ಬೆಂಗಳೂರು | ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಬಂಧನ ಖಂಡಿಸಿ ಬಿಜೆಪಿ ಕಚೇರಿ ಎದುರು ಆಪ್ ಪ್ರತಿಭಟನೆ

ಬೆಂಗಳೂರು: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಬಂಧನ ಖಂಡಿಸಿ ಬೆಂಗಳೂರಿನಲ್ಲಿರುವ ಬಿಜೆಪಿ ರಾಜ್ಯ ಕಚೇರಿ ಎದುರು ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆ ವೇಳೆ ಮಾತನಾಡಿದ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, “ದೆಹಲಿಯ ಆಮ್ ಆದ್ಮಿ ಪಾರ್ಟಿ ಪಕ್ಷವನ್ನು ವಿಭಜಿಸಿ ಬಿಜೆಪಿಯಲ್ಲಿ ವಿಲೀನಗೊಳಿಸಲು ಬಿಜೆಪಿ ನಾಯಕರು ಪ್ರಯತ್ನಿಸಿದರು. ಆದರೆ ಆಮ್ ಆದ್ಮಿ ಪಾರ್ಟಿ ನಾಯಕರಲ್ಲಿರುವ ಬದ್ಧತೆಯಿಂದಾಗಿ ಈ ಪ್ರಯತ್ನ ವಿಫಲವಾಯಿತು. ಇದರಿಂದ ಹತಾಶೆಗೊಂಡ ಬಿಜೆಪಿಯು ಬೆದರಿಕೆ ತಂತ್ರವಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಎಎಪಿ ನಾಯಕರಿಗೆ ಕಿರುಕುಳ ನೀಡುತ್ತಿದೆ. ದೆಹಲಿಯ ಅಬಕಾರಿ ನೀತಿಯಲ್ಲಿ ಯಾವುದೇ ಅವ್ಯವಹಾರವಾಗಿಲ್ಲ. ನೂತನ ಅಬಕಾರಿ ನೀತಿಯನ್ನು ದೆಹಲಿಯಲ್ಲಿ ಇನ್ನೂ ಜಾರಿಗೆ ತಂದಿಲ್ಲ ಹಾಗೂ ಹಲವು ರಾಜ್ಯಗಳಲ್ಲಿ ಇದೇ ನೀತಿ ಜಾರಿಯಲ್ಲಿದೆ. ಆದರೂ ಸಿಸೋದಿಯಾರವರನ್ನು ಕೇಂದ್ರ ಸರ್ಕಾರ ಟಾರ್ಗೆಟ್ ಮಾಡುತ್ತಿರುವುದು ಖಂಡನೀಯ” ಎಂದು ಹೇಳಿದರು.
ಇದನ್ನೂ ಓದಿ: ದಿಲ್ಲಿ ಮದ್ಯ ನೀತಿ ಪ್ರಕರಣ: ಮನೀಶ್ ಸಿಸೋಡಿಯಾರನ್ನು ಬಂಧಿಸಿದ ಸಿಬಿಐ
“ಸುಮಾರು ಒಂದು ವರ್ಷದಿಂದ ಕೇಂದ್ರ ಸರ್ಕಾರದ ತನಿಖಾಧಿಕಾರಿಗಳು ಸಿಸೋದಿಯಾರವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದರೂ, ಆರೋಪವನ್ನು ಸಾಬೀತುಪಡಿಸುವಂತಹ ಯಾವುದೇ ಸಣ್ಣ ಸಾಕ್ಷಿ ಸಿಕಿಲ್ಲ. ನಗದು ಅಥವಾ ಯಾವುದೇ ಅಕ್ರಮ ದಾಖಲೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆಮ್ ಆದ್ಮಿ ಪಾರ್ಟಿಯೊಂದೇ ಬಿಜೆಪಿಯನ್ನು ಎದುರಿಸುವ ಏಕೈಕ ಶಕ್ತಿ ಎಂಬುದನ್ನು ಅರಿತಿರುವ ಬಿಜೆಪಿಯು ನಮ್ಮನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೇ, ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಈ ರೀತಿ ತೊಂದರೆ ನೀಡುತ್ತಿದೆ. ದೇಶ ಹಾಗೂ ಜನರಿಗೋಸ್ಕರ ಕೇವಲ ಬಂಧನ ಮಾತ್ರವಲ್ಲ, ಪ್ರಾಣ ನೀಡಲೂ ನಾವುಗಳು ಸಿದ್ಧವಿದ್ದೇವೆ” ಎಂದು ಎಚ್ಚರಿಕೆ ನೀಡಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಮಾತನಾಡಿ, 'ಕರ್ನಾಟಕ ಸೇರಿದಂತೆ ದೇಶಾದ್ಯಂತ ಆಮ್ ಆದ್ಮಿ ಪಾರ್ಟಿ ಪ್ರವರ್ಧಮಾನಕ್ಕೆ ಬರುತ್ತಿದೆ. ಜನರು ಎಎಪಿ ಪರವಾಗಿ ಇರುವುದನ್ನು ಸಹಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಕರ್ನಾಟಕದ ಚುನಾವಣೆಯ ಪ್ರಚಾರಕ್ಕೆ ಮನೀಷ್ ಸಿಸೋದಿಯಾ ಆಗಮಿಸಿ, ಇಲ್ಲಿನ ಸರ್ಕಾರಿ ಶಾಲೆಗಳ ದುಸ್ಥಿತಿಯನ್ನು ಪ್ರಶ್ನಿಸಬಹುದು ಎಂಬ ಭಯದಿಂದ ಕೇಂದ್ರ ಸರ್ಕಾರವು ಸಿಬಿಐ ಮೂಲಕ ಅವರನ್ನು ಬಂಧಿಸಿದೆ. ಆಮ್ ಆದ್ಮಿ ಪಾರ್ಟಿಯ ದೆಹಲಿ ಸರ್ಕಾರದ ಶಿಕ್ಷಣ ಕ್ರಾಂತಿಯನ್ನು ಕಂಡು ಅನೇಕ ವಿದೇಶಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿವೆ. ಆದರೆ ಬಿಜೆಪಿಗೆ ಮಾತ್ರ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ' ಎಂದು ಆರೋಪಿಸಿದರು.
ಆಮ್ ಆದ್ಮಿ ಪಾರ್ಟಿ ಮುಖಂಡರಾದ ಕೆ.ಮಥಾಯಿ, ಬ್ರಿಜೇಶ್ ಕಾಳಪ್ಪ, ಸುರೇಶ್ ರಾಥೋಡ್, ಜಗದೀಶ್ ವಿ ಸದಂ, ಸುಮನ್ ಪ್ರಶಾಂತ್, ರಾಜೇಂದ್ರ ಕುಮಾರ್, ಮೋಹನ್, ಕೀರ್ತನ್ ಕುಮಾರ್, ಶಾಶಾವಲ್ಲಿ, ಮಂಜುನಾಥ್, ಪ್ರಕಾಶ್ ಬೆಳ್ಳಂಕೊಂಡ ಮತ್ತಿತರ ನಾಯಕರು ಹಾಗೂ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.



