನು ಅರಳಿಸುವ ಕೆಲಸವನ್ನು ರಂಗಭೂಮಿ ಮಾಡಬೇಕು. ಮನಸ್ಸನ್ನು ಕೆಡಿಸುವ ಕೆಲಸವನ್ನು ಮಾಡಬಾರದು ಎಂದರು.
ಅದ್ಭುತ ನಾಟಕಗಳು ಹುಟ್ಟುವುದೇ ದುರಿತ ಕಾಲದಲ್ಲಿ. ಸಮಾಜವು ಸಂಕಷ್ಟದಲ್ಲಿ ಇದ್ದಾಗ ಉತ್ತಮ ನಾಟಕಗಳು ಹೊರಹೊಮ್ಮುತ್ತವೆ. ಸದ್ಯದ ಕಾಲ ನೋಡಿದಾಗ ಅಂಥ ನಾಟಕಗಳು ಬರುವ ಅವಶ್ಯಕತೆ ಇದೆ ಎಂದ ಅವರು, ಭಾರತೀಯರಾದ ನಾವು ಎಂದು ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿದೆ. ಅದು ಬದಲಾಗಿ ಹಿಂದೂಗಳಾದ ನಾವು, ಮುಸ್ಲಿಮರಾದ ನಾವು, ಕ್ರಿಶ್ಚಿಯನ್ನರಾದ ನಾವು ಎಂದಾದರೆ ಸಂವಿಧಾನ ಎಕ್ಕುಟ್ಟಿ ಹೋಗುತ್ತದೆ. ನಾವು ಬಹುತ್ವದ ಭಾರತವನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲಾವಿದ ತೋನ್ಸೆ ವಿಜಯಕುಮಾರ್ ಅವರಿಗೆ ರಂಗ ಸನ್ಮಾನ ನೆರವೇರಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿದರು.
ಉದ್ಯಮಿಗಳಾದ ಆನಂದ ಪಿ. ಸುವರ್ಣ, ಹರಿಯಪ್ಪಕೋಟ್ಯಾನ್, ದಿವಾಕರ ಸನಿಲ್, ಸುಮನಸಾ ಗೌರವಾಧ್ಯಕ್ಷ ಎಂ.ಎಸ್.ಭಟ್, ಸಂಚಾಲಕ ಭಾಸ್ಕರ ಪಾಲನ್ ಉಪಸ್ಥಿತರಿದ್ದರು. ಸುಮನಸಾ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ವಂದಿಸಿ ದರು. ನಾಗೇಶ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನವೋದಯ ಮೈಸೂರು ತಂಡದಿಂದ ಅರಣ್ಯಕಾಂಡ ನಾಟಕ ಪ್ರದರ್ಶನಗೊಂಡಿತು.







