ಮಾ.1ರಿಂದ ಸರಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಬೆಂಗಳೂರು, ಫೆ.27: ಸರಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆಯನ್ನು ಜಾರಿ ಮಾಡಬೇಕು ಹಾಗೂ ಏಳನೆ ವೇತನ ಆಯೋಗದ ಮಧ್ಯಂತರ ವರದಿಯನ್ನು ಪಡೆದು ಜಾರಿ ಮಾಡಬೇಕು ಎಂದು ಒತ್ತಾಯಿಸಿ ಸರಕಾರಿ ನೌಕರರು ನಾಳೆಯಿಂದ(ಮಾ.1) ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರವನ್ನು ನಡೆಸಲಿದ್ದಾರೆ.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ಪ್ರಕಟನೆ ಹೊರಡಿಸಿದ್ದು, ಆರೋಗ್ಯ ಇಲಾಖೆಯಲ್ಲಿ ತರ್ತು ಸೇವೆಗಳ ಸಿಬ್ಬಂದಿಗಳು ಮಾತ್ರ ಕಪ್ಪುಪಟ್ಟಿಯನ್ನು ಧರಿಸಿ ಕರ್ತವ್ಯಕ್ಕೆ ಹಾಜರಾಗಬೇಕು. ಉಳಿದ ಎಲ್ಲ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಕರ್ತವ್ಯಕ್ಕೆ ಗೈರುಹಾಜರಾಗಬೇಕು ಎಂದು ತಿಳಿಸಿದೆ.
ಮುಷ್ಕರ ನಡೆಯುತ್ತಿರುವ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರತಿಭಟನೆ, ಉಪವಾಸ, ಧರಣಿ ಸತ್ಯಾಗ್ರಹ, ಘೋಷಣೆಗಳನ್ನು ಕೂಗುವುದನ್ನು ನಿರ್ಬಂಧಿಸಲಾಗಿದೆ. ಶಾಂತಿಯುತವಾಗಿ ಕರ್ತವ್ಯಕ್ಕೆ ಗೈರುಹಾಜರಾಗುವ ಮೂಲಕ ಹೋರಾಟವನ್ನು ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸರಕಾರ ಹಾಗೂ ಯಾವುದೇ ಜನಪ್ರತಿನಿಧಿಗಳನ್ನು ಟೀಕಿಸಬಾರದು ಎಂದು ತಿಳಿಸಿದೆ.
Next Story





