ಹೋರಾಟಗಳಲ್ಲಿ ಮಹಿಳಾ ಘಟಕ ಸದಾ ಮುಂಚೂಣಿ: ಮಾವಳ್ಳಿ ಶಂಕರ್

ಬೆಂಗಳೂರು: ದಲಿತ ಚಳುವಳಿಯ ಹೋರಾಟಗಳಲ್ಲಿ ದಲಿತ ಮಹಿಳಾ ಘಟಕವು ಸದಾ ಮುಂಚೂಣಿಯಲ್ಲಿರುತ್ತದೆ. ಆಡಳಿತ ಸರಕಾರಗಳಿಗೆ ಸಮುದಾಯದ ನಾರಿಶಕ್ತಿ ಏನೆಂಬುದನ್ನು ಹಲವು ಹೋರಾಟಗಳಲ್ಲಿ ಘಟಕ ಸಾಬೀತು ಪಡಿಸಿದೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‍ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದ್ದಾರೆ.
ರವಿವಾರ ನಗರದ ಲಾಲ್‍ಬಾಗ್ ರಸ್ತೆಯಲ್ಲಿರುವ ಜೈಭೀಮ್ ಭವನದಲ್ಲಿ ದಸಂಸ ವತಿಯಿಂದ ರಮಾಬಾಯಿ ಅಂಬೇಡ್ಕರ್ ಅವರ 125ನೆ ಜನ್ಮದಿನಾಚರಣೆ ಹಾಗೂ ದಲಿತ ಮಹಿಳಾ ಒಕ್ಕೂಟದ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿದ ಅವರು, ದಲಿತ ಚಳುವಳಿ ಆರಂಭದಿಂದ ದಸಂಸ ಎಲ್ಲ ನಡಿಗೆಯಲ್ಲಿ ಮಹಿಳಾ ಘಟಕವು ಎಲ್ಲ ಜವಾಬ್ದಾರಿಗಳನ್ನು ತನ್ನ ಹೆಗಲ ಮೇಲೆ ಒತ್ತುಕೊಂಡು ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಸ್ತುತ ಕಾಲಘಟ್ಟದಲ್ಲಿ ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ, ದಲಿತ ಹೆಣ್ಣುಮಕ್ಕಳ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ದೇಶದ ಪ್ರತಿ ಹಳ್ಳಿಗಳಲ್ಲೂ ಅಸ್ಪಶ್ಯತೆ, ಜಾತೀಯತೆ ಇಂದಿಗೂ ತಾಂಡವವಾಡುತ್ತಿದೆ. ಇಂತಹ ಸಂಕ್ರಮಣ ಕಾಲಘಟ್ಟದಲ್ಲಿ ದಲಿತ ಮಕ್ಕಳು ವಿದ್ಯಾವಂತರಾಗಬೇಕು. ಎಲ್ಲರೂ ಉನ್ನತ ಮಟ್ಟದ ಶಿಕ್ಷಣವನ್ನು ಪಡೆಯುವ ಅಗತ್ಯವಿದೆ. ಅಂತೆಯೇ ಸಂಘಟನೆಗಳು ದಲಿತ ಪರವಾದ ವೈಚಾರಿಕ ಹೋರಾಟಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ದಲಿತ ಮಹಿಳಾ ಒಕ್ಕೂಟವು ರಾಜ್ಯ ಸಮಿತಿ ತೆಗೆದುಕೊಳ್ಳುವ ಎಲ್ಲ ತೀರ್ಮಾನಗಳನ್ನು ಬೆಂಬಲಿಸಿ ಹೋರಾಟದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತಾ ಬಂದಿದೆ. ಇಂದು ಮಹಿಳಾ ಬೇಡಿಕೆಗಳು ಮತ್ತು ಸಮಸ್ಯೆಗಳನ್ನು ಇಟ್ಟುಕೊಂಡು ಸರಕಾರವನ್ನು ಎಚ್ಚರಿಸುವ ಅನಿವಾರ್ಯತೆ ಇದೆ ಎಂದರು.
ದಲಿತ ಮಹಿಳಾ ಘಟಕ ಒಕ್ಕೂಟದ ನಿರ್ಮಲಾ ಮಾತನಾಡಿ, ಸಂಘಟನೆಗೆ ಬಂದ ಮೇಲೆ ನಾವು ದೇವರನ್ನು ಪೂಜಿಸದೆ ಅಂಬೇಡ್ಕರ್‍ರನ್ನು ಪೂಜಿಸಬೇಕು ಎನ್ನುವುದರ ಅರಿವಾಯಿತು. ಮನೆಯಲ್ಲಿ ನನ್ನ ಅಮ್ಮನ ಒತ್ತಾಯಕ್ಕೆ ದೇವರ ಪೋಟೋ ಇಟ್ಟಿದ್ದೇವೆ. ಆದರೆ ನಾನು ಮಾತ್ರ ಅಂಬೇಡ್ಕರ್ ಮತ್ತು ಬುದ್ಧನನ್ನು ಪ್ರತಿನಿತ್ಯ ಸ್ಮರಿಸಿ ಪೂಜಿಸುತ್ತೇನೆ ಎಂದು ತಿಳಿಸಿದರು.
ಲೇಖಕಿ ಪ್ರೊ.ವಿಜಯಮೂರ್ತಿ ಮಾತನಾಡಿ, ರಮಾಬಾಯಿ ಅಂಬೇಡ್ಕರ್ ದಲಿತ ಹೆಣ್ಣು ಮಕ್ಕಳ ಪಾಲಿನ ಆಶಾಕಿರಣ. ಸಮಾಜದ ಕಟ್ಟುಪಾಡುಗಳಿಗೆ ಜೋತು ಬಿದ್ದು, ಜಾತಿಯ ಕಾರಣದಿಂದ ನಮಗೆ ಸಾಮಾಜಿಕ ಹಕ್ಕುಗಳಾಗಲಿ, ನಿರ್ಭೀತ ಸ್ವತಂತ್ರ್ಯವಾಗಲಿ ಸಿಗದ ದುರಿತ ಸನ್ನಿವೇಶದಲ್ಲಿ ರಮಾಬಾಯಿ ಅಂಬೇಡ್ಕರ್ ಹೋರಾಟಕ್ಕೆ ದುಮುಕಿದರು. ಅವರ ಮಗನಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾನವತಾವಾದದ ಹೋರಾಟದ ಫಲವಾಗಿ ನಾವು ಸಮಾಜದಲ್ಲಿ ಬದುಕುವ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್‍ನ ಇಂದಿರಾ ಕೃಷ್ಣಪ್ಪ, ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಭಾರತಿ ರಾಜಣ್ಣ, ವಕೀಲ ಪ್ರತಿಭಾ ಹೊಸಮತಿ, ಮಾನವ ಹಕ್ಕುಗಳ ಕಾರ್ಯಕರ್ತೆ ಅಖಿಲ ವಿದ್ಯಾಸಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.







