ಪ್ರಧಾನಿ ಮೋದಿ, ಉದ್ಯಮಿ ಅದಾನಿ ಒಂದೇ: ರಾಹುಲ್ ಗಾಂಧಿ
ಬಿಜೆಪಿ-ಆರೆಸ್ಸೆಸ್ ಅದಾನಿಯನ್ನು ಏಕೆ ರಕ್ಷಿಸುತ್ತಿದೆ ಎಂದು ಪ್ರಶ್ನಿಸಿದ ಕಾಂಗ್ರೆಸ್ ನಾಯಕ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಉದ್ಯಮಿ ಗೌತಮ್ ಅದಾನಿ ಒಂದೇ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವಿವಾರ ಹೇಳಿದ್ದಾರೆ. ರಾಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ನ 85ನೇ ಮಹಾಧಿವೇಶನದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಹಾಗೂ ಗೌತಮ್ ಅದಾನಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಅದಾನಿ ಸಮೂಹದ ವಂಚನೆ ಕುರಿತು ಅಮೆರಿಕದ ಸಂಸ್ಥೆ ಹಿಂಡನ್ಬರ್ಗ್ ರಿಸರ್ಚ್ ವರದಿಯಿಂದ ಉಂಟಾಗಿರುವ ಬಿಕ್ಕಟ್ಟಿನ ಕುರಿತು ರಾಹುಲ್ ಗಾಂದಿ ಅವರು ನರೇಂದ್ರ ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅದಾನಿ ವಿರುದ್ಧ ವಾಗ್ದಾಳಿ ಮಾಡುವವರನ್ನು ದೇಶದ್ರೋಹಿ ಎಂದು ಹೇಳಲಾಗುತ್ತಿದೆ. ಅಂದರೆ, ಅದಾನಿ ದೊಡ್ಡ ದೇಶಭಕ್ತ ಎಂದರ್ಥ !. ಬಿಜೆಪಿ-ಆರೆಸ್ಸೆಸ್ ಅದಾನಿಯನ್ನು ಏಕೆ ರಕ್ಷಿಸುತ್ತಿದೆ ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಆರೆಸ್ಸೆಸ್ ಹಾಗೂ ಬಿಜೆಪಿ ಯಾವುದೇ ರೀತಿಯಿಂದಾದರೂ ಅಧಿಕಾರ ಪಡೆಯಲು ಬಯಸುತ್ತಾರೆ. ಆರೆಸ್ಸೆಸ್ ಬಿಜೆಪಿಯ ಸೈದ್ಧಾಂತಿಕ ಮೂಲವಾಗಿದೆ ಎಂದು ಅವರು ಹೇಳಿದರು. ಅವರು (ಬಿಜೆಪಿ-ಆರ್ಎಸ್ಎಸ್) ಅಧಿಕಾರ ಪಡೆಯಲು ಏನು ಬೇಕಾದರೂ ಮಾಡುತ್ತಾರೆ. ಅವರು ಯಾರೊಂದಿಗೆ ಬೇಕಾದರೂ ಮೈತ್ರಿ ಮಾಡಿಕೊಳ್ಳುತ್ತಾರೆ. ಅವರು ಯಾರ ಮುಂದೆ ಬೇಕಾದರೂ ತಲೆ ಬಾಗುತ್ತಾರೆ. ಇದು ವಾಸ್ತವ ಎಂದು ಅವರು ಹೇಳಿದರು.
ಭಾರತ್ ಜೋಡೊ ಯಾತ್ರೆ ಸಂದರ್ಭ ನಾನು ಹಲವು ವಿಚಾರಗಳನ್ನು ಕಲಿತೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಾವಿರಾರು ಜನರು ನನ್ನ ಜೊತೆ ಹಾಗೂ ಪಕ್ಷದ ಜೊತೆ ಬೆರೆತರು. ನಾನು ರೈತರು ಸೇರಿದಂತೆ ಹಲವು ಜನ ಸಮುದಾಯದ ಮಾತುಗಳನ್ನು ಆಲಿಸಿದೆ. ಅವರ ನೋವುಗಳನ್ನು ಅರ್ಥ ಮಾಡಿಕೊಂಡೆ ಎಂದು ಅವರು ಹೇಳಿದರು.
ಕಾಶ್ಮೀರದ ಯುವಕರಲ್ಲಿ ದೇಶದ ತ್ರಿವರ್ಣ ಧ್ವಜದ ಮೇಲೆ ಇರುವ ಪ್ರೀತಿಯನ್ನು ನಾನು ನೋಡಿದ್ದೇನೆ. ಆದರೆ, ಬಿಜೆಪಿ ಈ ಜನರ ವಿರುದ್ಧವಾಗಿದೆ. ‘‘ಚೀನಾದ ಆರ್ಥಿಕತೆ ನಮ್ಮ ದೇಶದ ಆರ್ಥಿಕತೆಗಿಂತ ದೊಡ್ಡದಿದೆ. ಅವರ ಜೊತೆ ನಾವು ಹೋರಾಟ ಮಾಡುವುದು ಹೇಗೆ?’’ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಇದು ರಾಷ್ಟ್ರೀಯವಾದವಲ್ಲ ಹೇಡಿತ ಎಂದು ರಾಹುಲ್ ಗಾಂಧಿ ಹೇಳಿದರು.







