ಪೋಲ್ ವಾಲ್ಟ್‌ನಲ್ಲಿ ಹೊಸ ವಿಶ್ವದಾಖಲೆ: 6.22 ಮೀ. ಎತ್ತರ ಜಿಗಿದ ಅರ್ಮಾಂಡ್ ಡುಪ್ಲಾಂಟಿಸ್

ಪ್ಯಾರಿಸ್, ಫೆ. 26: ಸ್ವೀಡನ್‌ನ ಅರ್ಮಾಂಡ್ ಡುಪ್ಲಾಂಟಿಸ್ ಶನಿವಾರ 6.22 ಮೀಟರ್ ಎತ್ತರ ಜಿಗಿದು ಪೋಲ್ ವಾಲ್ಟ್ ನಲ್ಲಿ ನೂತನ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ. ಫ್ರಾನ್ಸ್‌ನಲ್ಲಿ ನಡೆದ ಒಳಾಂಗಣ ಕ್ರೀಡಾಕೂಟದಲ್ಲಿ ಒಲಿಂಪಿಕ್ ಚಾಂಪಿಯನ್ ಡುಪ್ಲಾಂಟಿಸ್ ತನ್ನದೇ 6.21 ಮೀಟರ್ ವಿಶ್ವ ದಾಖಲೆಯನ್ನು ಮತ್ತಷ್ಟು ಸುಧಾರಿಸಿದರು.
ಹಳೆಯ ವಿಶ್ವದಾಖಲೆಯನ್ನು ಅವರು ಕಳೆದ ವರ್ಷ ಓರೆಗಾನ್‌ನಲ್ಲಿ ನಡೆದ ಹೊರಾಂಗಣ ಕ್ರೀಡಾಕೂಟದಲ್ಲಿ ನಿರ್ಮಿಸಿದ್ದರು.
ಮಧ್ಯ ಫ್ರಾನ್ಸ್‌ನ ಕ್ಲೆರ್ಮಂಟ್-ಫೆರಾಂಡ್‌ನಲ್ಲಿ 2012ರ ಒಲಿಂಪಿಕ್ ಪೋಲ್ ವಾಲ್ಟ್ ಚಾಂಪಿಯನ್ ರೆನೋ ಲವಿಯೋನಿ ಏರ್ಪಡಿಸಿದ ಆಲ್-ಸ್ಟಾರ್ ಪರ್ಶ್ ಕ್ರೀಡಾಕೂಟದಲ್ಲಿ, ಡುಪ್ಲಾಂಟಿಸ್ ತನ್ನ ಮೂರನೇ ಪ್ರಯತ್ನದಲ್ಲಿ ಹೊಸ ದಾಖಲೆಯನ್ನು ಬರೆದರು. ಅದಕ್ಕೆ ಕ್ರೀಡಾಂಗಣದಲ್ಲಿದ್ದ 4,000 ಪ್ರೇಕ್ಷಕರು ಸಾಕ್ಷಿಯಾದರು.
ಡುಪ್ಲಾಂಟಿಸ್ ವಿಶ್ವ ದಾಖಲೆಯನ್ನು ಮುರಿಯುತ್ತಿರುವುದು ಆರನೇ ಬಾರಿ. ಅವರು ಮೊದಲ ಬಾರಿಗೆ ವಿಶ್ವದಾಖಲೆಯನ್ನು ಮುರಿದದ್ದು 2020 ಫೆಬ್ರವರಿಯಲ್ಲಿ ಟೊರನ್‌ನಲ್ಲಿ. ಅವರು 6.17 ಮೀಟರ್ ಜಿಗಿದು ಲವಿಯೋನಿಯ ವಿಶ್ವದಾಖಲೆ 6.16ನ್ನು ಒಂದು ಸೆಂಟಿಮೀಟರ್‌ನಿಂದ ಮುರಿದರು. ಆ ದಾಖಲೆಯು 2014ರಿಂದಲು ಚಾಲ್ತಿಯಲ್ಲಿತ್ತು.