ತೃಪ್ತಿಯಿಂದ ಮಾತ್ರ ದುರಾಸೆಯನ್ನು ಮಟ್ಟ ಹಾಕಲು ಸಾಧ್ಯ- ಜಸ್ಟೀಸ್ ಸಂತೋಷ್ ಹೆಗ್ಡೆ

ಪುತ್ತೂರು: ಮಹಾತ್ಮ ಗಾಂಧೀಜಿ ಅವರು ಅಹಿಂಸೆಯಿಂದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಂಡಿದ್ದರು. ಇದೀಗ ದುರಾಸೆಯ ಕಾರಣಗಳಿಂದ ಭ್ರಷ್ಟಾಚಾರ ಹೆಚ್ಚಾಗಿದೆ ಹಾಗೂ ಸೌಹಾರ್ಧತೆಗೆ ತೊಡಕಾರಿ ಪರಿಣಮಿಸಿದೆ ದುರಾಸೆಯನ್ನು ಹೋಗಲಾಡಿಸಲು ಮಹಾತ್ಮ ಗಾಂಧೀಜಿ ಅವರು ಸೂಚಿಸಿದ ತೃಪ್ತಿ ಎಂಬ ಔಷಧಿಯಿಂದ ಮಾತ್ರ ಸಾಧ್ಯವಿದೆ ಎಂದು ನಿವೃತ್ತ ಲೋಕಾಯುಕ್ತ ಜಸ್ಟೀಸ್ ಎನ್.ಸಂತೋಷ್ ಹೆಗ್ಡೆ ಹೇಳಿದರು.
ಅವರು ರವಿವಾರ ನಗರದ ಜೈನ ಭವನದಲ್ಲಿ ಪುತ್ತೂರು ಗಾಂಧಿ ವಿಚಾರ ವೇದಿಕೆ ಹಾಗೂ ಮಂಗಳೂರು ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ನಡೆದ `ಕರ್ನಾಟಕದ ಇಂದಿನ ಅಗತ್ಯತೆಗಳು' ಕುರಿತ ಜನಸಂವಾದ ಕಾರ್ಯಕ್ರಮದಲ್ಲಿ `ಭಷ್ಟಾಚಾರ ನಿಯಂತ್ರಣ ಮತ್ತು ದಕ್ಷ ಆಡಳಿತ' ಕುರಿತು ಮಾತನಾಡಿದರು.
ಹಿಂದೆ ರಾಜಕೀಯ ನಿಜವಾದ ಜನಸೇವೆಯಲ್ಲಿ ತೊಡಗಿಕೊಂಡಿತ್ತು. ಇದೀಗ ದುರಾಸೆ ವಿಚಾರದಲ್ಲಿ ರಾಜಕೀಯ ಮೇಲುಗೈ ಸಾಧಿಸಿದೆ. ಧರ್ಮ ಮತ್ತು ಭಾಷೆ ದುರ್ಬಳಕೆಯ ವಸ್ತುವಾಗುತ್ತಿದೆ. ಪ್ರಸ್ತುತ ರಾಜಕೀಯದಲ್ಲಿ ನೈಜ ಜನಸೇವೆ ಆಗುತ್ತಿದೆಯೇ ಎಂಬುದು ಪ್ರಶ್ನಾರ್ಹವಾಗಿದೆ. ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆಯಿದ್ದು, ಮಕ್ಕಳಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಪ್ರಜಾಪ್ರಭುತ್ವದ ನೈಜ ಅರ್ಥವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದರು.
`ಸಾಮಾಜಿಕ ಅಗತ್ಯಗಳು' ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಅವರು ಪ್ರಸ್ತುತ ಪ್ರಗತಿಯ ಮಾನದಂಡಗಳಿಂದ ಆರೋಗ್ಯ ಕ್ಷೀಣಿಸುತ್ತಿದೆ. ಶಿಕ್ಷಣದ ಗುಣಮಟ್ಟದ ಮೇಲೆ ಕೆಟ್ಟ ಪರಿಣಾಮಗಳು ಬೀರುತ್ತಿವೆ. ಸಾಮಾಜಿಕವಾಗಿ ಇದನ್ನು ಸರಿಮಾಡಬೇಕಾಗಿದೆ. ಸಾಮಾಜಿಕ ವ್ಯವಸ್ಥೆಯ ಮೌಲ್ಯ ದುಡ್ಡಿನಿಂದ ಅಳೆಯಲಾಗುತ್ತಿದ್ದು, ಮೌಲ್ಯ ಕಳೆದುಕೊಳ್ಳುತ್ತಿದೆ. ಭಾಷೆ, ಧರ್ಮ, ಸಂ ತಿಯ ಕುರಿತು ವಿಚಾರ ಮಾಡಬೇಕಾದ ಈ ಸಂದರ್ಭದಲ್ಲಿ ಇದಕ್ಕೆ ತದ್ವಿರುದ್ಧವಾಗಿ ನಡೆಯುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದ ಅವರು, ಕರಾವಳಿಯ ಧಾರಣಾ ಶಕ್ತಿಯನ್ನು ಕಾಲಕಾಲಕ್ಕೆ ಆಧ್ಯಯನ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.
`ಯುವ ಜನತೆಯ ಅಗತ್ಯಗಳು' ಕುರಿತು ಮಾತನಾಡಿದ ಗಾಂಧಿ ವಿಚಾರ ವೇದಿಕೆಯ ವ್ಯವಸ್ಥಾಪಕ ಸದಸ್ಯ ಹಾಗೂ ವಿಜಯಪುರ ಚಾಣಕ್ಯ ಕರಿಯರ್ ಅಕಾಡೆಮಿಯ ನಿರ್ದೇಶಕ ಎನ್.ಎಂ.ಬಿರಾದಾರ ಅವರು ನಾಡಿನ ಭವಿಷ್ಯ ಯುವ ಜನತೆಯ ಕೈಯಲ್ಲಿದ್ದು, ಪ್ರಸ್ತುತ ಯುವಕ-ಯುವತಿಯರು ಯಾವ ಕಡೆ ವಾಲುತ್ತಿದ್ದಾರೆ ಎಂಬುದು ಪ್ರಶ್ನೆಯಾಗಿದೆ. ಮದ್ಯಪಾನ, ಡ್ರಗ್ಡ್ ಚಟಗಳಿಗೆ ಯುವಜನತೆ ಬಲಿ ಬೀಳುತ್ತಿದ್ದು, ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸುವಲ್ಲಿ ಪೆÇೀಷಕರು ವಿಫಲರಾಗಿದ್ದಾರೆ. ಸರಿಯಾದ ಮಾರ್ಗದರ್ಶನದ ಕೊರತೆ ದಾರಿ ತಪ್ಪಲು ಕಾರಣವಾಗಿದೆ. ಜತೆಗೆ ಆಲೋಚನೆಗಳ ಕೊರತೆಯಿಂದ ಕಲಿಕೆಯಲ್ಲಿ ಹಿಂದೆ ಬೀಳುವ ಪರಿಸ್ಥಿತಿ ಉಂಟಾಗಿದೆ. ಈ ದೃಷ್ಟಿಯಲ್ಲಿ ಉತ್ತಮ ಪ್ರಜೆ ಎನಿಸಬೇಕಾದರೆ ಯುವಕ-ಯುವತಿಯರ ದೃಷ್ಟಿ, ಕೈ, ಮನಸ್ಸು ಶುದ್ಧವಾಗಬೇಕಾದ ಅಗತ್ಯತೆಯಿದೆ ಎಂದ ಅವರು, ಗಾಂಧೀಜಿಗೆ ಸರಿಸಮಾನವಾದ ವ್ಯಕ್ತಿ ಇಡೀ ಜಗತ್ತಿನಲ್ಲಿ ಯಾರೂ ಇಲ್ಲ. ಆದರೂ ಗಾಂಧೀಜಿಯನ್ನು ವಿಚಾರ, ಆದರ್ಶದಲ್ಲಿ ಕಾಣುತ್ತಾರೆ ಹೊರತು ಸ್ವಾತಂತ್ರ್ಯದಲ್ಲಿ ಅಲ್ಲ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಚಿಂತಕ ವಿಲ್ಫ್ರೆಡ್ ಡಿಸೋಜಾ, ಗಾಂಧಿ ವಿಚಾರ ವೇದಿಕೆ ಮಾತೃ ಘಟಕದ ಅಧ್ಯಕ್ಷ ಶ್ರೀಧರ ಭಿಡೆ, ಮಂಗಳೂರು ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಇಸ್ಮಾಯಿಲ್ ಮಾತನಾಡಿ ದರು. ಈ ಸಂದರ್ಭದಲ್ಲಿ ಜಸ್ಟೀಸ್ ಎನ್ ಸಂತೋಷ್ ಹೆಗ್ಡೆ ಅವರು ಸಂವಾದ ನಡೆಸಿ ವಿದ್ಯಾರ್ಥಿಗಳು ಸೇರಿದಂತೆ ಹಲವಾರ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿ ಸಂಶಯಗಳನ್ನು ಪರಿಹರಿಸಿಕೊಟ್ಟರು.
ಪುತ್ತೂರು ಗಾಂಧಿ ವಿಚಾರ ವೇದಿಕೆ ಅಧ್ಯಕ್ಷ ಝೇವಿಯರ್ ಡಿ’ಸೋಜಾ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಅರವಿಂದ ಚೊಕ್ಕಾಡಿ, ಚಿನ್ಮಯ್ ಕೃಷ್ಣ, ಭಾಗ್ಯೇಶ್, ಚಂದ್ರಹಾಸ ರೈ ಮತ್ತಿತರರು ಉಪಸ್ಥಿತರಿದ್ದರು.
ಮಾತೃ ಘಟಕದ ಉಪಾಧ್ಯಕ್ಷ ಅಣ್ಣಾ ವಿನಯಚಂದ್ರ ಸ್ವಾಗತಿಸಿದರು. ತಾಲೂಕು ಘಟಕದ ಉಪಾಧ್ಯಕ್ಷ ಗೋಪಾಲಕೃಷ್ಣ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೆರ್ದಾಳ್ ಕಾರ್ಯಕ್ರಮ ನಿರೂಪಿಸಿದರು.