ಟ್ವಿಟರ್‌ನಿಂದ ಮತ್ತೆ ಕನಿಷ್ಠ 200 ಉದ್ಯೋಗಿಗಳ ವಜಾ

ಹೊಸದಿಲ್ಲಿ,ಫೆ.27: ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್(Twitter) ಶನಿವಾರ ಮತ್ತೆ ಕನಿಷ್ಠ 200 ಉದ್ಯೋಗಿಗಳನ್ನು ಸೇವೆಯಿಂದ ವಜಾಗೊಳಿಸಿದೆ. ಇದರೊಂದಿಗೆ ಟ್ವಿಟರ್ ನಲ್ಲಿ ಉಳಿದುಕೊಂಡಿದ್ದ ಸುಮಾರು 2,000 ಉದ್ಯೋಗಿಗಳ ಪೈಕಿ ಶೇ.10ರಷ್ಟು ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ನ
ಶನಿವಾರ ತಮಗೆ ಕಳುಹಿಸಲಾಗಿದ್ದ ಇ-ಮೇಲ್ ಮೂಲಕ ತಮ್ಮನ್ನು ವಜಾಗೊಳಿಸಲಾಗಿದೆ ಎಂದು ಕೆಲವು ಉದ್ಯೋಗಿಗಳಿಗೆ ಗೊತ್ತಾಗಿದ್ದರೆ, ಇಂಟರ್ನಲ್ ವರ್ಕ್ ಪೋರ್ಟಲ್ ಗೆ ಲಾಗಿನ್ ಆಗಲು ಸಾಧ್ಯವಾಗದಿದ್ದಾಗ ತಮ್ಮನ್ನು ವಜಾಗೊಳಿಸಲಾಗಿರುವ ಸೂಚನೆ ಸಿಕ್ಕಿತ್ತು ಎಂದು ಇತರರು ಟ್ವೀಟಿಸಿದ್ದಾರೆ.
ಟೆಸ್ಲಾ ಸ್ಥಾಪಕ ಎಲಾನ್ ಮಸ್ಕ್(Elon Musk) ಒಡೆತನದ ಟ್ವಿಟರ್ ತನ್ನ ಆಂತರಿಕ ಸಂದೇಶ ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ಉದ್ಯೋಗಿಗಳು ಪರಸ್ಪರ ಸಂವಹನ ನಡೆಸುವುದಕ್ಕೆ ಅಥವಾ ಕಂಪನಿಯ ಡೇಟಾ ನೋಡುವುದಕ್ಕೂ ತಡೆಯನ್ನೊಡ್ಡಿದೆ.
ಶನಿವಾರದ ಟ್ವಿಟರ್ ನ ವಜಾ ಕ್ರಮಕ್ಕೆ ಮಷಿನ್ ಲರ್ನಿಂಗ್ ಮತ್ತು ಸೈಟ್ ರಿಲಾಯಬಿಲಿಟಿ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ಪ್ರಾಡಕ್ಟ್ ಮ್ಯಾನೇಜರ್ ಗಳು, ಡೇಟಾ ಸೈಂಟಿಸ್ಟ್ ಗಳು ಮತ್ತು ಇಂಜಿನಿಯರ್ ಗಳು ತುತ್ತಾಗಿದ್ದಾರೆ.
ಕಂಪನಿಯ ಪ್ರಾಡಕ್ಟ್ ಮ್ಯಾನೇಜರ್ ಮತ್ತು ಟ್ವಿಟರ್ ಪೇಮೆಂಟ್ಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್ತರ್ ಕ್ರಾಫರ್ಡ್ ಮತ್ತು ಅವರ ತಂಡ ವಜಾಗೊಳಿಸಲಾದ ಉದ್ಯೋಗಿಗಳಲ್ಲಿ ಸೇರಿದ್ದಾರೆ.
ಗಮನಾರ್ಹವಾಗಿ, ಅಕ್ಟೋಬರ್ ನಲ್ಲಿ ಮಸ್ಕ್ರಿಂದ ಟ್ವಿಟರ್ ಸ್ವಾಧೀನವನ್ನು ಬೆಂಬಲಿಸಿದ್ದ ಉದ್ಯೋಗಿಗಳಲ್ಲಿ ಕ್ರಾಫರ್ಡ್ ಸೇರಿದ್ದರು.
ಮಸ್ಕ್ ಟ್ವಿಟರ್ ಅನ್ನು ಸ್ವಾಧೀನ ಪಡಿಸಿಕೊಂಡ ಬೆನ್ನಿಗೇ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪರಾಗ ಅಗರವಾಲ್, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಹಾಗೂ ಕಾನೂನು ವ್ಯವಹಾರಗಳು ಮತ್ತು ನೀತಿ ಮುಖ್ಯಸ್ಥೆ ವಿಜಯಾ ಗದ್ದೆ ಅವರನ್ನು ತೆಗೆದಿದ್ದರು. ನ.5ರಂದು ಟ್ವಿಟರ್ ವಿಶ್ವಾದ್ಯಂತದ ತನ್ನ ಶೇ.50ರಷ್ಟು ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿತ್ತು.







