ಮೇಘಾಲಯ ಚುನಾವಣೆಯಲ್ಲಿ ಹಕ್ಕು ಚಲಾಯಿಸಲಿರುವ ಮರಡೋನ, ಪೀಲೆ, ಕಾಶ್ಮೀರ, ಟಿಬೆಟ್, ಸ್ವೀಡನ್!

ಉಮ್ನಿಯುಹು (ಮೇಘಾಲಯ): ಸೋಮವಾರ ನಡೆಯಲಿರುವ ಮತದಾನದಲ್ಲಿ ಪ್ರಜಾಸತ್ತಾತ್ಮಕ ಪಕ್ಷಗಳ ಒಕ್ಕೂಟದ ಬಲಜೀಡ್, ರಾಷ್ಟ್ರೀಯ ಜನತಾ ಪಕ್ಷದ ಗ್ರೇಸ್ ಮೇರಿ ಖರ್ಪೂರಿ ಹಾಗೂ ಬಿಜೆಪಿಯ ಹೈನ್ನೀವ್ತಾ ಪೈಕಿ ಒಬ್ಬರನ್ನು ಆರಿಸಲು ಮರಡೋನ (Maradona), ಪೀಲೆ (Pele) ಮತ್ತು ರೊಮಾರಿಯೊ (Romario) ಮತದಾನ ಮಾಡಲಿದ್ದಾರೆ! ಅಚ್ಚರಿಯಾಯಿತೆ?!
ಇವರು ಮಾತ್ರವಲ್ಲ, ಕಾಶ್ಮೀರ, ಟಿಬೆಟ್, ಸ್ವೀಡನ್ ಹಾಗೂ ಥಾಯ್ಲೆಂಡ್ ಕೂಡಾ ಸೋಮವಾರದ ಮತದಾನದಲ್ಲಿ ಭಾಗವಹಿಸಲಿದ್ದಾರೆ!! ಗೊಂದಲವಾಯಿತೆ?! ಹೌದು, ಮೇಘಾಲಯ ಮತದಾರರ ಪಟ್ಟಿಯಲ್ಲಿರುವ ಮತದಾರರ ವಿಶಿಷ್ಟ ಹೆಸರುಗಳಿವು. ಇಷ್ಟು ಮಾತ್ರವಲ್ಲದೆ, ಗಾಯಕ ಜಿಮ್ ರೀವ್ಸ್ ಹೆಸರಿನ ಮತದಾರ ಕೂಡಾ ಈಶಾನ್ಯ ಭಾರತ ರಾಜ್ಯವಾದ ಮೇಘಾಲಯ (Meghalaya) ಮತದಾರರ ಪಟ್ಟಿಯಲ್ಲಿದ್ದಾನೆ.
ಈ ಹೆಸರುಗಳ ಮತದಾರರು ಉಮ್ನಿಯುಹು-ಮಾರ್ ಮತಕ್ಷೇತ್ರದಲ್ಲಿದ್ದು, ಪೂರ್ವ ಖಾಸಿ ಗಿರಿಶ್ರೇಣಿ ಜಿಲ್ಲೆಯಾದ ಶೆಲ್ಲಾ ವಿಧಾನಸಭಾ ಕ್ಷೇತ್ರದಿಂದ ಪ್ಲೇನೆಸ್, ಅರೆನಾ, ವೆಲ್‌ಬಾರ್ನ್ ಮತ್ತು ಗ್ರೇಸ್ ಸ್ಪರ್ಧಾಳುಗಳಾಗಿದ್ದಾರೆ.
ಇದಲ್ಲದೆ ವಿಧಾನಸಭಾ ಕ್ಷೇತ್ರ ಸಂಖ್ಯೆ 28, ರಿಂಗಾ, ವಿಧಾನಸಭಾ ಕ್ಷೇತ್ರ ಸಂಖ್ಯೆ 45, ಮೇಘಾಲಯ ಖಾಂಗ್ಟಿಮ್‌ನಿಂದ ಚೊಚ್ಚಲ ಮತದಾರರಾದ ಬಾರ್ಡರ್, ಕಾಂಪ್ಲಾನ್ ಹಾಗೂ ರಿಪೆಂಟೆನ್ಸ್ ಕೂಡಾ ಸೋಮವಾರ ಮತ ಚಲಾಯಿಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಇಲಾಖಾ ಚುನಾಯಿತ ಮುಖ್ಯಸ್ಥ (ಸಿರ್ದಾರ್) ನಂಗ್ಲಮ್‌ಲಾಡ್, "ಉಮ್ನಿಯುಹು-ಮಾರ್ ಮತಕ್ಷೇತ್ರದಲ್ಲಿ ಜನರು ತಮಗೆ ವಿಶಿಷ್ಟವೆನಿಸುವ ವ್ಯಕ್ತಿಗಳ ಅಥವಾ ಸ್ಥಳಗಳ ಹೆಸರನ್ನು ತಮ್ಮ ಮಕ್ಕಳಿಗೆ ನಾಮಕರಣ ಮಾಡುತ್ತಾರೆ" ಎಂದು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಸುಮಾರು ಶೇ. 50ರಷ್ಟು ಗ್ರಾಮಸ್ಥರು ಉಚ್ಚಾರಣೆ ಚೆಂದವೆನಿಸುವ ಇಂಗ್ಲಿಷ್ ಪದಗಳನ್ನು ಇಷ್ಟಪಡುತ್ತಾರೆ ಮತ್ತು ಅವರ ಪೈಕಿ ಕೆಲವರಿಗೆ ಆ ಪದಗಳ ಸಮರ್ಪಕ ಅರ್ಥವೂ ತಿಳಿದಿಲ್ಲ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ದೇಶವನ್ನು ಉದ್ವಿಗ್ನತೆಯಲ್ಲಿರಿಸಲು ಬಯಸುವಿರಾ?: ಐತಿಹಾಸಿಕ ಸ್ಥಳಗಳ ಮರುನಾಮಕರಣ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ







