ರಾಹುಲ್ ಗಾಂಧಿ ಕಾಂಗ್ರೆಸ್ ಏಜೆಂಟರೇ?: ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು

ಹುಬ್ಬಳ್ಳಿ, ಫೆ. 28: ರಾಹುಲ್ ಗಾಂಧಿ ಕಾಂಗ್ರೆಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆಯೇ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಚುನಾವಣಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಎಷ್ಟು ಹತಾಶರಾಗಿದ್ದಾರೆ ಎಂದು ಈ ಮಾತು ತಿಳಿಸುತ್ತದೆ. ಮೋದಿಯವರ ಭೇಟಿ ಸಂದರ್ಭದಲ್ಲಿ ಅವರಿಗೆ ದೊರೆತ ಜನಬೆಂಬಲ ಕಂಡು ಆತಂಕಗೊಂಡು ಈ ಮಾತುಗಳನ್ನಾಡುತ್ತಾರೆ. ಒಬ್ಬ ಅನುಭವಿ ಮಾಜಿ ಮುಖ್ಯಮಂತ್ರಿಗಳು ಈ ರೀತಿ ಮಾತನಾಡುವುದು ಎಷ್ಟು ಸರಿ ಎನ್ನುವುದನ್ನು ಜನರಿಗೆ ಬಿಡುತ್ತೇವೆ ಎಂದರು.
ಇದನ್ನೂ ಓದಿ: ದೇಶದ ಕೆಲಸ ಬಿಟ್ಟು BJP ಚುನಾವಣಾ ಏಜೆಂಟರಾಗಿ ದುಡಿಯುತ್ತಿರುವ ಮೋದಿ, ಅಮಿತ್ ಶಾ: ಸಿದ್ದರಾಮಯ್ಯ ವಾಗ್ದಾಳಿ
'ಮಾರ್ಚ್ ಒಂದರಿಂದ ರಥಯಾತ್ರೆ'
ಮಾರ್ಚ್ ಒಂದರಿಂದ ನಾಲ್ಕರವರೆಗೆ ರಥಯಾತ್ರೆ ಪ್ರಾರಂಭವಾಗಳಿದ್ದು, ಎಲ್ಲಾ ಮತ ಕ್ಷೇತ್ರಗಳಿಗೆ ಭೇಟಿ ನೀಡಿ ದಾವಣಗೆರೆಯಲ್ಲಿ ಬೃಹತ್ ಸಮಾವೇಶವಾಗಲಿದೆ. ಈ ರಥಯಾತ್ರೆ ಸಂದರ್ಭದಲ್ಲಿ ಹಲವಾರು ಜನ ಭಾಗವಹಿಸಲಿದ್ದಾರೆ ಎಂದರು.
ಪ್ರಧಾನಮಂತ್ರಿಗಳು, ಗೃಹ ಸಚಿವರು, ಬಿಜೆಪಿ ಅಧ್ಯಕ್ಷ ನಡ್ಡಾ ಅವರು ಹಾಗೂ ಧರ್ಮೇಂದ್ರ ಪ್ರಧಾನ್ ಅವರೂ ರಾಜ್ಯಕ್ಕೆ ಬಂದು ಹೋಗಿದ್ದು, ದೊಡ್ಡ ಪ್ರಮಾಣದಲ್ಲಿ ಪ್ರಚಾರವಾಗುತ್ತದೆ ಹಾಗೂ ಎಲ್ಲಾ ಪ್ರಮುಖ ನಾಯಕರೂ ಬರುತ್ತಾರೆ ಎಂದರು
'ಗೋ ಬ್ಯಾಕ್' ಮಾಮೂಲಾಗಿದೆ: ಬನವಾಸಿಯಲ್ಲಿ ಸಿಎಂ ಗೋ ಬ್ಯಾಕ್ ಅಭಿಯಾನ ಪ್ರಾರಂಭಿಸಿರುವ ಬಗ್ಗೆ ಉತ್ತರಿಸಿ, ಗೋ ಬ್ಯಾಕ್ ಎನ್ನುವುದು ಬಹಳ ಮಾಮೂಲಿಯಾಗಿದೆ. ಕಾರ್ಯಕ್ರಮ ಪೂರ್ಣ ಮಾಡುತ್ತೇವೆ ಎಂದರು.







