ಕಾಪುವಿನಲ್ಲಿ ಉಡುಪಿ ಜಿಲ್ಲೆಯ ಫಲಾನುಭವಿಗಳ ಬೃಹತ್ ಸಮ್ಮೇಳನ: ಸಚಿವ ಎಸ್.ಅಂಗಾರ

ಉಡುಪಿ: ಜಿಲ್ಲೆಯಲ್ಲಿ ಸರಕಾರದ ವಿವಿಧ ಯೋಜನೆಗಳ ಸವಲತ್ತು ಗಳನ್ನು ಫಲಾನುಭವಿಗಳಿಗೆ ನೇರವಾಗಿ ವಿತರಿಸಲು ಜಿಲ್ಲಾ ಮಟ್ಟದ ಫಲಾನುಭವಿಗಳ ಬೃಹತ್ ಸಮ್ಮೇಳನವನ್ನು ಮಾರ್ಚ್ 5ರಂದು ಕಾಪು ಕ್ಷೇತ್ರದಲ್ಲಿ ಆಯೋಜಿಸಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಸೂಚನೆ ನೀಡಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ, ಜಿಲ್ಲಾ ಮಟ್ಟದಲ್ಲಿ ಫಲಾನುಭವಿಗಳ ಸಮ್ಮೇಳನ ಆಯೋಜನೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯ ಸಾರ್ವಜನಿಕರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳ ಮೂಲಕ ಫಲಾನುಭವಿ ಆಧಾರಿತ ವಿವಿಧ ಇಲಾಖೆಗಳ ಯೋಜನೆಗಳ ಸವಲತ್ತುಗಳನ್ನು ಒಂದೇ ವೇದಿಕೆಯಲ್ಲಿ ವಿತರಿಸಲು ಅನುಕೂಲ ವಾಗುವಂತೆ ಎಲ್ಲಾ ಇಲಾಖೆಗಳು ತಮ್ಮಲ್ಲಿನ ಫಲಾನುಭವಿ ಆಧಾರಿತ ಯೋಜನೆಗಳಡಿಯಲ್ಲಿ ನೀಡುವ ಸವಲತ್ತುಗಳ ಬಗ್ಗೆ ವಿವರವಾದ ಮಾಹಿತಿ ಯನ್ನು ನೀಡುವಂತೆ ಸಚಿವರು ತಿಳಿಸಿದರು.
ಎಲ್ಲಾ ಇಲಾಖೆಗಳು ತಮಗೆ ನೀಡಿರುವ ಫಲಾನುಭವಿ ಆಧಾರಿತ ಗುರಿಯಲ್ಲಿ ಸಂಪೂರ್ಣ ಪ್ರಗತಿ ಸಾಧಿಸಿ ಜಿಲ್ಲೆಯ ಯಾವುದೇ ಫಲಾನುಭವಿ ಸವಲತ್ತುಗಳಿಂದ ವಂಚಿತರಾಗದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸು ವಂತೆ ಸೂಚನೆ ನೀಡಿದ ಸಚಿವರು, ಯೋಜನೆಯ ಅನುಷ್ಠಾನಕ್ಕೆ ಅನುದಾನದ ಕೊರತೆ ಅಥವಾ ಮತ್ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ತಮ್ಮ ಗಮನಕ್ಕೆ ತರುವಂತೆ ಹಾಗೂ ಈ ಬಗ್ಗೆ ಸಂಬಂಧಪಟ್ಟ ಸಚಿವರು ಮತ್ತು ಇಲಾಖೆಗಳ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿ, ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ರಾಜ್ಯಮಟ್ಟದಲ್ಲಿ ಎಲ್ಲಾ ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯ ಎಲ್ಲಾ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸುವ ಮೂಲಕ ಅವರ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡುವ ಜೊತೆಗೆ ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನ ಮತ್ತು ಅನುದಾನದ ಸದ್ಬಳಕೆ ಇದರಿಂದ ಸಾಧ್ಯವಾಗಲಿದೆ. ಇಲಾಖೆಗಳಲ್ಲಿ ಇದುವರೆಗೆ ಅನುದಾನ ಲಭ್ಯವಿದ್ದು, ಫಲಾನುಭವಿಗಳನ್ನು ಗುರುತಿಸಲು ಸಾಧ್ಯವಾಗದೇ ಇದ್ದಲ್ಲಿ, ಈ ಬಗ್ಗೆ ಅಧಿಕಾರಿಗಳು ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗುವಂತೆ ತಿಳಿಸಿದರು.
ಕೃಷಿ, ಮೀನುಗಾರಿಕೆ, ತೋಟಗಾರಿಕೆ, ಪಶುಪಾಲನೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ, ವಿವಿಧ ನಿಗಮಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಇಲಾಖೆ, ಕಾರ್ಮಿಕ ಇಲಾಖೆ, ಕೈಗಾರಿಕಾ ಇಲಾಖೆ, ಕಂದಾಯ ಇಲಾಖೆಯ ೯೪ಸಿ, ೯೪ ಸಿಸಿ ಹಕ್ಕುಪತ್ರಗಳು, ಪಿಂಚಣಿ ಆದೇಶಗಳು, ಪಡಿತರ ಚೀಟಿ ಮತ್ತಿತರ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸುವಂತೆ ಸೂಚಿಸಿದ ಸಚಿವರು, ಎಲ್ಲಾ ಫಲಾನುಭವಿಗಳಿಗೆ ನೇರವಾಗಿ, ಒಂದೇ ವೇದಿಕೆಯಲ್ಲಿ ಸವಲತ್ತು ವಿತರಿಸಲು ಅನುಕೂಲವಾಗುವಂತೆ ಅವರನ್ನು ಕಾರ್ಯಕ್ರಮಕ್ಕೆ ಕರೆತರಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದರು.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಸಹ ಫಲಾನುಭವಿಗಳ ಸಮ್ಮೇಳನ ಆಯೋಜನೆಗೆ ಅಗತ್ಯ ಪೂರ್ವ ತಯಾರಿಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದ ಸಚಿವರು, ಈ ಕಾರ್ಯಕ್ರಮದಲ್ಲಿ ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಸಾರ್ವಜನಿಕರಿಗೆ ಸರಕಾರದ ಸವಲತ್ತುಗಳ ಪ್ರಯೋಜನ ದೊರೆಯುವಂತೆ ನೋಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ಪ್ರೊಬೇಷನರಿ ಐಎಎಸ್ ಅಧಿಕಾರಿ ಯತೀಶ್, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.







