ತೆಲಂಗಾಣ ರ‍್ಯಾಗಿಂಗ್ ಪ್ರಕರಣ: ಆತ್ಮಹತ್ಯೆಗೆ ಯತ್ನಿಸಿದ್ದ ವೈದ್ಯಕೀಯ ವಿದ್ಯಾರ್ಥಿನಿ ಮೃತ್ಯು

ಹೈದರಾಬಾದ್: ನಾಲ್ಕು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ಮೊದಲ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿನಿಯು ರವಿವಾರ ರಾತ್ರಿ ಮೃತಪಟ್ಟಿದ್ದಾಳೆ ಎಂದು ndtv.com ವರದಿ ಮಾಡಿದೆ.
ಕಕಾತೀಯ ವೈದ್ಯಕೀಯ ಕಾಲೇಜಿನಲ್ಲಿ ತನ್ನ ಹಿರಿಯ ಸಹಪಾಠಿಯಿಂದ ಕಿರುಕುಳಕ್ಕೊಳಗಾಗಿದ್ದ 26 ವರ್ಷದ ಡಿ. ಪ್ರೀತಿ ಎಂಬ ವೈದ್ಯಕೀಯ ವಿದ್ಯಾರ್ಥಿನಿ ಬುಧವಾರ ಆತ್ಮಹತ್ಯೆಗೆ ಯತ್ನಿಸಿದ್ದಳು. ಎಂಜಿಎಂ ಆಸ್ಪತ್ರೆಯಲ್ಲಿ ರಾತ್ರಿ ಪಾಳಿ ಕೆಲಸದಲ್ಲಿದ್ದ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು ಮತ್ತು ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆಯನ್ನು ಕೂಡಲೇ ಹೈದರಾಬಾದ್‌ಗೆ ಸಾಗಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಡಿ. ಪ್ರೀತಿ ತಂದೆಯ ದೂರನ್ನು ಆಧರಿಸಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯನ್ವಯ ಎರಡನೆ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿ ಮುಹಮ್ಮದ್ ಸೈಫ್ ಅಲಿಯ ವಿರುದ್ಧ ರ್ಯಾಗಿಂಗ್, ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಕಿರುಕುಳ ಆರೋಪಗಳನ್ನು ದಾಖಲಿಸಿಕೊಂಡು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಸಂತ್ರಸ್ತೆ ಹಾಗೂ ಆರೋಪಿ ನಡುವಿನ ವಾಟ್ಸ್ ಆ್ಯಪ್ ಸಂಭಾಷಣೆಗಳು ರ್ಯಾಗಿಂಗ್ ನಡೆದಿರುವ ಸುಳಿವು ನೀಡಿವೆ ಎಂದು ವಾರಂಗಲ್ ಪೊಲೀಸ್ ಆಯುಕ್ತ ಎ.ವಿ.ರಂಗನಾಥ್ NDTVಗೆ ತಿಳಿಸಿದ್ದಾರೆ.
ನಾವು ಆ ಹಿರಿಯ ವಿದ್ಯಾರ್ಥಿಯ ವಿರುದ್ಧ ಕಾಲೇಜು ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಮೃತ ವಿದ್ಯಾರ್ಥಿನಿಯ ತಂದೆ ನರೇಂದ್ರ ಆರೋಪಿಸಿದ್ದಾರೆ.
ಮೃತ ದೇಹವನ್ನು ಹೈದರಾಬಾದಿನ ನಿಮ್ಸ್‌ನಿಂದ ಸ್ಥಳಾಂತರಿಸಿ, ಅವರ ತವರು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲು ಸಂತ್ರಸ್ತೆಯ ಕುಟುಂಬದ ಸದಸ್ಯರು ನಿರಾಕರಿಸಿದರು. ಈ ನಡುವೆ ಹಲವಾರು ಲಂಬಾಡಾ ಬುಡಕಟ್ಡು ಸಂಘಟನೆಗಳು ಹೈದರಾಬಾದಿನ ನಿಮ್ಸ್, ಕಕಾತೀಯ ವೈದ್ಯಕೀಯ ಕಾಲೇಜು ಹಾಗೂ ವಾರಂಗಲ್ಲಿನ ಎಂಜಿಎಂ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದವು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಹಾಗೂ ರಾಷ್ಟ್ರೀಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಆಯೋಗವು, ಸರ್ಕಾರ, ಎಂಜಿಎಂ ಆಸ್ಪತ್ರೆಯ ಅಧೀಕ್ಷಕ ಹಾಗೂ ಕಕಾತೀಯ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಹಾಗೂ ಅರವಳಿಕೆ ವಿಭಾಗದ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿವೆ.
ರಾಜ್ಯಪಾಲೆ ತಮಿಳಿಸೈ ಸೌಂದರ್‌ರಾಜನ್ ಆಸ್ಪತ್ರೆಗೆ ಭೇಟಿ ನೀಡಿ ಪ್ರೀತಿಯ ಅಂತಿಮ ದರ್ಶನ ಪಡೆದರು. ಏತನ್ಮಧ್ಯೆ, ಸಂತ್ರಸ್ತ ವಿದ್ಯಾರ್ಥಿನಿಯ ಕುಟುಂಬಕ್ಕೆ ರೂ. 10 ಲಕ್ಷ ಪರಿಹಾರವನ್ನು ತೆಲಂಗಾಣ ಸರ್ಕಾರ ಘೋಷಿಸಿದೆ.







