ಮಹಿಳಾ ಟಿ-ಟ್ವೆಂಟಿ ವಿಶ್ವಕಪ್: ದಾಖಲೆಯ ಆರನೇ ಬಾರಿ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾ
ದಕ್ಷಿಣ ಆಫ್ರಿಕಾ ವಿರುದ್ಧ 19 ರನ್ ಗಳ ಜಯ

ಕೇಪ್‌ಟೌನ್, ಫೆ. 26: ಐಸಿಸಿ ಮಹಿಳಾ ಟ್ವೆಂಟಿ20 ವಿಶ್ವಕಪ್ ಫೈನಲ್‌ನಲ್ಲಿ ರವಿವಾರ ದಕ್ಷಿಣ ಆಫ್ರಿಕವನ್ನು 19 ರನ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯವು, ಆರನೇ ಬಾರಿಗೆ ಪ್ರಶಸ್ತಿಯನ್ನು ಎತ್ತಿದೆ.
ಆರಂಭಿಕ ಬ್ಯಾಟರ್ ಬೆತ್ ಮೂನಿ ಅವರ ಅಬ್ಬರದ ಬ್ಯಾಟಿಂಗ್ ಮತ್ತು ಬಳಿಕ ಇಡೀ ಬೌಲಿಂಗ್ ಘಟಕದ ಬಿಗು ಬೌಲಿಂಗ್ ದಾಳಿ ನೆರವಿನಿಂದ ಆಸ್ಟ್ರೇಲಿಯಕ್ಕೆ ಈ ಜಯವನ್ನು ಸಾಧಿಸಲು ಸಾಧ್ಯವಾಯಿತು. ಮೂನಿ 53 ಎಸೆತಗಳಲ್ಲಿ 74 ರನ್‌ಗಳನ್ನು ಸಿಡಿಸಿ ಅಜೇಯರಾಗಿ ಉಳಿದು ತಂಡದ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.
ಗೆಲ್ಲಲು 157 ರನ್‌ಗಳನ್ನು ಗಳಿಸುವ ಗುರಿಯನ್ನು ಪಡೆದ ದಕ್ಷಿಣ ಆಫ್ರಿಕಕ್ಕೆ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 137 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ವಿಜಯಕ್ಕೆ ಕೊನೆಯ ಓವರ್‌ನಲ್ಲಿ 27 ರನ್ ಗಳಿಸುವ ಅನಿವಾರ್ಯತೆ ದಕ್ಷಿಣ ಆಫ್ರಿಕ್ಕಕೆ ಉಂಟಾಗಿತ್ತು. ಆದರೆ ಅದಕ್ಕೆ 7 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.
ಆರಂಭಿಕ ಬ್ಯಾಟರ್ ಲಾರಾ ವೊಲ್ವಾರ್ಟ್ 48 ಎಸೆತಗಳಲ್ಲಿ 61 ರನ್ ಗಳಿಸಿ ಉತ್ತಮ ಆರಂಭ ನೀಡಿದರಾದರೂ, ಉಳಿದ ಆಟಗಾರ್ತಿಯರಿಂದ ಅವರಿಗೆ ಬೆಂಬಲ ಸಿಗಲಿಲ್ಲ. ಕ್ಲೋ ಟ್ರಯಾನ್ (25) ತಂಡದ ಇನ್ನೋರ್ವ ಪ್ರಮುಖ ದೇಣಿಗೆದಾರರಾದರು. ಇದಕ್ಕೂ ಮೊದಲು, ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 156 ರನ್‌ಗಳನ್ನು ಗಳಿಸಿತು.
ಆರಂಭಿಕರಾದ ಅಲೈಸಾ ಹೀಲಿ (18) ಮತ್ತು ಬೆತ್ ಮೂನಿ (74) ಉತ್ತಮ ಆರಂಭ ನೀಡಿದರು. ಬಳಿಕ ಆ್ಯಶ್ಲೇ ಗಾರ್ಡನರ್ 21 ಎಸೆತಗಳಲ್ಲಿ 29 ರನ್‌ಗಳನ್ನು ಸಿಡಿಸಿದರು. ನಾಯಕಿ ಮೆಗ್ ಲ್ಯಾನಿಂಗ್ 10 ರನ್‌ಗಳ ದೇಣಿಗೆ ನೀಡಿದರು. ಈ ಹಿಂದೆ ಆಸ್ಟ್ರೇಲಿಯ ಮಹಿಳೆಯರು 2010, 2012, 2014, 2018 ಮತ್ತು 2020ರಲ್ಲಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.