ದೇಶದ ಶೇ.50ರಷ್ಟು ವಿದ್ಯುತ್ ಉತ್ಪಾದನೆ ಅಂಬಾನಿ-ಅದಾನಿಗಳ ಕೈಯಲ್ಲಿದೆ: ಕೆ.ಸೋಮಶೇಖರ್ ಆರೋಪ
ವಿದ್ಯುತ್ ಬಳಕೆದಾರರ ಪ್ರಥಮ ಸಮ್ಮೇಳನ

ಬೆಂಗಳೂರು: ಎನ್‍ಡಿಎ ನೇತೃತ್ವದ ಬಿಜೆಪಿ ಸರಕಾರವು ಖಾಸಗಿಕರಣ, ಉದಾರಿಕರಣ ನೀತಿಗಳನ್ನು ಇನ್ನಷ್ಟು ತ್ವರಿತವಾಗಿ ಜಾರಿಗೊಳಿಸುವ ಮೂಲಕ ದೊಡ್ಡ ಕಾರ್ಪೊರೇಟ್ ಉದ್ಯಮಗಳ ಏಳಿಗೆಗಾಗಿ ಕಾರ್ಯ ಪ್ರವೃತ್ತವಾಗಿದೆ. ಈ ಪರಿಣಾಮವಾಗಿ ದೇಶದ ಶೇ.50ರಷ್ಟು ವಿದ್ಯುತ್ ಉತ್ಪಾದನೆಯು ಅಂಬಾನಿ, ಅದಾನಿ ಕೈಯಲ್ಲಿದೆ ಎಂದು ಅಖಿಲ ಭಾರತ ವಿದ್ಯುತ್ ಬಳಕೆದಾರರ ಸಂಘ ಉಪಾಧ್ಯಕ್ಷ ಕೆ. ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಯುವಿಸಿಇ ಅಲುಮ್ನಿ ಅಸೋಷಿಯೇಷನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿದ್ಯುತ್ ಬಳಕೆದಾರರ ಪ್ರಥಮ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ರಾಜ್ಯ ಸರಕಾರ ವಿದ್ಯುತ್ ಕ್ಷೇತ್ರದ ಖಾಸಗೀಕರಣವನ್ನು ನಿಲ್ಲಿಸಬೇಕು. ವಿದ್ಯುತ್ ತಿದ್ದುಪಡಿ ಮಸೂದೆ-2022 ಅನ್ನು ರದ್ದುಗೊಳಿಸಿ ಪ್ರೀ-ಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆಯನ್ನು ಕೂಡಲೇ ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.
ಆರ್ಥಿಕ ಸಂಕಷ್ಟದಲ್ಲಿರುವ ಗ್ರಾಹಕರು, ಸಣ್ಣ ಉದ್ಯಮಗಳು ಸಾವಿರಾರು, ಲಕ್ಷಾಂತರ ರೂಪಾಯಿಗಳ ವಿದ್ಯುತ್ ಬಿಲ್‍ಗಳನ್ನು ಪಾವತಿಸುವಂತಾಗಿದೆ. ವಿವಿಧ ರಾಜ್ಯಗಳಲ್ಲಿ ವಿದ್ಯುತ್ ಖಾಸಗೀಕರಣದ ಪ್ರಯತ್ನವು ವಿಫಲವಾಗಿರುವ ಉದಾಹರಣೆ ಇದ್ದು, ನಮ್ಮಲ್ಲೂ ವಿದ್ಯುತ್ ತಿದ್ದುಪಡಿ ಮಸೂದೆ-2022 ರದ್ದುಗೊಳಿಸಲು, ವಿದ್ಯುತ್ ಕ್ಷೇತ್ರದ ಖಾಸಗೀಕರಣವನ್ನು ನಿಲ್ಲಿಸಲು ಮತ್ತು ದುಬಾರಿ ವಿದ್ಯುತ್ ಬಿಲ್ ಏರಿಕೆಯನ್ನು ವಿರೋಧಿಸಲು ಒತ್ತಾಯಿಸಿ ದೇಶವ್ಯಾಪಿ ಹೋರಾಟಗಳಿಗೆ ಎಲ್ಲರೂ ಮುಂದೆ ಬರಬೇಕೆಂದು ಕರೆ ನೀಡಿದರು.
ಕೆಪಿಟಿಸಿಎಲ್ ನೌಕರರ ಸಂಘ ಕಾರ್ಯಾಧ್ಯಕ್ಷ ರಾಜಾ ನಾಯ್ಕ್ ಮಾತನಾಡಿ, ‘ಜೀವನದ ಅವಿಭಾಜ್ಯ ಅಂಗವಾಗಿರುವ ವಿದ್ಯುತ್ ಕ್ಷೇತ್ರವು ಸರಕಾರದ ಅಧೀನದಲ್ಲಿರಬೇಕು. ಸೇವಾ ಮನೋಭಾವದಿಂದ ಕೂಡಿರಬೇಕು. ಅದರ ಫಲ ದೇಶದ ಪ್ರತಿಯೊಬ್ಬ ನಾಗರಿಕನಿಗೂ ದಕ್ಕುವಂತಾಗಿರಬೇಕು. ಆದರೆ ದುರದೃಷ್ಟವಶಾತ್, ಅಗಾಧವಾದ ಈ ವಿದ್ಯುತ್ ಕ್ಷೇತ್ರವನ್ನು ಕಟ್ಟಿದ್ದು ದೇಶದ ಗ್ರಾಹಕರ ತೆರಿಗೆ ಹಣದಿಂದ ಎಂಬುದನ್ನು ಸರಕಾರಗಳು ಮರೆತು ಹೋಗಿವೆ. ಖಾಸಗೀಕರಣದ ಮೂಲಕ ಜನರ ಹಣದಿಂದ ಕಟ್ಟಿದ ಮೂಲಸೌಕರ್ಯಗಳನ್ನು ಬಳಸಿಕೊಂಡು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಳ್ಳಲು ಸರಕಾರವು ಮುಕ್ತ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ ಎಂದರು.
ಸೇವಾ ಕ್ಷೇತ್ರವಾದ ವಿದ್ಯುತ್ ಅನ್ನು ಖಾಸಗಿಯವರಿಗೆ ಒಪ್ಪಿಸಿದರೆ, ಈಗಾಗಲೇ ಬೆಲೆ ಏರಿಕೆ, ನಿರುದ್ಯೋಗದಿಂದ ತತ್ತರಿಸುತ್ತಿರುವ ಜನ ಸಾಮಾನ್ಯರು ಮತ್ತು ವಿದ್ಯುತ್ ನೌಕರರು ಇನ್ನಷ್ಟು ಮಾರಕವಾದ ದಿನಗಳು ನೋಡುವುದು ಖಚಿತ. ಯಾವುದೇ ಸರಕಾರಗಳು ಬಂದರೂ ಇಂತಹ ನೀತಿಗಳೇ ಮುಂದುವರೆಯುತ್ತವೆ. ಆದ್ದರಿಂದ ಜನಸಾಮಾನ್ಯರು, ಗ್ರಾಹಕರುಗಳು ಪ್ರಜ್ಞಾವಂತರಾಗಿ, ಹೋರಾಟಗಳನ್ನು ಕಟ್ಟಿ, ಇಂತಹ ನೀತಿಗಳು ಜಾರಿಯಾಗದಂತೆ ತಡೆಯಬೇಕಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ಮುದ್ರಣಾಲಯ ಸಂಘದ ಅಧ್ಯಕ್ಷ ಮಂಜುನಾಥ್, ಸಲಹೆಗಾರ ನಾಗಾರ್ಜುನ ಉಪಸ್ಥಿತರಿದ್ದರು.







