ಕರ್ನಾಟಕದಲ್ಲಿ ಬಿಜೆಪಿ ಮೊದಲ ಬಾರಿಗೆ ಬಹುಮತದೊಂದಿಗೆ ಅಧಿಕಾರಕ್ಕೆ: ಅಣ್ಣಾಮಲೈ ವಿಶ್ವಾಸ

ಉಡುಪಿ, ಫೆ.27: ಕಾಂಗ್ರೆಸ್ ಮಾಡುವ ಆರೋಪಗಳಿಗೆ ನಮ್ಮ ಕಾರ್ಯಕರ್ತರು ಉತ್ತರ ನೀಡುವ ಅಗತ್ಯ ಇಲ್ಲ. ಅದರ ಬದಲು ಕಾರ್ಯಕರ್ತರು ಸಕಾರಾತ್ಮಕವಾಗಿ ಕೆಲಸ ಮಾಡಬೇಕು. ಈ ಬಾರಿ ಉಡುಪಿ ಜಿಲ್ಲೆಯಲ್ಲಿ ಎಲ್ಲ ಐದು ಸೇರಿದಂತೆ ರಾಜ್ಯದಲ್ಲಿ ಮೊದಲ ಬಾರಿಗೆ 150 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಕರ್ನಾಟಕ ವಿಧಾನಸಭಾ ಚುನಾವಣೆಯ ರಾಜ್ಯ ಸಹ ಉಸ್ತುವಾರಿಯಾಗಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಗೆ ಸೊಮವಾರ ಭೇಟಿ ನೀಡಿದ ಅವರು ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಅಭಿವೃದ್ಧಿಯಲ್ಲಿ ಕರ್ನಾಟಕ ದಕ್ಷಿಣ ಭಾರತದಲ್ಲೇ ಮುಂಚೂಣಿಯಲ್ಲಿದೆ. ಕರ್ನಾಟಕದಿಂದ ಹೊರಗೆ ನಿಂತು ನೋಡಿದಾಗ ಅಭಿವೃದ್ಧಿ ತಿಳಿಯುತ್ತದೆ. ಆದರೆ ನಿದ್ದೆಯಿಂದ ಎದ್ದ ಕಾಂಗ್ರೆಸ್ ಈಗ ಆರೋಪ ಮಾಡುತ್ತಿದೆ. ನಿದ್ದೆ ಮಾಡಿ ಹಲ್ಲುಜ್ಜಲು ಹೋಗುವ ಗ್ಯಾಪಲ್ಲಿ ಕಾಂಗ್ರೆಸ್ ಸದಾ ಆರೋಪ ಮಾಡುತ್ತದೆ ಎಂದು ಟೀಕಿಸಿದರು.
ನಮ್ಮ ಬಳಿ ಅಭಿವೃದ್ಧಿ ಇದೆ. ಡಬಲ್ ಎಂಜಿನ್ ಸರಕಾರ ಇದೆ. ಭಾರತದ ಅಭಿವೃದ್ಧಿ ಜೊತೆ ಕರ್ನಾಟಕ ಜನ ನಿಲ್ಲುತ್ತಾರೆ. ಶಿಕ್ಷಣ ಮತ್ತು ಜಿಎಸ್ ಟಿ, ತೆರಿಗೆ ಸಂಗ್ರಹ ಹಾಗೂ ಉದ್ಯಮದಲ್ಲಿ ಕರ್ನಾಟಕ ನಂಬರ್ ಒನ್ ಇದೆ. ನಾವು ಕೆಲಸ ಮಾಡಿದ್ದೇವೆ. ಅದನ್ನು ರಾಜ್ಯದ ಜನಕ್ಕೆ ಮುಟ್ಟಿಸುತ್ತೇವೆ ಎಂದರು.
ಕಾಂಗ್ರೆಸ್ ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳುವ ಪ್ಲ್ಯಾನ್ ಮಾಡಿದೆ. ಮುಂದಿನ ಎಂ.ಪಿ. ಚುನಾವಣೆಗೆ ಕರ್ನಾಟಕ ಬಜೆಟ್ ನ ಶೇ.10 ಬಳಸುವ ಯೋಚನೆ ಮಾಡಿದೆ. ಬಾಯಿ ಇರುವುದು ಮಾತಾಡಲು, ಸುಳ್ಳು ಹೇಳಲು ಅಲ್ಲ ಎಂಬುದನ್ನು ಕಾಂಗ್ರೆಸ್ ತಿಳಿದುಕೊಳ್ಳಬೇಕು ಎಂದು ಅವರು ಟೀಕಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಾದ್ಯಂತ ಸಂಚರಿಸಲಿರುವ ಐದು 'ಪ್ರಗತಿ ರಥ'ಗಳಿಗೆ ರಾಜ್ಯ ಮೀನುಗಾರಿಕಾ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಚಾಲನೆ ನೀಡಿದರು.
ಶಾಸಕರಾದ ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನಾ ಗಣೇಶ್, ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ಉಡುಪಿ ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಉಡುಪಿ ನಗರ ಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮನೋಹರ್ ಕಲ್ಮಾಡಿ ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುತ್ಯಾರು ನವೀನ್ ಶೆಟ್ಟಿ ಸ್ವಾಗತಿಸಿದರು. ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿದರು.
