ಬೆಂಗಳೂರು: ‘ರೈಸಿಂಗ್ ಬಿಯಾಂಡ್ ದಿ ಸೀಲಿಂಗ್’ ಪುಸ್ತಕ ಲೋಕಾರ್ಪಣೆ

ಬೆಂಗಳೂರು: ದೇಶವನ್ನು ಕಟ್ಟುವಲ್ಲಿ ಮುಸ್ಲಿಮ್ ಸಮುದಾಯದ ಮಹಿಳೆಯರು ನೀಡುತ್ತಿರುವ ಕೊಡುಗೆಯನ್ನು ತಿಳಿಸುವ ಉದ್ದೇಶದಿಂದ ‘ರೈಸಿಂಗ್ ಬಿಯಾಂಡ್ ದಿ ಸೀಲಿಂಗ್’ ಪುಸ್ತಕವನ್ನು ಹೊರ ತರಲಾಗುತ್ತಿದೆ ಎಂದು ರೈಸಿಂಗ್ ಬಿಯಾಂಡ್ ದಿ ಸಿಲಿಂಗ್ ಕರ್ನಾಟಕ ಸಂಘಟನೆಯ(ಆರ್‍ಬಿಟಿಸಿ) ಸಂಸ್ಥಾಪಕಿ ಫರಾ ಉಸ್ಮಾನಿ ತಿಳಿಸಿದ್ದಾರೆ.
ಶನಿವಾರ ನಗರದ ಎಂಜಿ ರಸ್ತೆಯಲ್ಲಿನ ಪಾಲ್ಕಾನ್ ಡೆನ್ ಕಟ್ಟಡದಲ್ಲಿ ಆಯೋಜಿಸಿದ್ದ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಸ್ಲಿಂ ಮುದಾಯದ ಮಹಿಳೆಯ ಬದುಕಿನ ವೈವಿಧ್ಯವನ್ನೂ ಈ ಪುಸ್ತಕ ಹೇಳುತ್ತದೆ ಎಂದು ಹೇಳಿದರು.
ಚಿಂತಕಿ ಡಾ.ಫರೀದಾ ರಹ್ಮತುಲ್ಲಾ ಖಾನ್ ಮಾತನಾಡಿ, ‘ಮುಸ್ಲಿಮ್ ಸಮುದಾಯದ ಮಹಿಳೆಯರು ಕ್ರೀಡೆ, ಸಮಾಜ ಸೇವೆ, ಸಾಹಿತ್ಯ ಮುಂತಾದ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುತ್ತಾರೆ. ಆದರೆ, ಅವರ ಸಾಧನೆಗಳು ಹೆಚ್ಚು ಪ್ರಚಾರಕ್ಕೆ ಬರುವುದಿಲ್ಲ. ಹಾಗಾಗಿ ಅವರ ಸಾಧನೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತಿದೆ’ ಎಂದು ತಿಳಿಸಿದರು.
ಲೇಖಕಿ ಬಾನು ಮುಷ್ತಾಕ್ ಮಾತನಾಡಿ, ‘ಕೃತಿಯ ಹೆಸರೇ ಸೂಚಿಸಿದಂತೆ ಚಾವಣಿಗಿಂತ ಮೇಲೆ ತಮ್ಮ ಹೆಸರನ್ನು ಎತ್ತಿ ಹಿಡಿಯಬಲ್ಲ ಮಹಿಳೆಯ ಸಾಧನೆಗಳನ್ನು ದಾಖಲಿಸಲಾಗಿದೆ. ಇದು ಒಂದು ಹಂತದ ಪ್ರಯತ್ನವಾಗಿದ್ದು, ಇನ್ನು ಹಲವು ಮಹಿಳೆಯ ಸಾಧನೆಗಳನ್ನು ದಾಖಲಿಸುವ ಅಗತ್ಯ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಐಎಎಫ್‍ನ ಮಾಜಿ ವಿಂಗ್ ಕಮಾಂಡರ್ ಫರಾಹ್ ಅಫ್ರಾಝ್ ಮಾತನಾಡಿ, ಭಾರತೀಯ ಮುಸ್ಲಿಮ್ ಮಹಿಳೆಯರು ಸಂಕುಚಿತ ದೃಷ್ಟಿಕೋನವನ್ನು ಮೀರಲು ಈ ಕೃತಿ ಸಹಾಯ ಮಾಡುತ್ತದೆ. ಎಲ್ಲ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 100 ಮುಸ್ಲಿಮ್ ಸಮುದಾಯದ ಮಹಿಳೆಯರ ಕಥನಗಳನ್ನು ಒಳಗೊಂಡ ಪುಸ್ತಕ ‘ರೈಸಿಂಗ್ ಬಿಯಾಂಡ್ ದಿ ಸೀಲಿಂಗ್’ ಅನ್ನು ಲೋಕಾರ್ಪಣೆ ಮಾಡಲಾಯಿತು. ಆರ್‍ಬಿಟಿಸಿ ಸಂಯೋಜಕರಾದ ಜೋಯಾ ಫತೇಹಳ್ಳಿ, ಕಾಂಗ್ರೆಸ್ ಮುಖಂಡರಾದ ಮಾರ್ಗರೇಟ್ ಆಳ್ವಾ, ಐಮನ್ ಅನ್ಸಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







