ಬೆಂಗಳೂರು: ಮದ್ಯ ಸೇವಿಸಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ವ್ಯಕ್ತಿ ಆತ್ಮಹತ್ಯೆ

ಬೆಂಗಳೂರು, ಫೆ.27: ಮದ್ಯ ಸೇವಿಸಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಗರಬಾವಿಯ ಪಾಪರೆಡ್ಡಿಪಾಳ್ಯ ಸರ್ಕಲ್ ಬಳಿ ವರದಿಯಾಗಿದೆ.
ಆತ್ಮಹತ್ಯೆಗೆ ಶರಣಾದವನನ್ನು ಚನ್ನಪಟ್ಟಣ ತಾಲೂಕಿನ ಮಾದೇವ(40) ಎಂದು ಗುರುತಿಸಲಾಗಿದೆ. ಕಳೆದ 15 ವರ್ಷಗಳ ಹಿಂದೆ ಯಶೋಧಮ್ಮ ಜೊತೆ ವಿವಾಹವಾಗಿದ್ದ ಮಾದೇವ, ಪ್ರತಿದಿನ ಕುಡಿದು ಬಂದು ಮನೆಯಲ್ಲಿ ಜಗಳ ಮಾಡುತ್ತಿದ್ದು ಪತಿಯ ಗಲಾಟೆಯಿಂದ ಬೇಸತ್ತು ಹಲವು ಬಾರಿ ಯಶೋಧಮ್ಮ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ಕರೆಸಿ ಬುದ್ಧಿ ಹೇಳಿದ್ದರೂ ಮಾದೇವನ ವರ್ತನೆ ಸರಿ ಹೋಗಿರಲಿಲ್ಲ, ರವಿವಾರ ಬೆಳಗ್ಗೆ ಯಶೋಧಮ್ಮ ಪತಿಗೆ 150 ರೂ. ನೀಡಿದ್ದು ಅದರಿಂದ ಕಂಠ ಪೂರ್ತಿ ಕುಡಿದು ಸಂಜೆ ಮತ್ತೆ ಪತ್ನಿ ಜೊತೆ ಜಗಳವಾಡಿದ್ದಾರೆನ್ನಲಾಗಿದೆ.
ಹೀಗಾಗಿ ಯಶೋಧಮ್ಮ ಕರೆ ಮಾಡಿ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಮನೆ ಬಳಿ ಬಂದ ಪೊಲೀಸರು ಮಾದೇವನಿಗೆ ಬುದ್ಧಿ ಹೇಳಿ ತೆರಳಿದ್ದಾರೆ ಎಂದು ಹೇಳಲಾಗಿದೆ.
ಇದಾದ ಬಳಿಕ ಮನೆಯಿಂದ ತೆರಳಿದ ಮಾದೇವ, ಪಾಪರೆಡ್ಡಿ ಪಾಳ್ಯ ಸರ್ಕಲ್ ಬಳಿ ಬಂದು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಅನ್ನಪೂರ್ಣೇಶ್ವರಿನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.