ಅಮೆರಿಕಾದಲ್ಲಿ ಔಷಧ ನಿರೋಧಕ ಶಿಗೆಲ್ಲಾ ಬ್ಯಾಕ್ಟಿರಿಯಾ ಸೋಂಕು ಹರಡುತ್ತಿರುವ ಬಗ್ಗೆ ಸಿಡಿಸಿ ಎಚ್ಚರಿಕೆ

ನ್ಯೂಯಾರ್ಕ್ : ಆಂಟಿಬಯೋಟಿಕ್ ಔಷಧಿಗಳಿಗೆ ನಿರೋಧಕವಾಗಿವೆ ಎಂದು ತಿಳಿಯಲಾದ ಶಿಗೆಲ್ಲಾ ಬ್ಯಾಕ್ಟಿರಿಯಾ ಹರಡುತ್ತಿರುವ ಬಗ್ಗೆ ಅಮೆರಿಕಾದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಎಂಡ್ ಪ್ರಿವೆನ್ಶನ್ ಎಚ್ಚರಿಕೆ ನೀಡಿದೆ.
ಶಿಗೆಲ್ಲೋಸಿಸ್ ಸಾಮಾನ್ಯವಾಗಿ ಉರಿಯೂತ ಉಂಟು ಮಾಡುವ ವಾಂತಿಬೇಧಿಯಾಗಿದ್ದು, ರೋಗಿಗಳ ವಾಂತಿ ಬೇಧಿ ರಕ್ತದಿಂದ ಕೂಡಿರಬಹುದಾಗಿದೆ. ಜ್ವರ ಮತ್ತು ಹೊಟ್ಟೆಯ ಸಮಸ್ಯೆಯೂ ಕಾಡಬಹುದು ಎಂದು ಸಿಡಿಸಿ ಹೇಳಿದೆ.
ದೇಶದಲ್ಲಿ 2015 ರಲ್ಲಿ ವರದಿಯಾದ ಯಾವುದೇ ಸೋಂಕುಗಳು ಶಿಗೆಲ್ಲಾ ಎಕ್ಸ್‌ಡಿಆರ್‌ನಿಂದ ದೃಢಪಟ್ಟಿರದಿದ್ದರೂ 2022 ರಲ್ಲಿ ಶೇ 5 ರಷ್ಟು ಸೋಂಕುಗಳು ಶಿಗೆಲ್ಲಾದಿಂದಾಗಿ ಉಂಟಾಗಿದೆ ಎಂದು ತಿಳಿದು ಬಂದಿತ್ತು. ಇದಕ್ಕೂ ಮೊದಲು 2019 ರಲ್ಲಿ ಅಮೆರಿಕಾದಲ್ಲಿ ಪತ್ತೆಯಾದ ಕೆಲವೊಂದು ಸೋಂಕುಗಳು ಅವುಗಳ ಚಿಕಿತ್ಸೆಗೆ ಸಾಮಾನ್ಯವಾಗಿ ಬಳಕೆಯಾಗುವ ಐದು ಆಂಟಿಬಯೋಟಿಕ್ಸ್‌ಗೆ ನಿರೋಧಕವಾಗಿದ್ದವು.
ಶಿಗೆಲ್ಲಾದಿಂದ ಅಮೆರಿಕಾದಲ್ಲಿ ವಾರ್ಷಿಕ 4,50,000 ಸೋಂಕುಗಳು ವರದಿಯಾಗುತ್ತವೆ ಹಾಗೂ ಇದರಿಂದ ನೇರ ವೈದ್ಯಕೀಯ ವೆಚ್ಚಗಳು 93 ಮಿಲಿಯನ್ ಡಾಲರ್ ಆಗಿವೆ.
ಶಿಗೆಲ್ಲಾ ಸುಲಭವಾಗಿ ಮಲದಿಂದ, ಬಾಯಿ ಮುಖಾಂತರ, ವ್ಯಕ್ತಿಯಿಂದ ವ್ಯಕ್ತಿ ಸಂಪರ್ಕದಿಂದ,ಲೈಂಗಿಕ ಸಂಪರ್ಕದಿಂದ, ಕಲುಷಿತ ಆಹಾರ, ನೀರು ಸೇವನೆಯಿಂದ ಹರಡುತ್ತದೆ ಎಂದು ಸಿಡಿಸಿ ಹೇಳಿದೆ.