ಮಂಗಳೂರಿನಲ್ಲಿ ಮಾರ್ಚ್ 3ರಿಂದ 5ರವರೆಗೆ "ಬ್ಯಾರಿ ಮೇಳ"

ಮಂಗಳೂರು, ಫೆ.28: ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಾರ್ಚ್ 3ರಿಂದ 5ರವರೆಗೆ "ಬ್ಯಾರಿಮೇಳ-2023" (ಬಿಸಿಸಿಐ) ಆಯೋಜಿಸಲಾಗಿದೆ ಎಂದು ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಬ್ಯಾರಿಮೇಳವನ್ನು ಉದ್ಘಾಟಿಸುವರು. ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ ಖಾದರ್ ಪ್ರಶಸ್ತಿ ಪ್ರದಾನ ಮಾಡುವರು. ಪ್ರದರ್ಶನ ಮಳಿಗೆಗಳನ್ನು ವಿಧಾನಪರಿಷತ್ ಸದಸ್ಯ ಬಿ.ಎಂ ಫಾರೂಕ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಮೇಯರ್ ಜಯಾನಂದ್ ಅಂಚನ್, ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮಾರ್ಚ್ 3ರಂದು ಸಂಜೆ 5ಕ್ಕೆ ಬ್ಯಾರಿ ಸಮ್ಮೇಳನದ ಉದ್ಘಾಟನೆ ಹಾಗೂ 6:30ಕ್ಕೆ ಬ್ಯಾರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 4ರಂದು ಬೆಳಗ್ಗೆ 10ಕ್ಕೆ ಮಹಿಳಾ ಉದ್ಯಮಿಗಳ ಸಭೆ, ಸಂಜೆ 4ಕ್ಕೆ ಕುಟುಂಬ ವ್ಯವಹಾರ ಚರ್ಚೆ ಮತ್ತು 6:30ಕ್ಕೆ ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 5ರಂದು ಬೆಳಗ್ಗೆ 10ಕ್ಕೆ ಉದ್ಯೋಗ ಮೇಳ, ಮಧ್ಯಾಹ್ನ 2 ಗಂಟೆಗೆ ಬೋಲ್ ಬ್ಯಾರಿ ಬೋಲ್(ಬ್ಯಾರಿ ಪ್ರತಿಭಾ ಪ್ರದರ್ಶನ) ಹಾಗೂ 6:30ಕ್ಕೆ ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾರಿ ಮೇಳದ ಕನ್ವೀನರ್ ಮನ್ಸೂರ್ ಅಹ್ಮದ್, ಸಂಚಾಲಕ ಬಿ.ಎಂ. ಮಮ್ತಾಝ್ ಅಲಿ , ಕಾರ್ಯದರ್ಶಿ ನಿಸ್ಸಾರ್ ಮೊಹಮ್ಮದ್ ಫಕೀರ್ ಉಪಸ್ಥಿತರಿದ್ದರು.