ಉಡಾವಣೆಗೆ ಎರಡು ನಿಮಿಷ ಇರುವಾಗ ಉಡಾವಣೆ ರದ್ದುಗೊಳಿಸಿದ SpaceX

ನ್ಯೂಯಾರ್ಕ್: ಕೊನೇ ಕ್ಷಣದ ತಾಂತ್ರಿಕ ಸಮಸ್ಯೆಯೊಂದು ಉದ್ಭವಿಸಿದ ಕಾರಣ ನಾಸಾಗಾಗಿ ನಾಲ್ಕು ಗಗನಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಸಾಗಿಸುವ ಉದ್ದೇಶದ ತನ್ನ ಉಡಾವಣೆಯ ಯತ್ನವನ್ನು ಸ್ಪೇಸ್‌ಎಕ್ಸ್ (SpaceX) ಇಂದು ರದ್ದುಗೊಳಿಸಿದೆ.
ಉಡಾವಣೆಗೆ ಇನ್ನೇನು ಎರಡು ನಿಮಿಷಗಳಿವೆಯೆನ್ನುವಾಗ ಎಣಿಕೆಯನ್ನು ಕೆನೆಡಿ ಸ್ಪೇಸ್ ಸೆಂಟರ್‌ನಲ್ಲಿ ನಿಲ್ಲಿಸಲಾಯಿತು. ಇಂಜಿನ್ ಇಗ್ನಿಶನ್ ವ್ಯವಸ್ಥೆಯಲ್ಲಿ ದೋಷವೊಂದು ಕಂಡು ಬಂದ ಕಾರಣ ಉಡಾವಣೆಗೆ ಕೆಲವೇ ಕ್ಷಣಗಳಿರುವಾಗ ಅದನ್ನು ಸರಿಪಡಿಸುವುದು ಸಾಧ್ಯವಾಗದ ಕಾರಣ ಉಡಾವಣೆಯನ್ನು ರದ್ದುಗೊಳಿಸಲಾಯಿತು.
ಮತ್ತೆ ಯಾವಾಗ ಉಡಾವಣೆ ಯತ್ನ ನಡೆಯಲಿದೆ ಎಂಬ ಬಗ್ಗೆ ಸ್ಪೇಸ್‌ಎಕ್ಸ್ (SpaceX) ಯಾವುದೇ ಮಾಹಿತಿ ನೀಡಿಲ್ಲ. ಮುಂದಿನ ಯತ್ನ ಮಂಗಳವಾರವೂ ನಡೆಯುವ ಸಾಧ್ಯತೆಯಿದ್ದರೂ ಹವಾಮಾನ ಅನುಕೂಲಕರವಾಗಿರಲಿಕ್ಕಿಲ್ಲ ಎಂಬ ಸಂದೇಹವಿದೆ.
ಇಂದು ಫಾಲ್ಕನ್ ರಾಕೆಟ್ ಮೇಲ್ಗಡೆಯಿರುವ ಕ್ಯಾಪ್ಸೂಲ್‌ನಲ್ಲಿ ರಷ್ಯಾ ಹಾಗೂ ಯುಎಇಯ ಇಬ್ಬರು ನಾಸಾ ಗಗನಯಾತ್ರಿಗಳು ಇಂದಿನ ಉಡಾವಣೆಗಾಗಿ ಸಜ್ಜಾಗಿ ಕುಳಿತಿದ್ದರು.
ಕಮಾಂಡರ್ ಸ್ಪೀಫನ್ ಬೊವೆನ್ ಮತ್ತವರ ತಂಡವು ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದ ನಾಲ್ವರ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಲಿದೆ. ಈ ಒಂದು ತಿಂಗಳ ಕಾರ್ಯಕ್ಕೆ ನಿಯೋಜಿಸಲ್ಪಟ್ಟ ನಾಲ್ಕು ಗಗನಯಾತ್ರಿಗಳ ಪೈಕಿ ಯುಎಇ ಗಗನಯಾತ್ರಿ ಸುಲ್ತಾನ್ ಅಲ್-ನೆಯದಿ ತಮ್ಮ ದೇಶದ ಮೊದಲ ಗಗನಯಾತ್ರಿಯಾಗಿದ್ದಾರೆ.
ಇದನ್ನೂ ಓದಿ: ಅದಾನಿ ಶೇರುಗಳನ್ನು ಖರೀದಿಸಿ ದೇಶಪ್ರೇಮ ಸಾಬೀತು ಪಡಿಸಿ ಕೇಸರಿ ಚೆಡ್ಡಿಗಳೇ: ಟ್ರೋಲಿಗರಿಗೆ ಮಹುವಾ ಮೊಯಿತ್ರಾ ಸವಾಲು







