ಹೊರ ಜಿಲ್ಲೆಯ ಹುಲಿಗಳನ್ನು ತಂದು ಕೊಡಗಿನಲ್ಲಿ ಬಿಡಲಾಗುತ್ತಿದೆ: ವೀಣಾ ಅಚ್ಚಯ್ಯ ಆರೋಪ
''ಸರ್ಕಾರದ ನಿರ್ಲಕ್ಷ್ಯದಿಂದ ಜಿಲ್ಲೆಯಲ್ಲಿ ಹುಲಿಗಳ ಉಪಟಳ ಹೆಚ್ಚಳ''

ಮಡಿಕೇರಿ ಫೆ.27 : ಸರ್ಕಾರ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಕೊಡಗು ಜಿಲ್ಲೆಯಲ್ಲಿ ಹುಲಿಗಳ ಉಪಟಳ ಹೆಚ್ಚಾಗುತ್ತಿದೆ. ಕಳೆದ 2 ವರ್ಷಗಳಲ್ಲಿ 6 ಮಾನವಜೀವ ಹಾನಿ ಮತ್ತು ಅನೇಕ ಜಾನುವಾರುಗಳು ಸಾವನ್ನಪ್ಪಿದ್ದರೂ ಎಚ್ಚೆತ್ತುಕೊಳ್ಳದ ಸರ್ಕಾರ ಕೊಡಗಿನ ಜನರ ಜೀವಕ್ಕೆ ಬೆಲೆ ಇಲ್ಲದಂತೆ ವರ್ತಿಸುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಡಾನೆಗಳು ತೋಟಗಳನ್ನೇ ಆವಾಸ ಸ್ಥಾನ ಮಾಡಿಕೊಂಡಿದ್ದರೆ, ಹುಲಿಗಳು ಮನುಷ್ಯರನ್ನೇ ಆಹಾರ ಮಾಡಿಕೊಳ್ಳುತ್ತಿವೆ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದ್ದರೂ ಯಾವುದೇ ಕ್ರಮಕ್ಕೆ ಮುಂದಾಗದೇ ಇರುವುದು ದುರಂತ. ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ಅರಣ್ಯ ಇಲಾಖೆಗೆ ಕೋಟ್ಯಂತರ ಅನುದಾನ ಬರುತ್ತದೆ. ಆದರೆ ವನ್ಯಜೀವಿಗಳು ಆಹಾರವನ್ನು ಅರಸಿ ಜನವಾಸದ ಪ್ರದೇಶಗಳಿಗೆ ದಾಳಿ ಇಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದೆ. ಕಳೆದ 25 ವರ್ಷಗಳಿಂದ ಬಿಜೆಪಿಯವರೇ ಶಾಸಕರುಗಳಾಗಿದ್ದಾರೆ. ಸಂಸದರು ಬಿಜೆಪಿಯವರೇ ಆಗಿದ್ದಾರೆ, ಆದರೆ ಕೊಡಗನ್ನು ಕಾಡುತ್ತಿರುವ ವನ್ಯಜೀವಿಗಳ ದಾಳಿಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರಕ್ಕೆ ಯಾರೂ ಪ್ರಯತ್ನಿಸಿಲ್ಲ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಶಾಸಕರುಗಳು ಎಷ್ಟು ಸಭೆಗಳನ್ನು ನಡೆಸಿದ್ದಾರೆ, ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಯಾವ ರೀತಿಯ ಶಿಫಾರಸ್ಸುಗಳನ್ನು ಮಾಡಿದ್ದಾರೆ. ಸಂಸದರು ವನ್ಯಜೀವಿಗಳ ಸಮಸ್ಯೆ ಬಗ್ಗೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆಯೇ, ಅವರು ಮೈಸೂರಿಗೆ ಮಾತ್ರ ಸಂಸದರೇ, ಕೊಡಗಿನ ಸಮಸ್ಯೆಗಳಿಗೆ ಸ್ಪಂದನೆ ಬೇಡವೇ. ಅನೇಕ ಬಾರಿ ಹುಲಿ ದಾಳಿ ನಡೆದರೂ ಒಂದು ಬಾರಿಯೂ ಸಂಸದರು ಭೇಟಿ ನೀಡಿ ಗ್ರಾಮಸ್ಥರಿಗೆ ಸಾಂತ್ವನ ಹೇಳುವ ದೊಡ್ಡತನವನ್ನು ಯಾಕೆ ಪ್ರದರ್ಶಿಸಿಲ್ಲ. ಗ್ರಾಮಸ್ಥರು ಹಾಗೂ ಅರಣ್ಯ ಅಧಿಕಾರಿಗಳ ವಿಶೇಷ ಸಭೆ ಕರೆದು ಯೋಜನೆ ರೂಪಿಸುವ ಕಾಳಜಿ ತೋರಿಲ್ಲ. ಕೊಡಗಿನ ಕೃಷಿಕ ವರ್ಗಕ್ಕೆ ಇಲ್ಲಿನ ಜನಪ್ರತಿನಿಧಿಗಳ ಬೆಂಬಲ ಸಿಗುತ್ತಿಲ್ಲ ಎಂದು ಟೀಕಿಸಿದರು.
► ''ಹೊರಗಿನ ಹುಲಿಗಳು''
ಗಾಯಗೊಂಡ ಮತ್ತು ವಯಸ್ಸಾದ ನಿಸ್ತೇಜಗೊಂಡ ಹುಲಿಗಳೇ ದಕ್ಷಿಣ ಕೊಡಗು ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದು, ರಾಜಾರೋಷವಾಗಿ ಮುಖ್ಯರಸ್ತೆಗಳಲ್ಲೇ ಸಂಚರಿಸುತ್ತಿವೆ. ಪ್ರಾಣಿಗಳನ್ನು ಬೇಟೆಯಾಡಲು ಸಾಧ್ಯವಾಗದೆ ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಹೊರ ಭಾಗದಿಂದ ಹುಲಿಗಳು ಕೊಡಗನ್ನು ಪ್ರವೇಶಿಸುತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಬೇರೆ ಜಿಲ್ಲೆಗಳಲ್ಲಿ ಸೆರೆಯಾದ ಹುಲಿಗಳನ್ನು ಇಲ್ಲಿ ತಂದು ಬಿಡುತ್ತಿರುವ ಬಗ್ಗೆ ಜನರಲ್ಲಿ ಅನುಮಾನಗಳು ಮೂಡುತ್ತಿದೆ. ತಕ್ಷಣ ಅರಣ್ಯ ಇಲಾಖೆ ಹುಲಿದಾಳಿಯ ಕುರಿತು ಕೊಡಗಿನ ಜನರಿಗೆ ಸ್ಪಷ್ಟೀಕರಣ ನೀಡಬೇಕು. ಜಿಲ್ಲೆಯಲ್ಲಿರುವ ಹುಲಿಗಳ ಸಂಖ್ಯೆ ಎಷ್ಟು, ಬೇರೆ ಪ್ರದೇಶಗಳಿಂದ ಹುಲಿಯನ್ನು ತಂದು ಬಿಡಲಾಗುತ್ತಿದೆಯೇ, ಹುಲಿದಾಳಿಗೆ ಕಾರಣವೇನು, ಗಾಯಗೊಂಡಿರುವ ಹುಲಿಗಳೆಷ್ಟು, ಎಷ್ಟು ಹುಲಿಗಳನ್ನು ಸೆರೆ ಹಿಡಿಯಲು ಅನುಮತಿ ಪಡೆಯಲಾಗಿದೆ, ಮಾನವ ಜೀವಹಾನಿಯಾದ ತಕ್ಷಣ ಹುಲಿಸೆರೆಗೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ, ಕೊಡಗಿನಲ್ಲಿರುವ ಹುಲಿಗಳ ಬಗ್ಗೆ ಅರಣ್ಯ ಇಲಾಖೆ ಅಧ್ಯಯನ ನಡೆಸಿದೆಯೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಬಹಿರಂಗ ಉತ್ತರವನ್ನು ಅರಣ್ಯ ಅಧಿಕಾರಿಗಳು ನೀಡಬೇಕು ಎಂದು ಒತ್ತಾಯಿಸಿದರು.
ಹುಲಿ ಮತ್ತು ಕಾಡಾನೆಗಳ ಉಪಟಳ ಹೆಚ್ಚು ಇರುವ ಪ್ರದೇಶದಲ್ಲಿ ಜನಪ್ರತಿನಿಧಿಗಳು ಹಾಗೂ ಅರಣ್ಯ ಅಧಿಕಾರಿಗಳು ಗ್ರಾಮಸ್ಥರ ವಿಶೇಷ ಸಭೆ ನಡೆಸಿ ವಿಶ್ವಾಸ ಮೂಡಿಸಬೇಕು. ವನ್ಯಜೀವಿಗಳ ಆತಂಕವಿರುವ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯ ಅರಣ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು. ಶಾಶ್ವತ ಪರಿಹಾರಕ್ಕೆ ಕೇಂದ್ರ ಸರ್ಕಾರದ ಮೂಲಕ ಯೋಜನೆ ರೂಪಿಸಲು ಸಂಸದರು ಮುಂದಾಗಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ ಬೆಳ್ಳಿಯಪ್ಪ, ಮಡಿಕೇರಿ ಬ್ಲಾಕ್ ಉಪಾಧ್ಯಕ್ಷ ಪ್ರಭು ರೈ, ಪ್ರಮುಖರಾದ ರವಿ ಗೌಡ ಹಾಗೂ ವೀಣಾ ಅಚ್ಚಯ್ಯರ ಆಪ್ತ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ ಉಪಸ್ಥಿತರಿದ್ದರು