‘‘Donʼt Forward That Text!’’ ಸುಳ್ಳುಗಳ ಸಂತೆಯಲ್ಲಿ ಸತ್ಯಶೋಧನೆಯ ಪ್ರಯತ್ನ
ಪುಸ್ತಕದೊಳಗೇನಿದೆ?

21ನೇ ಶತಮಾನದ ನವ ಪೀಳಿಗೆ ಅಧ್ಯಯನಶೀಲತೆಯಿಂದ ವಿಮುಖವಾಗುತ್ತಿರುವ ಸಂದರ್ಭದಲ್ಲಿ, ಚರಿತ್ರೆಯ ಮೂಲ ಆಕರಗಳನ್ನೂ ನಿರ್ಲಕ್ಷಿಸಿ ಹೊಸ ಚಾರಿತ್ರಿಕ ಕಥನಗಳನ್ನು ಸೃಷ್ಟಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯೂ ಆಗಿದೆ. ಇಂತಹ ವಿಷಗಳಿಗೆಯಲ್ಲಿ ಚರಿತ್ರೆಯ ಸತ್ಯ-ಮಿಥ್ಯೆಗಳನ್ನು ಶೋಧಿಸಿ, ವಾಸ್ತವ ಚರಿತ್ರೆಯನ್ನು ಕಾಲ್ಪನಿಕ ಚರಿತ್ರೆಯಿಂದ ಬೇರ್ಪಡಿಸುವ ಜವಾಬ್ದಾರಿ ಬೌದ್ಧಿಕ ಸಮಾಜದ ಮೇಲಿದೆ. ಚಾರಿತ್ರಿಕ ಸತ್ಯವನ್ನೂ ಅಪಭ್ರಂಶಗೊಳಿಸುವ ಹಾಗೂ ಕಲ್ಪಿತ ಮಿಥ್ಯೆಗಳನ್ನು ಸಾರ್ವತ್ರಿಕಗೊಳಿಸುವ ಬೌದ್ಧಿಕ ಪ್ರಕ್ರಿಯೆ ಸಾಹಿತ್ಯದ ಅಕ್ಷರ ಲೋಕದಿಂದ ಈಗ ರಂಗಭೂಮಿಯವರೆಗೂ ವ್ಯಾಪಿಸಿರುವುದನ್ನು ಕರ್ನಾಟಕದಲ್ಲೇ ನೋಡುತ್ತಿದ್ದೇವೆ. ಚಾರಿತ್ರಿಕ ಘಟನೆಗಳನ್ನು ವಿಭಿನ್ನವಾಗಿ ನೋಡುವ, ವಿಡಂಬನೆ ಮಾಡುವ ಮತ್ತು ಸಮಕಾಲೀನ ಸಂದರ್ಭಕ್ಕೆ ತಕ್ಕಂತೆ ಮರು ನಿರ್ವಚಿಸಿಕೊಳ್ಳುವ ಒಂದು ಸ್ವಾಯತ್ತ ಬೌದ್ಧಿಕ ಸ್ವಾತಂತ್ರ್ಯ ರಂಗಭೂಮಿಗೆ ಇದೆ ಹೌದಾದರೂ, ಚರಿತ್ರೆಯಲ್ಲಿ ಇಲ್ಲವಾಗಿರುವುದನ್ನು ಮರುಸೃಷ್ಟಿಸಿ, ಇಲ್ಲದಿರುವುದನ್ನು ಹೊಸದಾಗಿ ಸೃಷ್ಟಿಸುವ ಅಭಿವ್ಯಕ್ತಿಗೆ ಬಹುಶಃ ರಂಗಭೂಮಿ ವೇದಿಕೆಯಾಗಲಾರದು. ಆದರೂ ಇದು ನಡೆಯುತ್ತಿದೆ ಎಂದರೆ ಅದಕ್ಕೆ ಕಾರಣ ದೇಶದಲ್ಲಿ ಬದಲಾಗುತ್ತಿರುವ ಸಾಂಸ್ಕೃತಿಕ ವಾತಾವರಣ ಮತ್ತು ಪೂರಕವಾದ ಸಾಂಸ್ಕೃತಿಕ ರಾಜಕಾರಣ.
ಅತ್ಯವಶ್ಯವಾದ ಮಾರ್ಗದರ್ಶಿ ಕೃತಿ
ಚರಿತ್ರೆಯನ್ನು ವಿಕೃತಗೊಳಿಸುವ ಈ ಎಲ್ಲ ಸಮಕಾಲೀನ ಅಪಭ್ರಂಶಗಳ ಮೂಲ ಇರುವುದು ಯಾವುದೇ ಅಧ್ಯಯನ-ಸಂಶೋಧನೆ-ಆವಿಷ್ಕಾರ ಮತ್ತು ಆಲೋಚನಾ ವಿಧಾನಗಳಿಲ್ಲದ ವಾಟ್ಸ್‌ಆ್ಯಪ್ ವಿಶ್ವವಿದ್ಯಾನಿಲಯ ಎಂಬ ಬೌದ್ಧಿಕ ವಾಹಿನಿಯಲ್ಲಿ. ತಮಗೆ ವಾಟ್ಸ್ ಆ್ಯಪ್ ಮೂಲಕ ಬಂದ ವಿಕೃತಗೊಳಿಸಿದ ಚರಿತ್ರೆಯ ಕಥನಗಳನ್ನು ಓದದೆಯೂ ಫಾರ್ವರ್ಡ್ ಮಾಡುವ ಒಂದು ಚಾಳಿ ಕ್ರಮೇಣ ಬೌದ್ಧಿಕ ವ್ಯಸನವಾಗಿ ಮಾರ್ಪಡುತ್ತಿದ್ದು, ದೇಶದ ಒಂದು ಬೃಹತ್ ಯುವ ಸಮೂಹ ಈ ಕಲ್ಪಿತ ಚರಿತ್ರೆಯ ಶಿಕ್ಷಣಾರ್ಥಿಗಳಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲೇ ಅಮಿತ್ ಶಾಂಡಿಲ್ಯ ಅವರ ‘‘Donʼt Forward That Text !’’ ಎಂಬ ಕೃತಿ ಉಪಯುಕ್ತವಾಗುತ್ತದೆ. ನೈಜ ಇತಿಹಾಸವನ್ನು ಬಲ್ಲವರೂ ಸಹ ಕೆಲವೊಮ್ಮೆ ತಮ್ಮ ಆಕರಗಳನ್ನು ಆಧರಿಸಿ ತಪ್ಪಾಗಿ ವ್ಯಾಖ್ಯಾನಿಸುವ ಸಾಧ್ಯತೆಗಳು ಇರುವುದನ್ನು ಈ ಕೃತಿಯ ಓದಿನ ನಂತರ ಗ್ರಹಿಸಬಹುದು. ಚರಿತ್ರೆಯ ಅಧ್ಯಯನದ ವಿಧಾನವನ್ನೇ ಧಿಕ್ಕರಿಸಿ ಇತಿಹಾಸದಲ್ಲಿ ಇಲ್ಲದಿರುವುದನ್ನು ಉತ್ಖನನ ಮಾಡುತ್ತಿರುವ ಸಂದರ್ಭದಲ್ಲಿ, ಆಕರ ಗ್ರಂಥಗಳ ಮೂಲಕ, ಶಾಸನ-ನಾಣ್ಯ-ಕಥನಗಳ ಮೂಲಕ ಹೇಗೆ ಇತಿಹಾಸವನ್ನು ಗ್ರಹಿಸಬೇಕು ಎನ್ನುವುದನ್ನು ಈ ಕೃತಿ ಸ್ಥೂಲವಾಗಿ ಪರಿಚಯಿಸುತ್ತದೆ.
‘‘Donʼt Forward That Text !’’ ಕೃತಿಯ ಮುಖಪುಟದಲ್ಲೇ ಲೇಖಕ ಅಮಿತ್ ಶಾಂಡಿಲ್ಯ ಅವರು ‘‘ಸಾಮಾಜಿಕ ಮಾಧ್ಯಮಗಳಲ್ಲಿ ಮಿಥ್ಯೆಯನ್ನು ಚರಿತ್ರೆಯಿಂದ ಬೇರ್ಪಡಿಸುವ’’ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸುತ್ತಾರೆ. ಮಿಥ್ಯೆ-ಪುರಾಣ-ಐತಿಹ್ಯ ಮತ್ತು ದಾಖಲಿತ ಇತಿಹಾಸ ಇವುಗಳ ನಡುವಿನ ವ್ಯತ್ಯಾಸವನ್ನು ವಿಭಿನ್ನ ಕಾಲಘಟ್ಟಗಳ ಚಾರಿತ್ರಿಕ ಘಟನೆಗಳ ಹಿನ್ನೆಲೆಯಲ್ಲಿ, ಮಾನವನ ಅಭ್ಯುದಯದಲ್ಲಿ ಕಂಡುಬರುವ ಅನೇಕ ಸಂಶೋಧನೆ, ಆವಿಷ್ಕಾರಗಳ ಹಿನ್ನೆಲೆಯಲ್ಲಿ ಲೇಖಕ ಅಮಿತ್ ಶಾಂಡಿಲ್ಯ ಅವರು ನೈಜ ಇತಿಹಾಸವನ್ನು ಅನಾವರಣಗೊಳಿಸುತ್ತಾರೆ. ಈ ಕೃತಿಯಲ್ಲಿನ ಚರಿತ್ರೆ ಕೇವಲ ಆಳ್ವಿಕೆಗೆ ಸಂಬಂಧಿಸಿದ್ದಲ್ಲ ಬದಲಾಗಿ ಮಾನವನ ಅಭ್ಯುದಯದ ಹಾದಿಯಲ್ಲಿ ಕಂಡುಕೊಂಡ ಅನೇಕ ಆವಿಷ್ಕಾರಗಳನ್ನು ಕುರಿತು ಸಹ ಚರ್ಚಿಸಲಾಗಿದೆ. ವೈಜ್ಞಾನಿಕ ಸಂಶೋಧನೆ, ಮಾರುಕಟ್ಟೆ ಸರಕುಗಳ ಮೂಲ, ಜನರ ನಿತ್ಯ ಜೀವನದಲ್ಲಿ ಬಳಕೆಯಾಗುವ ಮೂಲ ಸೌಕರ್ಯಗಳ ಮೂಲ ಇಂತಹ ಹಲವು ವಿದ್ಯಮಾನಗಳನ್ನು ಶಾಂಡಿಲ್ಯ ಅವರು ಈ ಕೃತಿಯಲ್ಲಿ ಚರ್ಚೆಗೊಳಪಡಿಸುತ್ತಾರೆ.
ಇಂದು ನಾವು ವ್ಯಾಪಕವಾಗಿ ಬಳಸುತ್ತಿರುವ ಉಕ್ಕು, ಸಕ್ಕರೆ, ಬಿರಿಯಾನಿ ಮತ್ತು ರೇಷ್ಮೆ ಮುಂತಾದ ವಸ್ತುಗಳ ಮೂಲವನ್ನು ಶೋಧಿಸುವ ಲೇಖಕರು, ಮತ್ತೊಂದು ಬದಿಯಲ್ಲಿ ಶೌಚಾಲಯದ ಕಲ್ಪನೆಯ ಮೂಲವನ್ನೂ ಶೋಧಿಸುತ್ತಾರೆ. ಭಾರತಕ್ಕೆ ಆರ್ಯರ ಆಗಮನ, ಐರೋಪ್ಯರ ಆಕ್ರಮಣ, ರಜಪೂತರ ಜನಾಂಗೀಯ ಮೂಲ, ಸರಸ್ವತಿ ನದಿಯ ಸುತ್ತಲಿನ ಕಲ್ಪನೆಗಳು, ಭಾರತದ ವಸಾಹತೀಕರಣ ಮತ್ತು ವಿವಿಧ ವಸಾಹತುಶಾಹಿಗಳ ಆಕ್ರಮಣದ ಕಾಲಘಟ್ಟ, ಅಖಂಡ ಭಾರತದ ಪರಿಕಲ್ಪನೆ, ಟಿಪ್ಪು ಸುಲ್ತಾನನ ಸುತ್ತ ಬೆಳೆದಿರುವ ಅಪನಂಬಿಕೆಗಳು, ರಜಪೂತರು ಮತ್ತು ಔರಂಗಝೇಬ್ ನಡುವಿನ ಸಂಬಂಧಗಳು, ದೇವಾಲಯಗಳ ಮೇಲಿನ ದಾಳಿಗಳ ಇತಿಹಾಸ, ಭಾರತಕ್ಕೆ ಇಸ್ಲಾಮ್ ಮತದ ಆಗಮನ ಹೀಗೆ ಚರಿತ್ರೆಯ ವಿವಿಧ ಆಕರಗಳನ್ನು ಮರುಶೋಧನೆಗೊಳಪಡಿಸುವ ಲೇಖಕರು ಈ ವಿಚಾರಗಳಲ್ಲಿ ನಮ್ಮ ನಡುವೆ ಹರಿದಾಡುತ್ತಿರುವ ಕಲ್ಪಿತ ಚರಿತ್ರೆ ಮತ್ತು ವಾಸ್ತವ ಚರಿತ್ರೆಯನ್ನು ತುಲನಾತ್ಮಕವಾಗಿ ವಿಶ್ಲೇಷಿಸಿ, ಸೂಕ್ತ ಆಕರಗಳ ಮೂಲಕ ವಾಸ್ತವವನ್ನು ತೆರೆದಿಡುತ್ತಾರೆ.
ಮತ್ತೊಂದು ಬದಿಯಲ್ಲಿ, ಸೊನ್ನೆ ಅಥವಾ ಶೂನ್ಯದ ಪರಿಕಲ್ಪನೆಯ ಮೂಲ, ವಿಶ್ವದ ಪ್ರಪ್ರಥಮ ವಿಶ್ವವಿದ್ಯಾನಿಲಯ, ಹಿಂದೂ ಧರ್ಮದಲ್ಲಿ ದೇವಾಲಯ ಕಲ್ಪನೆಯ ಉಗಮ, ಬೀಜಗಣಿತದ ಉಗಮ ಮತ್ತು ಬೆಳವಣಿಗೆ, ಸಮಯ ಅಥವಾ ಟೈಂ ಎನ್ನುವುದರ ಆವಿಷ್ಕಾರ, ನಮ್ಮ ಲಿಪಿಗಳ ಉಗಮ ಮತ್ತು ಅಭಿವೃದ್ಧಿ, ಸ್ವಸ್ತಿಕ ಚಿಹ್ನೆಯ ಉಗಮ ಮತ್ತು ವಿಸ್ತರಣೆ ಹೀಗೆ ಹಲವು ಬೌದ್ಧಿಕ, ವೈಜ್ಞಾನಿಕ ಆವಿಷ್ಕಾರ ಮತ್ತು ಸಂಶೋಧನೆಗಳ ಕುರಿತಾಗಿಯೂ ನಮ್ಮ ನಡುವೆ ಇರುವ ತಪ್ಪುಕಲ್ಪನೆಗಳು, ಅಪನಂಬಿಕೆಗಳು ಅಥವಾ ಅತಿಯಾದ ನಂಬಿಕೆಗಳನ್ನು ಒರೆಹಚ್ಚಿ ನೋಡುವ ಅಮಿತ್ ಶಾಂಡಿಲ್ಯ ಅವರು, ಈ ವಿಚಾರಗಳಲ್ಲಿ ಚರಿತ್ರೆಯ ವಿದ್ಯಾರ್ಥಿಗಳಲ್ಲೇ ಮೂಡಬಹುದಾದ ಜಿಜ್ಞಾಸೆಗಳಿಗೆ ಉತ್ತರಗಳನ್ನು ಶೋಧಿಸಲು ಯತ್ನಿಸಿದ್ದಾರೆ. ವಾಟ್ಸ್‌ಆ್ಯಪ್ ವಿಶ್ವವಿದ್ಯಾನಿಲಯದ ಜ್ಞಾನಾರ್ಥಿಗಳಿಗೆ ಈ ಸಂಶೋಧನಾತ್ಮಕ ಪ್ರತಿಪಾದನೆಗಳು ಕಣ್ತೆರೆಸುವಂತಿವೆ. ಚರಿತ್ರೆಯ ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನ ವಿಸ್ತರಣೆಗೆ ನೆರವಾಗುವಂತಿವೆ.
ಪ್ರಸಿದ್ಧ ಸಂಸ್ಕೃತಿ ಚಿಂತಕ ಮತ್ತು ವಿದ್ವಾಂಸ ದೇವದತ್ತ ಪಟ್ಟನಾಯಕ್ ತಮ್ಮ ಮುನ್ನುಡಿಯಲ್ಲಿ ಹೀಗೆ ಹೇಳುತ್ತಾರೆ ‘‘ನಾವು ಭಾರತದ ನೈಜ ಹಾಗೂ ಕಲ್ಪಿತ ಚರಿತ್ರೆಯ ಮೇಲೆ ಬೆಳಕು ಚೆಲ್ಲಬೇಕಿದೆ. ಪ್ರಾಚೀನ ಕವಿಗಳಿಗೆ ಕಿವಿಗೊಡಬೇಕಿದೆ. ಜನಸಾಮಾನ್ಯರ ಅಭದ್ರತೆಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಹಾಗೆಯೇ ನಾವು ಚರಿತ್ರಕಾರರ ಮಾತುಗಳಿಗೆ ಕಿವಿಗೊಡುವ ಮೂಲಕ ವಾಸ್ತವಗಳನ್ನು ಕಲ್ಪನೆಗಳಿಂದ ಪ್ರತ್ಯೇಕಿಸಬೇಕಿದೆ. ಅಭಿಪ್ರಾಯಗಳನ್ನು ಮಾಹಿತಿ ದತ್ತಾಂಶಗಳಿಂದ ಬೇರ್ಪಡಿಸಬೇಕಿದೆ...’’. ಈ ಮುನ್ನುಡಿಯ ದಿಕ್ಸೂಚಿಯೊಂದಿಗೇ ‘‘Donʼt Forward That Text !’’ ಪುಸ್ತಕವನ್ನು ಓದುತ್ತಾ ಹೋದಂತೆ ನಮ್ಮೊಳಗಿರಬಹುದಾದ ತಪ್ಪುಗ್ರಹಿಕೆಗಳನ್ನು, ಅಪನಂಬಿಕೆಗಳನ್ನು ಮತ್ತು ವಾಟ್ಸ್ ಆ್ಯಪ್ ವಿಶ್ವವಿದ್ಯಾನಿಲಯಗಳ ಉತ್ಖನನಗಳ ಮೂಲಕ ಹರಡಲಾಗುತ್ತಿರುವ ಕಲ್ಪಿತ ಇತಿಹಾಸವನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಹಾಗೆಯೇ ಇತಿಹಾಸ ಎನ್ನುವ ಆಳವಾದ ಕಣಜದಲ್ಲಿ ಏನೆಲ್ಲಾ ಅಮೂಲ್ಯ ಆಕರಗಳು ಲಭ್ಯವಾಗಬಹುದು ಎನ್ನುವುದನ್ನು ಈ ಕೃತಿ ನಮ್ಮ ಮುಂದೆ ತೆರೆದಿಡುತ್ತದೆ.
ಇತಿಹಾಸ ಬಲ್ಲವರು, ಬಲ್ಲೆ ಎಂದು ತಿಳಿದಿರುವವರು, ಅರಿಯದವರು ಮತ್ತು ತಿರುಚಿದ ಇತಿಹಾಸವನ್ನೇ ನೈಜ ಇತಿಹಾಸ ಎಂದು ನಂಬುವ ವಾಟ್ಸ್‌ಆ್ಯಪ್ ವಿಶ್ವವಿದ್ಯಾನಿಲಯದ ಯುವ ಸಮೂಹ, ಎಲ್ಲರಿಗೂ ಆಪ್ತವಾಗುವ ಈ ಕೃತಿ ಅಧ್ಯಯನ ಯೋಗ್ಯವಷ್ಟೇ ಅಲ್ಲ ಸಂಗ್ರಹಯೋಗ್ಯವೂ ಹೌದು.







