ಭೇಟಿಯಾಗಲು ಬರುವವರಿಗೆ ಚಹಾ ನೀಡಬೇಡವೇ?:CM ನಿವಾಸದ 2.68 ಕೋಟಿ ರೂ. ಆಹಾರ ಬಿಲ್ ಬಗ್ಗೆ ಏಕನಾಥ್ ಶಿಂಧೆ ಪ್ರತಿಕ್ರಿಯೆ

ಮುಂಬೈ : ತಮ್ಮ ನಿವಾಸದ ಆಹಾರ ಸಂಬಂಧಿತ ದುಬಾರಿ ಬಿಲ್ ಕುರಿತಂತೆ ಸಮರ್ಥಿಸಿಕೊಂಡಿರುವ ಮಹಾರಾಷ್ಟ್ರ (Maharashtra) ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) "ನಮ್ಮನ್ನು ಭೇಟಿಯಾಗುವವರಿಗೆ ನಾವು ಚಹಾ ನೀಡಬೇಡವೇ?" ಎಂದು ಪ್ರಶ್ನಿಸಿದ್ದಾರೆ.
ಶಿಂಧೆ ನಿವಾಸದ ಆಹಾರ ಮತ್ತು ಪಾನೀಯ ಬಿಲ್ ಕಳೆದ (food bill) ನಾಲ್ಕು ತಿಂಗಳಿನಲ್ಲಿ ರೂ. 2.68 ಕೋಟಿ ತಲುಪಿದೆ ಎಂದು ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಹೇಳಿಕೆಗೆ ಶಿಂಧೆ ಪ್ರತಿಕ್ರಿಯಿಸುತ್ತಿದ್ದರು.
ಅತಿಥಿಗಳಿಗೆ, ಪ್ರಮುಖವಾಗಿ ದೂರದ ಪ್ರದೇಶಗಳಿಂದ ತಮ್ಮನ್ನು ಭೇಟಿಯಾಗಲು ಆಗಮಿಸುವವರಿಗೆ ಆತಿಥ್ಯ ನೀಡುವುದು ನಮ್ಮ ಸಂಪ್ರದಾಯ ಎಂದು ಹೇಳಿದ ಶಿಂಧೆ, ಸಂದರ್ಶಕರಿಗೆ ಚಹಾ ಮತ್ತು ನೀರು ನೀಡಲಾಗುತ್ತದೆ ಎಂದು ಹೇಳಿದರು.
"ದೂರದ ಪ್ರದೇಶಗಳಿಂದ ಮುಖ್ಯಮಂತ್ರಿಯನ್ನು ಭೇಟಿಯಾಗಲು ಸಾವಿರಾರು ಜನರು ಬರುತ್ತಾರೆಂದು ಅವರಿಗೆ ತಿಳಿದಿಲ್ಲವೇ? ಅವರಿಗೆ ನಾವು ಚಹಾ ಅಥವಾ ನೀರು ನೀಡಬೇಡವೇ?" ಎಂದು ಶಿಂಧೆ ಪ್ರಶ್ನಿಸಿದರು. "ಅವರಿಗೆ ಚಹಾ ನೀಡಲಾಗುತ್ತದೆ, ಬಿರಿಯಾನಿಯಲ್ಲ" ಎಂದು ಹೇಳಿದ ಶಿಂಧೆ, ಉದ್ಧವ್ ಠಾಕ್ರೆ ಸಿಎಂ ಆಗಿದ್ದಾಗ ಇಡೀ ಪ್ರಕ್ರಿಯೆ ಆನ್‌ಲೈನ್ ಆಗಿದ್ದರೂ ಈ ಉದ್ದೇಶಕ್ಕೆ ರೂ. 34 ಲಕ್ಷ ವ್ಯಯಿಸಲಾಗಿತ್ತು ಎಂದು ಶಿಂಧೆ ಹೇಳಿದರು.
ಇದನ್ನೂ ಓದಿ: UAEಯ ಅಲ್-ಐನ್ ಶಾಖೆ ಮುಂದೆ ಸಾಲು ನಿಂತ ಜನರ ಫೋಟೋ ವೈರಲ್: ಸ್ಪಷ್ಟೀಕರಣ ನೀಡಿದ ಬ್ಯಾಂಕ್ ಆಫ್ ಬರೋಡಾ







