ಉಡುಪಿ: ಮೆದುಳು ನಿಷ್ಕ್ರೀಯಗೊಂಡ ಮಹಿಳೆಯಿಂದ 6 ಮಂದಿಗೆ ಜೀವದಾನ
ಅಂಗದಾನದ ಮೂಲಕ ಸಾರ್ಥಕತೆ ಪಡೆದ ದಾನಿ

ಉಡುಪಿ, ಫೆ.27: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆಯ ಹೊರತಾಗಿಯೂ ಮೆದುಳು ನಿಷ್ಕ್ರೀಯಗೊಂಡ 44 ವರ್ಷ ಪ್ರಾಯದ ಮಹಿಳೆಯೊಬ್ಬರ ಅಂಗಾಂಗ ದಾನಕ್ಕೆ ಆಕೆಯ ಕುಟುಂಬಿಕರು ನಿರ್ಧರಿಸುವ ಮೂಲಕ ಆರು ಮಂದಿ ರೋಗಿಗಳು ಇದರಿಂದ ಪ್ರಯೋಜನ ಪಡೆಯುವ ಮೂಲಕ ಸಾವಿನಲ್ಲೂ ಮಹಿಳೆ ಸಾರ್ಥಕತೆ ಕಂಡ ಘಟನೆ ಮಣಿಪಾಲದಿಂದ ವರದಿಯಾಗಿದೆ.
44 ವರ್ಷ ಪ್ರಾಯದ ಕೊಡೇರಿ ಶಿಲ್ಪಾ ಮಾಧವ ಅವರು ಫೆ.25ರಂದು ಅಪರಾಹ್ನ 1:30ರ ಸುಮಾರಿಗೆ ಬೈಂದೂರು ತಾಲೂಕಿನ ಮರವಂತೆ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅದೇ ದಿನ ಸಂಜೆ 4:58ಕ್ಕೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರಸನ್ನ ಕುಮಾರ್ ಎಂಬವರ ಪತ್ನಿಯಾದ ಕೊಡೇರಿ ಶಿಲ್ಪಾ ಮಾಧವ ಅವರು ಬೈಂದೂರು ತಾಲೂಕಿನ ಉಪ್ಪುಂದದವರು. ಅವರು ಅಪಘಾತದ ಪರಿಣಾಮದಿಂದ ತೀವ್ರತರವಾದ ಗಾಯವನ್ನು ಹೊಂದಿದ್ದರು. ಕೆಎಂಸಿಯ ತಜ್ಞ ವೈದ್ಯರು ಶಿಲ್ಪಾ ಮಾಧವರನ್ನು ಬದುಕಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸಿದರೂ, ಅವರು ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ.
ಮಾನವ ಅಂಗಾಂಗ ಕಸಿ ಕಾಯ್ದೆ 1994ರ ಅನುಸಾರ ಕೊಡೇರಿ ಶಿಲ್ಪಾ ಮಾಧವ ಅವರನ್ನು ಎರಡು ಬಾರಿ ಪರಿಶೀಲಿಸಿ, ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು ರೋಗಿಯ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ಘೋಷಿಸಿದರು. ಮೊದಲ ಸಲ ಫೆ.26ರ ಸಂಜೆ 6:29ಕ್ಕೆ ಮತ್ತು ಎರಡನೇ ಸಲ ಫೆ.27ರ ಬೆಳಗಿನ ಜಾವ 1:35ಕ್ಕೆ. ಇದರ ನಂತರ ಶಿಲ್ಪಾ ಮಾಧವ ಅವರ ಪತಿ ಪ್ರಸನ್ನ ಕುಮಾರ ಮತ್ತವರ ಕುಟುಂಬ ಸದಸ್ಯರು ಇತರ ರೋಗಿಗಳ ಜೀವ ಉಳಿಸಲು ಕಾರ್ಯಸಾಧ್ಯವಾದ ಅಂಗಗಳನ್ನು ದಾನ ಮಾಡಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು.
ಹೀಗೆ ದಾನ ಮಾಡಿದ ಎರಡು ಮೂತ್ರಪಿಂಡಗಳು, ಯಕೃತ್ತು, ಚರ್ಮ ಮತ್ತು ಎರಡು ಕಾರ್ನಿಯಾಗಳು ಒಟ್ಟು ಆರು ಜನರ ಜೀವ ಉಳಿಸಲು ಸಹಾಯ ಮಾಡಿತು ಎಂದು ವೈದ್ಯರು ತಿಳಿಸಿದ್ದಾರೆ.
ಜೀವನ ಸಾರ್ಥಕತೆ ಪ್ರೋಟೋಕಾಲ್‌ಗಳು ಮತ್ತು ನಿರ್ಧಾರಗಳ ಪ್ರಕಾರ, ಯಕೃತ್‌ನ್ನು ಬೆಂಗಳೂರಿನ ಅಸ್ಟರ್ ಸಿಎಂಐ ಆಸ್ಪತ್ರೆಗೆ, ಒಂದು ಮೂತ್ರಪಿಂಡ ವನ್ನು ಮಂಗಳೂರಿನ ಎ.ಜೆ.ಆಸ್ಪತ್ರೆ ಹಾಗೂ ಎರಡು ಕಾರ್ನಿಯಾಗಳು, ಒಂದು ಮೂತ್ರಪಿಂಡ ಹಾಗೂ ಚರ್ಮವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿನ ನೋಂದಾಯಿತ ರೋಗಿಗಳಿಗೆ ಬಳಸಲಾಯಿತು.
‘ಅಂಗದಾನ ಒಂದು ಪುಣ್ಯದ ಕೆಲಸ. ಶಿಲ್ಪಾ ಅವರು ಅಂಗಾಂಗಗಳನ್ನು ದಾನ ಮಾಡುವ ಮೂಲಕ ಅವರು ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ ಎಂದು ಪ್ರಸನ್ನ ಕುಮಾರ್ ಮತ್ತವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
‘ಕೊಡೇರಿ ಶಿಲ್ಪಾ ಮಾಧವ ಕುಟುಂಬದ ಅಂಗಾಂಗ ದಾನದ ಉದಾತ್ತ ನಿರ್ಧಾರ ಜನರ ಬದಲಾಗುತ್ತಿರುವ ಮನಸ್ಥಿತಿಯನ್ನು ತೋರಿಸುತ್ತದೆ. ಇದು ಸ್ವಾಗತಾರ್ಹ ಬದಲಾವಣೆಯಾಗಿದೆ ಮತ್ತು ಇತರರು ಇದನ್ನು ಅನುಕರಿಸುವ ಅಗತ್ಯವಿದೆ ಎಂದು ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ ಹೇಳಿದ್ದಾರೆ.
ದಾನ ಮಾಡಿದ ಅಂಗಗಳನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯ ಬೆಂಬಲ, ಸಹಕಾರದೊಂದಿಗೆ ಮಣಿಪಾಲದಿಂದ ಮಂಗಳೂರಿಗೆ ಗ್ರೀನ್ ಕಾರಿಡಾರ್ ಮೂಲಕ ಸ್ವೀಕರಿಸುವ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ ಎಂದು ಡಾ.ಅವಿನಾಶ ಶೆಟ್ಟಿ ತಿಳಿಸಿದ್ದಾರೆ.
ಮಕ್ಕಳ ನೆಚ್ಚಿನ ಶಿಕ್ಷಕಿ
ಶಿಲ್ಪಾ ಮಾಧವ ಅವರು ಎರಡು ದಶಕಗಳಿಂದ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತಿದ್ದರು. ಕಳೆದ ಶನಿವಾರ ಅಪರಾಹ್ನ ತಾನು ಕೆಲಸ ಮಾಡುತ್ತಿದ್ದ ಮರವಂತೆ ಸರಕಾರಿ ಪ್ರೌಢ ಶಾಲೆಯಿಂದ ಸ್ಕೂಟರ್‌ನಲ್ಲಿ ಮನೆಗೆ ಬರುತಿದ್ದಾಗ ಅಪಘಾತ ನಡೆದಿತ್ತು. ಮರವಂತೆ ಸಮೀಪವೇ ಕಾರೊಂದು ಅವರ ಇಲೆಕ್ಟ್ರಿಕ್ ಸ್ಕೂಟರ್‌ಗೆ ಢಿಕ್ಕಿ ಹೊಡೆದಿತ್ತು.
ಅಪಘಾತದ ರಭಸಕ್ಕೆ ರಸ್ತೆಗೆ ಬಿದ್ದಿದ್ದ ಅವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಕಾರಿನ ಚಾಲಕ ಅವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಅವರನ್ನು ಮಣಿಪಾಲಕ್ಕೆ ವರ್ಗಾಯಿಸಲಾಗಿತ್ತು. ಶಿಲ್ಪಾ ಮಾಧವ ಅವರು ಸಮಾಜ ಸೇವಕ ಪತಿ ಪ್ರಸನ್ನ ಕುಮಾರ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
.jpeg)



.jpeg)