ಚಿಕ್ಕಮಗಳೂರು: ಮುಳ್ಳುಹಂದಿ ಬೇಟೆಯಾಡಲು ಗುಹೆಯೊಳಗೆ ತೆರಳಿದ್ದ ಇಬ್ಬರು ಸಾವು
ಚಿಕ್ಕಮಗಳೂರು: ಮುಳ್ಳುಹಂದಿ ಬೇಟೆಗೆ ಹಂದಿಗಳ ಗುಹೆಯೊಳಗೆ ತೆರಳಿದ್ದ ಇಬ್ಬರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಆನೆಗುಂದಿ ಗ್ರಾಮದಲ್ಲಿ ಸೋಮವಾರ ವರದಿಯಾಗಿದೆ.
ಮೃತರನ್ನು ತಮಿಳುನಾಡು ಮೂಲದ ಕಾರ್ಮಿಕ ಗೊವಿಂದರಾಜು (3೦) ವಿಜಯ್ ಕುಮಾರ್ (29) ಎಂದು ಗುರುತಿಸಲಾಗಿದೆ.
ಕಾಫಿ ತೋಟದ ಕೆಲಸಕ್ಕೆ ತಮಿಳುನಾಡಿನಿಂದ ಬಂದಿದ್ದ ನಾಲ್ವರು ಕಾರ್ಮಿಕರು ಮಾಳಿಗನಾಡು ಸಮೀಪದ ಆನೆಗುಂದಿ ಎಸ್ಟೇಟ್‌ನ ಸಮೀಪದ ಬೆಟ್ಟದ ಸುರಂಗದಲ್ಲಿ ಮುಳ್ಳುಹಂದಿ ಹಿಡಿಯುಲು ತೆರಳಿದ್ದರು. ಈ ವೇಳೆ ಮಣ್ಣು ಕುಸಿತವಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆನ್ನಲಾಗಿದೆ.
ಮುಳ್ಳುಹಂದಿ ಗುಹೆಗೆ ಹೊಗೆ ಹಾಕಿ ನಂತರ ಒಬ್ಬೊಬ್ಬರಾಗಿ ಸುರಂಗದ ಒಳಗೆ ಹೋಗಿದ್ದಾರೆ. ಒಬ್ಬರು ಬರಲಿಲ್ಲ ಎಂದು ಮತ್ತೊಬ್ಬರು ಹೋಗಿದ್ದಾರೆ. ಕೊನೆಗೆ ಇಬ್ಬರು ವಾಪಾಸ್ಸು ಬಂದಿದ್ದು, ಇನ್ನಿಬ್ಬರು ಸುರಂಗದೊಳಗೇ ಸಿಲುಕಿದ್ದಾರೆ. ಅಲ್ಲಿಯೇ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯರು ಮೃತದೇಹಗಳನ್ನ ಹೊರತೆಗೆದಿದ್ದಾರೆ. ಈ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.