ಮೀನುಗಾರ ಮೊಗೇರರಿಂದ ಪ.ಜಾ. ಪ್ರಮಾಣ ಪತ್ರ ಪಡೆಯಲು ಮತ್ತೆ ಹುನ್ನಾರ: ದ.ಕ.ಜಿಲ್ಲಾ ದಲಿತ ಸಂಘಟನೆಗಳ ಆಕ್ರೋಶ
ಫೆ.28ರ ‘ಅಂಬೇಡ್ಕರ್ ದೀಕ್ಷಾ’ ಕೈ ಬಿಡಲು ಆಗ್ರಹ

ಮಂಗಳೂರು, ಫೆ.27: ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಮೊಗೇರರು ವಾಮಮಾರ್ಗದಿಂದ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆಯಲು ಮತ್ತೆ ಹುನ್ನಾರ ನಡೆಸಿರುವುದನ್ನು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದ.ಕ.ಜಿಲ್ಲಾ ದಲಿತ ಸಂಘಟನೆಗಳ ಮುಖಂಡರು, ಫೆ.28ರ ಅಂಬೇಡ್ಕರ್ ದೀಕ್ಷಾ ಕಾರ್ಯಕ್ರಮ ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ.ಕ.ಜಿಲ್ಲಾ ಸಂಘಟನೆಗಳ ಸಮನ್ವಯ ಸಮಿತಿಯ ಪ್ರಧಾನ ಸಂಚಾಲಕ ಎಂ.ದೇವದಾಸ್ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಮೊಲ ಬೇಟೆಯಾಡುವ ಹಿನ್ನೆಲೆಯುಳ್ಳ ಮೊಗೇರ ಜಾತಿಯ ಸಮಾನಾಂತರ ಪದವುಳ್ಳ ಉತ್ತರ ಕನ್ನಡ ಜಿಲ್ಲೆಯ ಮೀನುಗಾರಿಕೆ ವೃತ್ತಿಯನ್ನು ಮಾಡುತ್ತಿರುವ ಸವರ್ಣೀಯ ಮೊಗೇರರು ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆಯಲು ಕಳೆದ 8 ತಿಂಗಳಿನಿಂದ ಮತ್ತೆ ಹೋರಾಟ ನಡೆಸುತ್ತಿದ್ದಾರೆ. ಎಲ್ಲಾ ವಿಧದಲ್ಲೂ ಹರಸಾಹಸ ಮಾಡಿದ ಸವರ್ಣೀಯ ಮೊಗೇರರು ಫೆ.28ರಂದು ಭಟ್ಕಳದಲ್ಲಿ ಅಂಬೇಡ್ಕರ್ ದೀಕ್ಷಾ ಕಾರ್ಯಕ್ರಮ ಆಯೋಜಿಸಿ ದಲಿತ ಸಮುದಾಯದಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಈ ಕಾರ್ಯಕ್ರಮವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಕೇವಲ ಜಾತಿ ಪ್ರಮಾಣ ಪತ್ರ ಪಡೆಯಲು ನಡೆಸುವ ಷಡ್ಯಂತ್ರ ಇದಾಗಿದೆ. ಅಲ್ಲದೆ ಚುನಾವಣೆ ಸಮೀಪಿಸುವಾಗ ಬಿಜೆಪಿ ಈ ಮೂಲಕ ರಾಜಕೀಯ ಸಂಚು ನಡೆಸುತ್ತಿದೆ. ಈ ಕಾರ್ಯಕ್ರಮಕ್ಕೆ ಕೆಲವು ದಲಿತ ಸಂಘಟನೆಗಳ ಮುಖಂಡರನ್ನು ಕೂಡ ಆಹ್ವಾನಿಸಲಾಗಿದ್ದು, ಈ ಪೈಕಿ ಕೆಲವರಿಗೆ ವಸ್ತುಸ್ಥಿತಿ ಮನವರಿಕೆಯಾಗಿದೆ ಎಂದು ದೇವದಾಸ್ ಹೇಳಿದರು.
ಪರಿಶಿಷ್ಟ ಜಾತಿಯವರಲ್ಲದ ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಮೊಗೇರರು ಅನೇಕ ವರ್ಷಗಳಿಂದ ತಾವು ಕೂಡ ಅಸ್ಪ್ರಶ್ಯ ಜಾತಿಯ ಮೊಗೇರರು ಎಂದಯ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡು ದ.ಕ. ಮತ್ತು ಉಡುಪಿ ಜಿಲ್ಲೆಯ ಮೊಲ ಬೇಟೆಯಾಡುವ ವೃತ್ತಿ ಹಿನ್ನೆಲೆಯ ಹಾಗೂ ಪರಿಶಿಷ್ಟ ಜಾತಿಯ 101 ಜಾತಿಗಳ ಪೈಕಿ ದಯನೀಯ ಜೀವನ ಮಟ್ಟದಲ್ಲಿರುವ ಸಮುದಾಯಗಳ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಮೀನುಗಾರ ಮೊಗೇರ ಸಮುದಾಯವು ರಾಜ್ಯ ಹಿಂದುಳಿದ ಜಾತಿಯ ಪ್ರವರ್ಗ 1ರಲ್ಲಿರುವ ಜಾತಿಯವರಾಗಿದ್ದಾರೆ. ಮೀನುಗಾರ ಸಮುದಾಯದ ಗಂಗಾಮತ, ಬೆಸ್ತ ಮುಂತಾವುಗಳ ಉಪ ಜಾತಿಯಾಗಿದೆ.ದ.ಕ.ಜಿಲ್ಲೆಯ ಮೊಗವೀರ ಜಾತಿಯೊಂದಿಗೆ ವೈವಾಹಿಕ ಸಂಬಂಧ ಹೊಂದಿದ್ದಾರೆ. ಮೊಲ ಬೇಟೆಯಾಡುವ ವೃತ್ತಿ ಹಿನ್ನೆಲೆಯ ಮೊಗೇರ ಜಾತಿಯವರೊಂದಿಗೆ ಈ ಮೀನುಗಾರ ಮೊಗೇರ ಮತ್ತು ಮೊಗವೀರರಿಂದ ಅಸ್ಪಶ್ಯತೆ ಆಚರಣೆ ಇರುತ್ತದೆ ಎಂದು ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಂಚಾಡಿ ಆರೋಪಿಸಿದರು.
ಪರಿಶಿಷ್ಟರ ಸಂವಿಧಾನಿಕ ಹಕ್ಕನ್ನು ಉಳಿಸಿಕೊಳ್ಳಲು ಮತ್ತು ಪರಿಶಿಷ್ಟರ ಮೀಸಲಾತಿ ಹಕ್ಕನ್ನು ಕಸಿಯಲು ಪ್ರಯತ್ನಿಸುತ್ತಿರುವ ದಲಿತ ವಿರೋಧಿ ಶಕ್ತಿಗಳ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ನಾವು ಹಿಂದೂಗಳಲ್ಲ: ದಲಿತರಾದ ನಾವು ಹಿಂದೂಗಳಲ್ಲ. ಭೌದ್ಧ ಧರ್ಮೀಯರು. ಹಿಂದೂ ಧರ್ಮದಲ್ಲಿರುವವರೆಗೆ ನಮಗೆ ಅಸ್ಪ್ರಶ್ಯ ತಪ್ಪಿದ್ದಲ್ಲ. ಅದರಿಂದ ಹೊರಗೆ ಬಂದಾಗಲೇ ಸ್ಪ್ರಶ್ಯರು. ಅದಕ್ಕಾಗಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಎಂ. ದೇವದಾಸ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮನ್ವಯ ಸಮಿತಿಯ ಉಪ ಪ್ರಧಾನ ಸಂಚಾಲಕ ರಮೇಶ್ ಕೋಟ್ಯಾನ್, ರಾಜ್ಯ ಮೊಗೇರ ಸಂಘದ ನಿಕಟಪೂರ್ವ ಅಧ್ತಕ್ಷ ಸುಂದರ ಮೇರ, ಪ್ರೇಮ್ ಬಳ್ಳಾಲ್‌ಬಾಗ್, ಕಿರಣ್ ಶಿರೂರ್, ರವೀಂದ್ರ ಮಂಗಳ, ಚಂದ್ರಹಾಸ, ಗಿರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.







