ನಾಸಿರ್-ಜುನೈದ್ ಹತ್ಯೆ: ಪ್ರತಿಭಟನೆಗಳ ಬಳಿಕ ಹರ್ಯಾಣದ ನುಹ್ ಜಿಲ್ಲೆಯಲ್ಲಿ ಅಂತರ್ಜಾಲ, SMS ಸೇವೆ ಮೂರು ದಿನ ಸ್ಥಗಿತ

ಗುರುಗ್ರಾಮ: ಭಿವಾನಿ ಜೋಡಿಹತ್ಯೆಗಳ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಎರಡು ದಿನಗಳ ಹಿಂದೆ ನುಹ್ ಜಿಲ್ಲೆಯ ಫಿರೋಝ್ಪುರ ಜಿರ್ಖಾದಲ್ಲಿ ನಡೆದಿದ್ದ ಪ್ರತಿಭಟನೆಗಳು ಮತ್ತು ಗುರ್ಗಾಂವ್-ಆಲ್ವಾರ್ ಹೆದ್ದಾರಿ ತಡೆಯ ಹಿನ್ನೆಲೆಯಲ್ಲಿ ಹರ್ಯಾಣ ಸರಕಾರವು ರವಿವಾರದಿಂದ ಜಿಲ್ಲೆಯಾದ್ಯಂತ ಮೊಬೈಲ್ ಇಂಟರ್ನೆಟ್, ಎಲ್ಲ ಎಸ್ಎಂಎಸ್ ಸೇವೆಗಳು ಮತ್ತು ಮೊಬೈಲ್ ನೆಟ್ವರ್ಕ್ ಗಳು ಒದಗಿಸಿರುವ ಡೊಂಗಲ್ ಸೇವೆಗಳನ್ನು ಅಮಾನತುಗೊಳಿಸಿದ್ದು, ಇದು ಫೆ.28ರಂದು ಮಧ್ಯರಾತ್ರಿಯವರೆಗೆ ಜಾರಿಯಲ್ಲಿರುತ್ತದೆ.
ಕೋಮು ಉದ್ವಿಗ್ನತೆ ಮತ್ತು ಸಾರ್ವಜನಿಕ ಶಾಂತಿಭಂಗ ಸಾಧ್ಯತೆಯ ಹಿನ್ನೆಲೆಯಲ್ಲಿ ವಾಟ್ಸ್ಆ್ಯಪ್, ಫೇಸ್ಬುಕ್, ಟ್ವಿಟರ್ ನಂತಹ ವಿವಿಧ ಸಾಮಾಜಿಕ ಮಾಧ್ಯಮಗಳು ಮತ್ತು ಎಸ್ಎಂಎಸ್ ಗಳ ಮೂಲಕ ಮೊಬೈಲ್ ಫೋನ್ ಗಳಲ್ಲಿ ಅಪಪ್ರಚಾರ ಮತ್ತು ವದಂತಿಗಳ ಹರಡುವಿಕೆಯನ್ನು ತಡೆಯಲು ತಾತ್ಕಾಲಿಕ ನಿಷೇಧವನ್ನು ಹೇರಲಾಗಿದೆ ಎಂದು ಸರಕಾರದ ಅಧಿಕೃತ ವಕ್ತಾರರೋರ್ವರು ತಿಳಿಸಿದರು.
ರಾಜಸ್ಥಾನದ ಭರತಪುರ ಜಿಲ್ಲೆಯ ನಿವಾಸಿಗಳಾದ ನಾಸಿರ್ ಮತ್ತು ಜುನೈದ್ ಹತ್ಯೆಗಳ ಹಿನ್ನೆಲೆಯಲ್ಲಿ ನುಹ್ ಜಿಲ್ಲೆಯಲ್ಲಿ ಪ್ರತಿಭಟನೆಗಳು ನಡೆದಿದ್ದವು.
ಫೆ.15ರಂದು ನಾಪತ್ತೆಯಾಗಿದ್ದ ಅವರಿಬ್ಬರ ಬೆಂದು ಕರಕಲಾಗಿದ್ದ ಶವಗಳು ಮರುದಿನ ಹರ್ಯಾಣದ ಭಿವಾನಿ ಜಿಲ್ಲೆಯ ಲೋಹಾರು ಎಂಬಲ್ಲಿ ಸುಟ್ಟ ವಾಹನವೊಂದರಲ್ಲಿ ಪತ್ತೆಯಾಗಿದ್ದವು. ಬಜರಂಗ ದಳದ ಸದಸ್ಯರು ಈ ಹತ್ಯೆಗಳನ್ನು ನಡೆಸಿದ್ದಾರೆ ಎಂದು ಮೃತರ ಕುಟುಂಬ ಸದಸ್ಯರು ಎಫ್ಐಆರ್ನಲ್ಲಿ ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಿರುವ ರಾಜಸ್ಥಾನ ಪೊಲೀಸರು, ಬಜರಂಗ ದಳದ ನಾಯಕ ಮೋನು ಮನೇಸರ್ ಸೇರಿದಂತೆ ಇತರ ಎಂಟು ಜನರನ್ನು ಆರೋಪಿಗಳನ್ನಾಗಿ ಹೆಸರಿಸಿದ್ದಾರೆ.
ಶುಕ್ರವಾರ ಫಿರೋಝ್ಪುರ ಜಿರ್ಖಾದಲ್ಲಿ ನಡೆದಿದ್ದ ಪ್ರತಿಭಟನೆಗಳ ಸಂದರ್ಭ ಹೆದ್ದಾರಿಯನ್ನು ತಡೆದಿದ್ದಕ್ಕಾಗಿ ನುಹ್ ಪೊಲೀಸರು 500-600 ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.







