ವಿಟ್ಲ: ಕುತ್ತಿಗೆ ಹಿಸುಕಿ ಪತಿಯ ಕೊಲೆ ಪ್ರಕರಣ; ಆರೋಪಿ ಪತ್ನಿ ಸಹಿತ ಇಬ್ಬರ ಬಂಧನ

ವಿಟ್ಲ: ಇಡ್ಕಿದು ಕುಮೇರು ನಿವಾಸಿ ಅರವಿಂದ ಭಾಸ್ಕರ (39) ಎಂವರನ್ನು ಅವರ ಪತ್ನಿ ಹಾಗೂ ಆಕೆಯ ಪರಿಚಯಸ್ಥ ಸೇರಿಕೊಂಡು ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ದೃಢಪಟ್ಟಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅರವಿಂದ ಅವರ ಪತ್ನಿ ಆಶಾ ಹಾಗೂ ಅವರ ಮನೆಯ ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದ ಯೋಗೀಶ ಗೌಡ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಅರವಿಂದ ಭಾಸ್ಕರ ಅವರು ಸುಮಾರು 2 ವರ್ಷಗಳಿಂದ ಹೊಸ ಮನೆಯನ್ನು ಕಟ್ಟಲು ಆರಂಭಿಸಿದ್ದು, ಅದರ ಸೆಂಟ್ರಿಂಗ್ ಕೆಲಸವನ್ನು ಯೋಗೀಶ ಗೌಡ ನಿರ್ವಹಿಸುತ್ತಿದ್ದು, ಆತ ಅರವಿಂದ ಭಾಸ್ಕರನ ಪತ್ನಿ ಆಶಾಳೊಂದಿಗೆ ಅನ್ಯೋನ್ಯವಾಗಿದ್ದ ಎಂದು ತಿಳಿದುಬಂದಿದೆ. ಅರವಿಂದ ಭಾಸ್ಕರ ಅವರು ಅಡಿಕೆ ಮಾರಾಟ ಮಾಡಿ ಬಂದ ಹಣವನ್ನು ದುಂದುವೆಚ್ಚ ಮಾಡುತ್ತಿದ್ದ ಬಗ್ಗೆ ಪತ್ನಿ ಆಕ್ಷೇಪಿಸುತ್ತಿದ್ದುದಲ್ಲದೇ, ಯೋಗೀಶ ಆಶಾಳೊಂದಿಗೆ ಸೇರಿಕೊಂಡು ಅರವಿಂದ ಭಾಸ್ಕರನಿಗೆ ಹಲ್ಲೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಫೆ. 26ರಂದು ಬೆಳಗ್ಗೆ 8ಗಂಟೆಯ ಸುಮಾರಿಗೆ ತಂದೆಗೆ ಫೋನ್ ಕರೆ ಮಾಡಿದ ಆಶಾ ಪತಿ ನಿನ್ನೆ ರಾತ್ರಿ 10ಗಂಟೆಗೆ ಮನೆಯ ಕೋಣೆಯಲ್ಲಿ ಮಲಗಿದ್ದು, ಬೆಳಗ್ಗಿನ ಜಾವ 7.30ರ ಸುಮಾರಿಗೆ ನೋಡುವಾಗ ಮಲಗಿದ್ದಲ್ಲಿಂದ ಏಳುತ್ತಿಲ್ಲ, ಮನೆಗೆ ಬನ್ನಿ ಎಂದು ತಿಳಿಸಿದ್ದಾಳೆ. ಬಳಿಕ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ವೈದ್ಯರು ಅರವಿಂದ ಭಾಸ್ಕರನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಮೃತದೇಹವನ್ನು ಪರಿಶೀಲಿಸಿದಾಗ ಕುತ್ತಿಗೆಯನ್ನು ಅಮುಕಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಂಶಯ ವ್ಯಕ್ತವಾಗಿದೆ ಎಂದು ವಿಟ್ಲಕಸಬಾ ಗ್ರಾಮದ ಮೇಗಿನಪೇಟೆ ನಿವಾಸಿ ರಘುನಾಥ ಕೊಟ್ಟ ದೂರಿನಲ್ಲಿ ತಿಳಿಸಿದ್ದಾರೆ.