ಶಿವಮೊಗ್ಗ: ನೂತನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ

ಶಿವಮೊಗ್ಗ, ಫೆ.27: ಮಲೆನಾಡು ಮತ್ತು ಗಡಿನಾಡಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ ಆಗಮಿಸಿದ್ದಾರೆ.
ಹೊಸದಿಲ್ಲಿಯಿಂದ ಸೇನಾ ವಿಮಾನದ ಮೂಲಕ ಆಗಮಿಸಿದ ಪ್ರಧಾನಿ ಶಿವಮೊಗ್ಗದ ಸೋಗಾನೆಯಲ್ಲಿರುವ ನೂತನ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಈ ವೇಳೆ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹಸಚಿವ ಆರಗ ಜ್ಞಾನೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಚಿವರಾದ ನಾರಾಯಣಗೌಡ, ಭೈರತಿ ಬಸವರಾಜ್, ಸಂಸದ ಬಿ.ವೈ.ರಾಘವೇಂದ್ರ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮತ್ತಿತರರು ಸ್ವಾಗತಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗ ತಾಲೂಕಿನ ಸೋಗಾನೆಯಲ್ಲಿ 449 ಕೋ.ರೂ. ವೆಚ್ಚದಲ್ಲಿ ತಲೆಯೆತ್ತಿರುವ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದಲ್ಲದೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಉದ್ಘಾಟನೆ ನೆರವೇರಿಸುವರು. ಅಪರಾಹ್ನ ಬೆಳಗಾವಿಗೆ ತೆರಳಲಿರುವ ಪ್ರಧಾನಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವರು.





