ಬುಲ್ಡೋಜರ್ ನಿಂದ ಮನೆ ರಕ್ಷಿಸಿಕೊಳ್ಳಲು ಶತಾಯುಷಿ, ಮಾಜಿ ಚಂಬಲ್ ಡಕಾಯಿತ ಹೋರಾಟ

ಭೋಪಾಲ್: 1960ರ ದಶಕದಲ್ಲಿ 125 ಮಂದಿಯನ್ನು ಕೊಂದಿದ್ದಾಗಿ ಘೋಷಿಸಿಕೊಂಡಿರುವ ಚಂಬಲ್ ಕಣಿವೆಯ ಮಾಜಿ ಡಕಾಯಿತ, ಶತಾಯುಷಿ ಪಂಚಮ್ ಸಿಂಗ್ ಚೌಹಾಣ್ ಇದೀಗ ಆಧ್ಯಾತ್ಮಿಕ ಸಂಘಟನೆಯೊಂದಕ್ಕೆ ತಾನು ಕೊಡುಗೆಯಾಗಿ ನೀಡಿರುವ ಮನೆಯನ್ನು ರಕ್ಷಿಸಿಕೊಳ್ಳಲು ಸರ್ಕಾರದ ವಿರುದ್ಧ ಹೋರಾಟದ ಹಾದಿ ಹಿಡಿದಿದ್ದಾರೆ. ಮಧ್ಯಪ್ರದೇಶದ ಭಿಂದ್‍ನ ಲಹರ್ ನಗರ ಪಾಲಿಕೆ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಈ ಮನೆಯನ್ನು ನೆಲಸಮ ಮಾಡಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಚೌಹಾಣ್ ಹೋರಾಟದ ಹಾದಿ ಹಿಡಿದಿದ್ದಾರೆ.
'ಡಾಕು' ಪಂಚಮ್ ಸಿಂಗ್ ಅರ್ಧ ಶತಮಾನದ ಹಿಂದೆ 500 ಡಕಾಯಿತರ ಗ್ಯಾಂಗ್‍ನ ನಾಯಕನಾಗಿದ್ದ ಹಾಗೂ ಈತನನ್ನು ಹುಡುಕಿಕೊಟ್ಟವರಿಗೆ 2 ಕೋಟಿ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಆದರೆ ತನಗೆ ಮರಣ ದಂಡನೆ ವಿಧಿಸಲಾಗುವುದಿಲ್ಲ ಎಂಬ ಷರತ್ತಿನ ಮೇಲೆ 1972ರಲ್ಲಿ ಇಂದಿರಾಗಾಂಧಿ ಸರ್ಕಾರದ ಮುಂದೆ ಈತ ಶರಣಾಗಿದ್ದ. ಜೈಲಿನಿಂದ ಬಿಡುಗಡೆಯಾದ ಬಳಿಕ ಈತ ಡಕಾಯಿತಿಯಿಂದ ಆಧ್ಯಾತ್ಮಿಕ ಪ್ರವಚನಕಾರನಾಗಿ ಪರಿವರ್ತನೆಗೊಂಡಿದ್ದ. ಇದೀಗ ಲಹರ್‍ನಲ್ಲಿ ಹೊಂದಿರುವ ಮನೆಯನ್ನು ನೆಲಸಮ ಮಾಡಲು ಮುಂದಾದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.
"ಈ ಕಟ್ಟಡಕ್ಕೆ ಏನಾದರೂ ಆದಲ್ಲಿ ತಂದೆ ಸಾಯುವುದು ಖಚಿತ" ಎಂದು ಪಂಚಮ್‍ಸಿಂಗ್ ಪುತ್ರ ಸಂತೋಷ್ ಹೇಳಿದ್ದಾರೆ. ಲಹರ್ ಪಾಲಿಕೆ ಈಗಾಗಲೇ ಕಟ್ಟಡ ತೆರವುಗೊಳಿಸುವಂತೆ ನೋಟಿಸ್ ನೀಡಿದೆ. ಮನೆಯ ಹಿಂದಿನ ಭೂಮಿಯನ್ನು ಶಾಂಪಿಂಗ್ ಕಾಂಪ್ಲೆಕ್ಸ್ ಆಗಿ ಪರಿವರ್ತಿಸುವುದಾಗಿ ಪಾಲಿಕೆ ಹೇಳಿದೆ. ಇದಕ್ಕಾಗಿ ನಮಗೆ ಸೇರಿದ ಕಟ್ಟಡವನ್ನು ನೆಲಸಮ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
"ನಾವು ಇದಕ್ಕೆ ಪರಿಹಾರ ಕೇಳಿದ್ದೇವೆ. ಇದನ್ನು ನೀಡಲು ಪಾಲಿಕೆ ನಿರಾಕರಿಸಿದೆ. ಇದರಿಂದ ತಂದೆ ಆಮರಣಾಂತ ಉಪವಾಸ ಕೈಗೊಂಡಿದ್ದಾರೆ" ಎಂದು ವಿವರಿಸಿದ್ದಾರೆ.







