ಮಂಗಳೂರು: ಕೊಂಕಣಿ ಲೇಖಕ ಸಂಘದಿಂದ ಐರಿನ್ ಪಿಂಟೊರಿಗೆ ಪ್ರಶಸ್ತಿ ಪ್ರದಾನ

ಮಂಗಳೂರು, ಫೆ.27: ಖ್ಯಾತ ಲೇಖಕಿ ಐರಿನ್ ಪಿಂಟೊ ಅವರಿಗೆ ಕೊಂಕಣಿ ಲೇಖಕ ಸಂಘ (ಕೆಎಲ್ಎಸ್) 'ಕೊಂಕಣಿ ಸಾಹಿತ್ಯ ಪ್ರಶಸ್ತಿ-2023' ನೀಡಿ ಗೌರವಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ನಂತೂರು ಬಜೋಡಿ ಸಂದೇಶ ಪ್ರತಿಷ್ಠಾನದಲ್ಲಿ ಫೆ.25ರಂದು ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ 'ರಾಕ್ಣೊ' ವಾರಪತ್ರಿಕೆಯ ಮಾಜಿ ಸಂಪಾದಕ ರೆ| ಫ್ರಾನ್ಸಿಸ್ ರೊಡ್ರಿಗಸ್ ಹಾಗೂ ಗೌರವ ಅತಿಥಿಯಾಗಿ ಕಾಸರಗೋಡು ಸರಕಾರಿ ಕಾಲೇಜು ಪ್ರೊ. ರಾಧಾಕೃಷ್ಣ ಬೆಳ್ಳೂರು ಭಾಗವಹಿಸಿದ್ದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಐರಿನ್ ಪಿಂಟೊ, “ಕೊಂಕಣಿ ಲೇಖಕಿ, ಕಾದಂಬರಿಕಾರ ಎಂದು ಗುರುತಿಸಿದ್ದಕ್ಕಾಗಿ ಇಡೀ ಕೊಂಕಣಿ ಸಾಹಿತ್ಯ ಲೋಕಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಕೊಂಕಣಿ ಸಮುದಾಯದಲ್ಲಿ ಅತ್ಯಂತ ಕ್ರಿಯಾಶೀಲವಾಗಿರುವ ಕೆಎಲ್ಎಸ್ ನಿಂದ ಪ್ರಶಸ್ತಿ ಸ್ವೀಕರಿಸಿರುವುದು ನನಗೆ ಅಪಾರ ಸಂತಸ ತಂದಿದೆ. ನನ್ನ ಬೆಂಬಲಿಗರಿಗೆ, ಸಾಹಿತ್ಯಾಭಿಮಾನಿಗಳಿಗೆ ಮತ್ತು ನನ್ನ ಕುಟುಂಬದ ಸದಸ್ಯರಿಗೆ ನಾನು ಕೃತಜ್ಞನಾಗಿದ್ದೇನೆ. ಕೆಎಲ್ಎಸ್‌ಗೆ ಇನ್ನೂ ಅನೇಕ ವರ್ಷಗಳು ಸಮೃದ್ಧಿಯಾಗಲಿ ಎಂದು ಹಾರೈಸುತ್ತೇನೆ” ಎಂದು ನುಡಿದರು. ಪ್ರಶಸ್ತಿಯು 25,000 ರೂ. ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
ಡಾ. ಎಡ್ವರ್ಡ್ ನಜ್ರೆತ್, ಎರಿಕ್ ಒಝೇರಿಯೊ, ಆಂಡ್ರೂ ಎಲ್ ಡಿಕುನ್ಹಾ, ಜೊಯ್ಸ್ ಒಝೇರಿಯೊ ಮತ್ತು ವಲ್ಲಿ ಕ್ವಾಡ್ರಸ್ ಅವರನ್ನು ತಮ್ಮ ಕ್ಷೇತ್ರಗಳಲ್ಲಿನ ಸಾಧನೆಗಳಿಗಾಗಿ ಕೆಎಲ್ಎಸ್ ನಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ 'ರಾಕ್ಣೊ' ಪತ್ರಿಕೆಯ ಮಾಜಿ ಸಂಪಾದಕ ರೆ| ಮಾರ್ಕ್ ವಾಲ್ಟರ್ ಬರೆದಿರುವ 'ಭಗವಾನ್ ಯೇಸು ಕ್ರಿಸ್ತ' (ತುಳು-ಮೂರನೇ ಆವೃತ್ತಿ) ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ರಿಚರ್ಡ್ ಮೊರಾಸ್ ಅವರಿಂದ ಪ್ರಸ್ತಾವನೆ, ಎಡ್ವರ್ಡ್ ನಜ್ರೆತ್ ಅವರಿಂದ ಐರಿನ್ ಪಿಂಟೊ ಅವರ ಸಾಹಿತ್ಯ ಕೃತಿಗಳ ಪರಿಚಯ, ಮಾಚ್ಚಾ ಮಿಲಾರ್ ಅವರಿಂದ ವಂದನೆ, ಅನಿಲ್ ಮತ್ತು ಐರಿನ್ ರೆಬೆಲ್ಲೊ ಇವರಿಂದ ಪ್ರಾರ್ಥನಾ ಗೀತೆ ಹಾಗೂ ಲವಿ ಗಂಜಿಮಠರವರಿಂದ ಕಾರ್ಯಕ್ರಮ ನಿರೂಪಿಸಲ್ಪಟ್ಟಿತು.
ಕೊಂಕಣಿ ಲೇಖಕ ಸಂಘ ಕರ್ನಾಟಕವು 2018ರಲ್ಲಿ ಕೊಂಕಣಿ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸುವ ಏಕೈಕ ಉದ್ದೇಶದಿಂದ ರಚಿಸಲ್ಪಟ್ಟ ಸ್ವಯಂಸೇವಾ ಸಂಘವಾಗಿದೆ. 2022ರಿಂದ, ಕೊಂಕಣಿ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಕೊಂಕಣಿ ಲೇಖಕರನ್ನು ಆಯ್ಕೆ ಮಾಡಿ, ಗೌರವಿಸಲು ಕೊಂಕಣಿ ಲೇಖಕ ಸಂಘ ನಿರ್ಧರಿಸಿತು.