ಸಾರ್ವಜನಿಕರ ವಿಶ್ವಾಸಗಳಿಸಿದರೆ ಪೊಲೀಸರಿಗೆ ಉತ್ತಮವಾಗಿ ಸೇವೆ ಸಲ್ಲಿಸಲು ಸಾಧ್ಯ: ಎನ್.ಶಶಿಕುಮಾರ್
ಮಂಗಳೂರು ನಗರ ಪೊಲೀಸರಿಂದ ಬೀಳ್ಕೊಡುಗೆ ಸಮಾರಂಭ

ಮಂಗಳೂರು: ಮಂಗಳೂರಿನ ಜನರು ಕಾನೂನನ್ನು ಗೌರವಿಸುತ್ತಾರೆ ಹಾಗೂ ಪೊಲೀಸರ ಕರ್ತವ್ಯದಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲ. ಸಾರ್ವಜನಿಕರ ವಿಶ್ವಾಸಗಳಿಸಿದರೆ ಪೊಲೀಸರಿಗೆ ಉತ್ತಮ ಸೇವೆ ನೀಡಲು ಸಾಧ್ಯ ಎಂದು ಮಂಗಳೂರಿನ ನಿರ್ಗಮನ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದ್ದಾರೆ.
ಕಳೆದ ಎರಡು ವರ್ಷಗಳಿಂದ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿ ಇದೀಗ ರೈಲ್ವೆ ಡಿಐಜಿಯಾಗಿ ವರ್ಗಾವಣೆಗೊಂಡಿರುವ ಎನ್. ಶಶಿಕುಮಾರ್ ಅವರಿಗೆ ರವಿವಾರ ಮಂಗಳೂರು ನಗರ ಪೊಲೀಸ್ ಇಲಾಖೆಯ ವತಿಯಿಂದ ಪುರಭವನದಲ್ಲಿ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಮತ್ತು ನೂತನ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ಅವರಿಗೆ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ಮಂಗಳೂರಿನ ಜನರು ಯಾವತ್ತೂ ಶಾಂತಿ ಬಯಸುತ್ತಾರೆ. ಎಲ್ಲ ರಂಗಗಳಲ್ಲೂ ಬೆಳೆದಿರುವ ಮಂಗಳೂರಿಗೆ ಕೋಮು ಸೂಕ್ಷ್ಮ ಪ್ರದೇಶವೆಂಬ ಹಣೆ ಪಟ್ಟಿ ಇದೆ. ಇದು ಸರಿ ಅಲ್ಲ. ಇದು ಬದಲಾಗಬೇಕು. ನನಗೆ ಇಲ್ಲಿಗೆ ಬರುವಾಗ ಅದೇ ರೀತಿಯ ತಪ್ಪು ತಿಳಿವಳಿಕೆ ಇತ್ತು. ಆದರೆ ಇಲ್ಲಿಗೆ ಬಂದಾಗ ಮಂಗಳೂರಿನವರು ತುಂಬಾ ಒಳ್ಳೆಯವರು ಎಂದು ಗೊತ್ತಾಯಿತು. ಸುದೀರ್ಘ ಸೇವೆ ಸಲ್ಲಿಸಲು ಇಲ್ಲಿನ ಜನತೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಮುಂದೆ ಅವಕಾಶ ಸಿಕ್ಕಿದರೆ ಮತ್ತೆ ಸೇವೆ ಸಲ್ಲಿಸುವೆನು ಎಂದು ಅವರು ಹೇಳಿದರು.
ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್. ಅವರು ಮಾತನಾಡಿ, ಶಶಿಕುಮಾರ್ ಅವರು ಸ್ನೇಹ ಸಂಬಂಧಕ್ಕೆ ವಿಶೇಷ ಗೌರವ ನೀಡುವ ವ್ಯಕ್ತಿ. ದಕ್ಷ ಮಾತ್ರವಲ್ಲದೆ ಜನಪ್ರಿಯ ಅಧಿಕಾರಿಯೂ ಆಗಿದ್ದಾರೆ ಎಂದು ಹೇಳಿದರು.
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಅವರು ಮಾತನಾಡಿ, ಶಶಿಕುಮಾರ್ ಎಲ್ಲರೊಂದಿಗೂ ಬೆರೆಯುವ ವ್ಯಕ್ತಿತ್ವ ಹೊಂದಿದ್ದಾರೆ ಆದರೆ ಶಿಕ್ಷಾರ್ಹರಿಗೆ ಕಠಿನ ಶಿಕ್ಷೆ ನೀಡುವ ಅಧಿಕಾರಿ ಎಂದು ಬಣ್ಣಿಸಿದರು.
ನೂತನ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅವರನ್ನು ಸ್ವಾಗತಿಸಲಾಯಿತು. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ಮಂಗಳೂರು ಪಾಲಿಕೆ ಆಯುಕ್ತ ಚೆನ್ನಬಸಪ್ಪ, ಅನಘ ರಿಫೈನರೀಸ್‌ನ ಎಂ.ಡಿ ಸಾಂಬಶಿವ ರಾವ್ ಉಪಸ್ಥಿತರಿದ್ದರು.
ಡಿಸಿಪಿ ಬಿಪಿ ದಿನೇಶ್ ಕುಮಾರ್ ಸ್ವಾಗತಿಸಿದರು. ಎಸಿಪಿ ಮಹೇಶ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.