ಕನ್ನಡ ನೆಲದ ಕೈಗಾರಿಕಾ ಅಸ್ಮಿತೆಯನ್ನು ಉಳಿಸಿಕೊಳ್ಳುವುದು ಬೇಡವಾಗಿ ಹೋಯಿತೇ?

ಬಿಜೆಪಿಯ ಆತ್ಮನಿರ್ಭರ್ ಎಂಬುದು, ಇರುವುದನ್ನೆಲ್ಲ ಖಾಸಗಿಯವರಿಗೆ ಮಾರುವುದು, ಖಾಸಗಿಯವರಿಗೂ ಬೇಡವಾದರೆ ಮುಚ್ಚುವುದು ಎನ್ನುವಲ್ಲಿಗೆ ಬಂದು ಮುಟ್ಟಿದೆ. ಅಚ್ಛೇ ದಿನ್ ಎಂದು ಭ್ರಮೆ ಹುಟ್ಟಿಸಿದ್ದ ವರು ತಂದಿಡುತ್ತಿರುವುದು ಮಾತ್ರ ಕರಾಳ ದಿನಗಳು ಎಂಬುದಕ್ಕೆ ವಿಐಎಸ್ಎಲ್ಗೆ ಬೀಗ ಹಾಕುತ್ತಿರುವುದೂ ಮತ್ತೊಂದು ಸಾಕ್ಷಿ.
ಮೊನ್ನೆಯಷ್ಟೇ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಬಂದಿಳಿಯಿತು. ಬಿಜೆಪಿ ಸರಕಾರ ತನ್ನ ಬೆನ್ನು ತಾನೇ ತಟ್ಟಿಕೊಂಡಿತು. ಇದು ಡಬಲ್ ಇಂಜಿನ್ ಸರಕಾರದ ಕ್ರಾಂತಿ ಎಂದು ಹಾಡಿಹೊಗಳಲಾಯಿತು. ಆದರೆ, ಅದೇ ಮಲೆನಾಡಿನ ನೆಲದ ಹಮ್ಮೆಯಾಗಿದ್ದ, ಕರ್ನಾಟಕ ಕೈಗಾರಿಕಾ ರಂಗದ ಭವ್ಯ ಸಂಕೇತವಾಗಿದ್ದ, ಸಾವಿರಾರು ಕುಟುಂಬಗಳಿಗೆ ಅನ್ನ ನೀಡಿದ್ದ ಭದ್ರಾವತಿ ಕಬ್ಬಿಣ ಉಕ್ಕು ಕಾರ್ಖಾನೆ ಮುಚ್ಚಿಹೋಗುತ್ತಿರುವುದರ ಬಗ್ಗೆ ಇದೇ ಡಬಲ್ ಇಂಜಿನ್ ಸರಕಾರದ ಯಾವ ನಾಯಕರಿಗೂ ಕಿಂಚಿತ್ತೂ ಕಳವಳ, ಕಳಕಳಿ ಇದ್ದ ಹಾಗಿರಲಿಲ್ಲ. ಭದ್ರಾವತಿಯಲ್ಲಿ ಹಲವಾರು ವರ್ಷಗಳ ಇತಿಹಾಸವಿದ್ದ ಕಾರ್ಖಾನೆ ಮುಚ್ಚಿಹೋಗುತ್ತಿರುವುದೂ ಇವರ ಡಬಲ್ ಇಂಜಿನ್ ಸರಕಾರದ ಕ್ರಾಂತಿಯೇ ಎಂದು ಕೇಳಬೇಕಾಗಿದೆ.
105 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ವಿಐಎಸ್ಎಲ್ ಅನ್ನು ಮುಚ್ಚಲಾಗುತ್ತಿದೆ. ಸರಕಾರಕ್ಕೆ ಈ ಕಾರ್ಖಾನೆ ಬೇಡವಾಗಿ ಬಹಳ ಸಮಯವೇ ಆಯಿತು. ಅದರ ಪುನಶ್ಚೇತನಕ್ಕೆ ಮನಸ್ಸು ಮಾಡದೆ ಕೂತಾಗಲೇ, ಕಾರ್ಖಾನೆಗೆ ಬೀಗ ಬೀಳುವ ಸುಳಿವು ಇತ್ತು. ಈಗ ಅದೇ ನಿಜವಾಗಿದೆ.
ತನ್ನ ಒಂದು ಘಟಕವಾಗಿದ್ದ ಭದ್ರಾವತಿ ಕಬ್ಬಿಣ ಉಕ್ಕು ಕಾರ್ಖಾನೆ ಯನ್ನು ಮುಚ್ಚುವ ನಿರ್ಧಾರವನ್ನು ಭಾರತ ಉಕ್ಕು ಪ್ರಾಧಿಕಾರ (ಎಸ್ಎಐಎಲ್) ಈ ವರ್ಷ ಜನವರಿ 18ರಂದು ತೆಗೆದುಕೊಂಡಿತು. ಬಳಿಕ, ಫೆಬ್ರವರಿ 13ರಂದು ಅದನ್ನು ಅಧಿಕೃತವಾಗಿ ಕೇಂದ್ರ ಸರಕಾರ ಸಂಸತ್ತಿನಲ್ಲಿ ಪ್ರಕಟಿಸಿದೆ.
ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ಉತ್ತಮ ಗುಣಮಟ್ಟದ ಮಿಶ್ರ ಲೋಹ ಮತ್ತು ವಿಶೇಷ ಉಕ್ಕು, ಕಚ್ಚಾ ಕಬ್ಬಿಣದ ಉತ್ಪಾದನೆಗೆ ನಾಂದಿ ಹಾಡಿದ್ದ ಮಹತ್ವಾಕಾಂಕ್ಷೆಯ ಔದ್ಯಮಿಕ ಯಶೋಗಾಥೆಯೊಂದನ್ನು ಈಗ ಕೇಂದ್ರ ಸರಕಾರ ವಿಐಎಸ್ಎಲ್ ಮುಚ್ಚುವುದರೊಂದಿಗೆ ಕೊನೆಗೊಳಿಸುತ್ತಿದೆ.
ವಿಐಎಸ್ಎಲ್ ಮುಚ್ಚಲು ಸರಕಾರ ಕೊಟ್ಟಿರುವ ಕಾರಣಗಳು: ಸತತ ನಷ್ಟ ಮತ್ತು ಕಾರ್ಖಾನೆ ಕೊಳ್ಳಲು ಹೂಡಿಕೆದಾರರು ಮುಂದೆ ಬರದಿರುವುದು, ಕಬ್ಬಿಣದ ಅದಿರಿನ ಅಲಭ್ಯತೆ, ಬಳಕೆಯಲ್ಲಿಲ್ಲದ ತಂತ್ರಜ್ಞಾನದಿಂದಾಗಿ ಹೆಚ್ಚು ವೆಚ್ಚ, ಕಡಿಮೆ ಉತ್ಪಾದನೆ.
ಕೇಂದ್ರ ಕೊಟ್ಟಿರುವ ಕಾರಣಗಳು ಆಶ್ಚರ್ಯಕರ ಎಂದು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ. ಭದ್ರಾವತಿ ಕಬ್ಬಿಣ ಅದಿರು ಸಂಪದ್ಭರಿತ ಬಳ್ಳಾರಿಯಿಂದ ಕೇವಲ 250 ಕಿ.ಮೀ. ಅಂತರದಲ್ಲಿದ್ದರೂ ಕಚ್ಚಾವಸ್ತುವಿಲ್ಲ ಎನ್ನಲಾಗುತ್ತಿದೆ. ಗಣಿ ಪರವಾನಿಗೆಯನ್ನು ವಿಐಎಸ್ಎಲ್ಗೆ 2011ರ ಅಕ್ಟೋಬರ್ನಲ್ಲಿಯೇ ನೀಡಲಾಗಿದ್ದರೂ, ಮೋದಿ ಸರಕಾರ ಈವರೆಗೆ ಏನನ್ನೂ ಮಾಡಿಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಪ್ರತಿಕ್ರಿಯಿಸಿದ್ದಾರೆ.
ಇಲ್ಲಿ ಇನ್ನೂ ಒಂದು ವಿಚಾರವಿದೆ. ನಷ್ಟದಲ್ಲಿರುವ ಸುಮಾರು 92 ಸಂಸ್ಥೆಗಳನ್ನು ಕೇಂದ್ರ ಸರಕಾರ ಮುಚ್ಚುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಭಾರತ ಉಕ್ಕು ಪ್ರಾಧಿಕಾರ ತನ್ನ ಇತರ ಘಟಕಗಳನ್ನೂ ಮುಚ್ಚುತ್ತಿದೆಯೆ ಎಂಬ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಉತ್ತರಿಸಿರುವ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಸದ್ಯ ಕೇಂದ್ರ ಸರಕಾರದ ನಿರ್ಧಾರದಂತೆ ಎಸ್ಎಐಎಲ್ ಭದ್ರಾವತಿ ಕಬ್ಬಿಣ ಉಕ್ಕು ಕಾರ್ಖಾನೆಯನ್ನು ಮಾತ್ರ ಮುಚ್ಚುತ್ತಿದೆ ಎಂದಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಉತ್ಪಾದನೆ ಕಡಿಮೆಯಾಗಿ, ಕಾರ್ಖಾನೆ ನಷ್ಟ ಅನುಭವಿಸಲಾರಂಭಿಸಿತ್ತು. ಉದ್ಯೋಗಿಗಳ ಸಂಖ್ಯೆ ಕಡಿಮೆಯಾಯಿತು. ಒಂದು ಕಾಲದಲ್ಲಿ ಘಟಕದಲ್ಲಿ 12,000ದಷ್ಟು ಉದ್ಯೋಗಿಗಳಿದ್ದರು. ಅಲ್ಲದೆ 400ರಷ್ಟು ಮಂದಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. 1,660 ಎಕರೆ ಭೂಮಿ ಮತ್ತು 4,250 ಕ್ವಾರ್ಟರ್ಸ್ಗಳನ್ನು ಹೊಂದಿತ್ತು. ಈಗ ವಿಐಎಸ್ಎಲ್ ಟೌನ್ಶಿಪ್ ಖಾಲಿಯಾಗಿದೆ. ವಿಐಎಸ್ಎಲ್ ಪ್ರಸಕ್ತ 211 ಖಾಯಂ ನೌಕರರು ಮತ್ತು 1,340 ಗುತ್ತಿಗೆ ಕಾರ್ಮಿಕರನ್ನು ಹೊಂದಿದೆ.
ಖಾಸಗೀಕರಣ ಪ್ರಕ್ರಿಯೆ 2000ದಲ್ಲಿ ಶುರುವಾಯಿತು. ಆದರೆ ಯಶಸ್ವಿಯಾಗಲಿಲ್ಲ. ಜಂಟಿ ಉದ್ಯಮದ ಮೂಲಕ ಸ್ಥಾವರ ನವೀಕರಣ ಪ್ರಯತ್ನವನ್ನು 2013ರಲ್ಲಿ ಮಾಡಲಾಯಿತು. ಅದೂ ಫಲ ಕಾಣಲಿಲ್ಲ. ಅಕ್ಟೋಬರ್ 2016ರಲ್ಲಿ ಕೇಂದ್ರ ಸರಕಾರ ಸ್ಥಾವರ ಖಾಸಗೀಕರಣಗೊಳಿಸುವ ನಿರ್ಧಾರ ತೆಗೆದುಕೊಂಡಿತು. ಆದರೆ ಘಟಕ ಖರೀದಿಗೆ ಹೂಡಿಕೆದಾರರು ಆಸಕ್ತಿ ತೋರಿಸದ ಹಿನ್ನೆಲೆಯಲ್ಲಿ ಖಾಸಗೀಕರಣ ಪ್ರಸ್ತಾವವನ್ನೂ 2022ರ ಅಕ್ಟೋಬರ್ 12ರಂದು ಕೈಬಿಡಲಾಯಿತು.

10 ವರ್ಷಗಳಿಂದ ನೌಕರರು ಘಟಕ ಪುನಶ್ಚೇತನಕ್ಕೆ ಪ್ರಯತ್ನಿಸುತ್ತ, ಪ್ರತಿಭಟನೆ ನಡೆಸುತ್ತಲೇ ಬಂದಿದ್ದಾರೆ. ವಿಐಎಸ್ಎಲ್ ನೌಕರರ ಸಂಘದ ಅಧ್ಯಕ್ಷ ಜೆ.ಜಗದೀಶ್ ಪತ್ರಿಕೆಗಳಿಗೆ ನೀಡಿರುವ ಹೇಳಿಕೆ ಪ್ರಕಾರ, ಎಸ್ಎಐಎಲ್ ಒಳ್ಳೆಯ ಲಾಭ ಗಳಿಸಿದ್ದರೂ ವಿಐಎಸ್ಎಲ್ನಲ್ಲಿ ಹೂಡಿಕೆ ಮಾಡಲು ಮಾತ್ರ ಆಸಕ್ತಿ ತೋರಿಸುತ್ತಿಲ್ಲ. ಈಗ ಮುಚ್ಚುವ ನಿರ್ಧಾರದೊಂದಿಗೆ ಎಲ್ಲವೂ ಮುಗಿದೇ ಹೋಗಿದೆ.
ಕೇಂದ್ರದ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಬಿ.ಎಸ್. ಯಡಿಯೂರಪ್ಪ, ಇದು ನಮ್ಮ ಕೈಮೀರಿದ್ದಾಗಿದೆ ಎಂದಿದ್ದಾರೆ. ಬಳಿಕ ಅಧಿವೇಶನದಲ್ಲಿ ಇದನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಒತ್ತಾಯಿಸುತ್ತಾರೆ. ಅದಕ್ಕೆ ಉತ್ತರವಾಗಿ ಸಿಎಂ ಕಾರ್ಖಾನೆ ಉಳಿಸಿಕೊಳ್ಳಲು ಯತ್ನಿಸಲಾಗು ವುದು ಎನ್ನುತ್ತಾರೆ. ಅದನ್ನು ಮಾಧ್ಯಮಗಳು ಬಿಜೆಪಿ ಸರಕಾರದಿಂದ ಗುಡ್ನ್ಯೂಸ್ ಎಂದು ಬರೆಯುತ್ತವೆ. ಪ್ರತೀ ಬಾರಿ ಚುನಾವಣೆ ಹೊತ್ತಿನಲ್ಲಿಯೂ ಕಾರ್ಖಾನೆ ಉಳಿಸುವ ಮಾತನಾಡುತ್ತಲೇ ಬಂದಿದ್ದವರು ಈಗ ಕಾರ್ಖಾನೆ ಮುಚ್ಚುವ ನಿರ್ಧಾರ ಹೊರಬಿದ್ದ ಮೇಲೂ ಅದನ್ನೇ ಹೇಳುತ್ತ ಯಾರ ಕಿವಿಯ ಮೇಲೆ ಹೂವಿಡುತ್ತಿದ್ದಾರೊ ಗೊತ್ತಿಲ್ಲ. ಮಾಧ್ಯಮಗಳಿಗಂತೂ ಕಿಂಚಿತ್ ವಿವೇಕವಿಲ್ಲ. ಬಹುಪರಾಕ್ ಹೇಳುವ ಒಂದೇ ಒಂದು ಅವಕಾಶ ಬಿಡದ ಅವುಗಳು ಕೇಳಬೇಕಾದ ಒಂದು ಪ್ರಶ್ನೆಯನ್ನೂ ಕೇಳುವುದಿಲ್ಲ.

ಸಂಕಷ್ಟದಲ್ಲಿದ್ದರೂ ಅನ್ನಕ್ಕೆ ತೊಂದರೆಯಿಲ್ಲ ಎಂದು ನೆಚ್ಚಿಕೊಂಡಿದ್ದ ಸಾವಿರಾರು ಮಂದಿಯ ಮುಂದೆ ಈಗ ಮುಂದೇನು ಎಂಬ ಪ್ರಶ್ನೆ. ಅಧಿಕೃತ ಮುಚ್ಚುವಿಕೆಗೆ ಕೆಲವು ತಿಂಗಳುಗಳು ತೆಗೆದುಕೊಳ್ಳಬಹುದು ಎಂಬುದೇನೋ ನಿಜ. 211 ಖಾಯಂ ಉದ್ಯೋಗಿಗಳನ್ನು ಉಳಿಸಿ ಕೊಳ್ಳಲು ಮತ್ತು ಇತರನ್ನು ಎಸ್ಎಐಎಲ್ನ ಇತರ ಘಟಕಗಳಿಗೆ ವರ್ಗಾಯಿಸಲು ನೌಕರರ ಸಂಘ ಮನವಿಯನ್ನೇನೋ ಮಾಡಿದೆ. ವಿಐಎಸ್ಎಲ್ನ ನಿವೃತ್ತ ನೌಕರರಿಗೆ 99 ವರ್ಷದ ಗುತ್ತಿಗೆ ಆಧಾರದಲ್ಲಿ ಈಗಾಗಲೇ ಮನೆಗಳನ್ನು ನೀಡಲಾಗಿದೆ. ಅಲ್ಲಿ ಸಾವಿರಾರು ಕಾರ್ಮಿಕರು ನೆಲೆ ಕಂಡುಕೊಂಡಿದ್ದಾರೆ. ವಿಐಎಸ್ಎಲ್ ಮುಚ್ಚುವು ದರಿಂದ ಇವರೆಲ್ಲರೂ ಬೀದಿಗೆ ಬೀಳುವ ಆತಂಕ ಎದುರಾಗಿದೆ. ಮುಂದೇನೆಂಬುದು ಗೊತ್ತಿಲ್ಲ. ಅಂತೂ ಸಾವಿರಾರು ಕುಟುಂಬಗಳ ಭವಿಷ್ಯ ಅನಿಶ್ಚಿತವಾಗಿದೆ ಎಂಬುದು ಮಾತ್ರ ನಿಜ.
ಉಕ್ಕಿನ ನಗರಿ, ಕಾಗದ ನಗರ ಇವು ಭದ್ರಾವತಿಗೆ ಇದ್ದ ಅನ್ವರ್ಥ ನಾಮಗಳು. ಎಂಪಿಎಂ ತನ್ನ ಗತವೈಭವ ಮುಗಿಸಿದ ನಂತರ ಕಾಗದ ನಗರ ಎಂಬ ಹೆಸರು ಹೋಯಿತು. ಈಗ ವಿಐಎಸ್ಎಲ್ ಮುಚ್ಚುವ ನಿರ್ಧಾರ ಕೈಗೊಂಡ ನಂತರ ಉಕ್ಕಿನ ನಗರಿ ಎಂಬ ಅನ್ವರ್ಥ ನಾಮವೂ ನೇಪಥ್ಯಕ್ಕೆ ಹೋಗಲಿದೆ. ಒಟ್ಟಾರೆ ಭದ್ರಾವತಿಗೆ ಕಳೆ ತಂದಿದ್ದ ಈ ಭವ್ಯ ಕಾರ್ಖಾನೆ ಇನ್ನು ಇತಿಹಾಸವಾಗಲಿದೆ. ನೂರಾರು ಕುಟುಂಬಗಳ ಪಾಲಿಗೆ ಇದ್ದ ಆಸರೆ ಇನ್ನಿಲ್ಲವಾಗುತ್ತಿದೆ. ರಾಜ್ಯದ ಪಾಲಿಗೆ ಆದಾಯ ಹಾಗೂ ಹೆಸರು ತರುತ್ತಿದ್ದ ಇನ್ನೊಂದು ಪ್ರಮುಖ ಕೈಗಾರಿಕಾ ಘಟಕ ಮುಚ್ಚುತ್ತಿದೆ. ಇನ್ನೊಂದು ಇಂತಹ ಸ್ಥಾವರ ಸ್ಥಾಪಿಸೋದು ಸುಲಭವಾ? ಇಲ್ಲ.

ಬಿಜೆಪಿಯ ಆತ್ಮನಿರ್ಭರ್ ಎಂಬುದು, ಇರುವುದನ್ನೆಲ್ಲ ಖಾಸಗಿಯವರಿಗೆ ಮಾರುವುದು, ಖಾಸಗಿಯವರಿಗೂ ಬೇಡವಾದರೆ ಮುಚ್ಚುವುದು ಎನ್ನುವಲ್ಲಿಗೆ ಬಂದುಮುಟ್ಟಿದೆ. ಅಚ್ಛೇ ದಿನ್ ಎಂದು ಭ್ರಮೆ ಹುಟ್ಟಿಸಿದ್ದ ವರು ತಂದಿಡುತ್ತಿರುವುದು ಮಾತ್ರ ಕರಾಳ ದಿನಗಳು ಎಂಬುದಕ್ಕೆ ವಿಐಎಸ್ಎಲ್ಗೆ ಬೀಗ ಹಾಕುತ್ತಿರುವುದೂ ಮತ್ತೊಂದು ಸಾಕ್ಷಿ.







