ಈರುಳ್ಳಿ ಹಾರ ಹಾಕಿಕೊಂಡು ವಿಧಾನಸಭೆಯಲ್ಲಿ ಎನ್‌ಸಿಪಿ ಶಾಸಕರ ಪ್ರತಿಭಟನೆ

ಮುಂಬೈ: ಈರುಳ್ಳಿ ಬೆಲೆ ಕುಸಿತದ ವಿಚಾರದಲ್ಲಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಇಂದು ಕೋಲಾಹಲ ಉಂಟಾಗಿದ್ದು, ಪ್ರತಿಪಕ್ಷಗಳ ಸದಸ್ಯರ ಗದ್ದಲದ ನಡುವೆಯೇ ದಿನದ ಮಟ್ಟಿಗೆ ಕಲಾಪ ಮುಂದೂಡಲಾಯಿತು.
ವಿಧಾನ ಪರಿಷತ್ತಿನಲ್ಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಈರುಳ್ಳಿ ಉತ್ಪಾದಕರಿಗೆ ಅನುದಾನ ನೀಡಲು ಸಿದ್ಧ ಎಂದು ಘೋಷಿಸಿದ ನಂತರ ಪ್ರತಿಪಕ್ಷಗಳ ಶಾಸಕರು ವಿಧಾನಸಭೆಯಲ್ಲಿ ರೈತರ ಸಮಸ್ಯೆ ಕುರಿತು ಚರ್ಚೆಗೆ ಒತ್ತಾಯಿಸಿದರು.
ಈರುಳ್ಳಿ ರೈತರ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅವರಿಗೆ ಪರಿಹಾರ ನೀಡಲು ಸರಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಫಡ್ನವಿಸ್ ಹೇಳಿದರು.
ಎರಡು ಬಾರಿ ಮುಂದೂಡಿಕೆಯಾದ ನಂತರ ಪ್ರತಿಪಕ್ಷಗಳ ಗದ್ದಲದ ನಡುವೆ ಸದನವನ್ನು ದಿನ ಮಟ್ಟಿಗೆ ಮುಂದೂಡಲಾಯಿತು.
ಏತನ್ಮಧ್ಯೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ(ಎನ್ ಸಿಪಿ) ಶಾಸಕರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಈರುಳ್ಳಿ ಹಾರವನ್ನು ಧರಿಸಿ ಪ್ರತಿಭಟನೆ ನಡೆಸಿದರು.
ಬೆಲೆ ಕುಸಿತದಿಂದಾಗಿ ನಾಸಿಕ್ ಜಿಲ್ಲೆಯ ಏಷ್ಯಾದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆಯಲ್ಲಿ ರೈತರು ಹರಾಜನ್ನು ನಿಲ್ಲಿಸಿದ ಒಂದು ದಿನದ ನಂತರ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿವೆ. ನಾಸಿಕ್‌ನ ಲಾಸಲ್‌ಗಾಂವ್ ಮಂಡಿಯಲ್ಲಿ ನಡೆದ ಪ್ರತಿಭಟನೆಯನ್ನು ರಾಜ್ಯ ಸಚಿವರ ಭರವಸೆಯ ಮೇರೆಗೆ ಸಂಜೆ ಹಿಂಪಡೆಯಲಾಯಿತು.







