ಯುಟ್ಯೂಬ್ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುವುದಾಗಿ ಹೇಳಿದ ಕಾಮೆಡಿಯನ್ ಕುನಾಲ್ ಕಾಮ್ರಾ: ಕಾರಣವೇನು?

ಹೊಸದಿಲ್ಲಿ: ಎಚ್ಚರಿಕೆ ಸಂದೇಶಗಳನ್ನು ನೀಡುವ ಮೂಲಕ ತಮ್ಮ ವೀಡಿಯೋಗಳ ಕುರಿತಂತೆ ಯುಟ್ಯೂಬ್ ತಾರತಮ್ಯಕಾರಿ ಧೋರಣೆ ವಹಿಸುತ್ತಿದೆ ಎಂದು ಆರೋಪಿಸಿರುವ ಖ್ಯಾತ ಕಾಮಿಡಿಯನ್ ಕುನಾಲ್ ಕಾಮ್ರಾ ತಾನು ಯುಟ್ಯೂಬ್ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುವುದಾಗಿ ಹೇಳಿದ್ದಾರೆ.
ಅವರ ಶೋ "ಶಟ್ ಅಪ್ ಯಾ ಕುನಾಲ್" ಇದರ 25ನೇ ಎಪಿಸೋಡ್, ಫೆಬ್ರವರಿ 25, ಶನಿವಾರ "ಜಾತಿರಹಿತತೆಯ" ಬಗ್ಗೆ ಪ್ರಸಾರಗೊಂಡಿತ್ತು. ಹಾರ್ವರ್ಡ್ ವಿದ್ವಾಂಸರಾದ ಡಾ ಸೂರಜ್ ಯೆಂಗ್ಡೆ ಈ ಶೋದಲ್ಲಿ ಭಾರತದಲ್ಲಿ ಜಾತಿ ವ್ಯವಸ್ಥೆ ಬಗ್ಗೆ ಮಾತನಾಡಿದ್ದರು. ಈ ವೀಡಿಯೋದೊಂದಿಗೆ ಯುಟ್ಯೂಬ್‌ನ ಎಚ್ಚರಿಕೆ ಸಂದೇಶವೊಂದಿತ್ತು: "ವೀಕ್ಷಕರ ವಿವೇಚನೆಗೆ ಸಲಹೆ ನೀಡಲಾಗಿದೆ. ಈ ಕೆಳಗಿನ ವಿಷಯವು ಆತ್ಮಹತ್ಯೆ ಅಥವಾ ಸ್ವಯಂಹಾನಿಗೆ ಸಂಬಂಧಿಸಿದ ವಿಷಯಗಳನ್ನು ಹೊಂದಿದೆ," ಎಂದು ಸಂದೇಶದಲ್ಲಿ ಹೇಳಲಾಗಿತ್ತು.
ಈ ಕುರಿತಂತೆ ಡಾ.. ಸೂರಜ್ ಯೆಂಗ್ಡೆ ಅವರು ಟ್ವಿಟ್ಟರ್‌ನಲ್ಲಿ ಯುಟ್ಯೂಬ್ ಅನ್ನು ಪ್ರಶ್ನಿಸಿದ್ದರಲ್ಲದೆ ಏನಾದರೂ ತಪ್ಪಾಗಿದೆಯೇ ಎಂದು ಕುನಾಲ್ ಅವರನ್ನೂ ಕೇಳಿದ್ದರು.
ಕುನಾಲ್ ಕೂಡ ಯುಟ್ಯೂಬ್ ಅನ್ನು ಪ್ರಶ್ನಿಸಿ ʻವೀಡಿಯೋ ವಿಷಯ ಕುರಿತಂತೆ ಅತ್ಯಂತ ಕೆಟ್ಟ ಗಮನ ಹರಿಸುವಿಕೆ," ಎಂದು ಬರೆದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಯುಟ್ಯೂಬ್, ಎಚ್ಚರಿಕೆ ಸಂದೇಶ ತೆಗೆದುಹಾಕುವ ಅಪೀಲನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿತಲ್ಲದೆ "ನಾವು ನಿಮ್ಮ ವಿಷಯವನ್ನು ಎಚ್ಚರಿಕೆಯಿಂದ ಪರಿಶೀಲಿಸಿದ್ದೇವೆ ಹಾಗೂ ವಯಸ್ಸಿನ ನಿರ್ಬಂಧಗಳು ಸೂಕ್ತವಾಗಿವೆ ಎಂದು ದೃಢೀಕರಿಸಿದ್ದೇವೆ. ಇದು ನಿರಾಶಾದಾಯಕವಾಗಿರಬಹುದು ಆದರೆ ನಾವು ಯುಟ್ಯೂಬ್ ಸಮುದಾಯವನ್ನು ರಕ್ಷಿತವಾಗಿರಿಸುವುದು ಅಗತ್ಯವಾಗಿದೆ," ಎಂದು ತಿಳಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಕಾಮ್ರಾ "ನಿಮ್ಮ ಬಹಿರಂಗ ಬೇಧಭಾವವನ್ನು ಕಾನೂನಾತ್ಮಕವಾಗಿ ಪರಿಹರಿಸಬೇಕಿದೆ," ಎಂದು ತಿಳಿಸಿದ್ದಾರೆ.
ಕುನಾಲ್ ಕಾಮ್ರಾ ಅವರ ಈ ಒಂದೂವರೆ ಗಂಟೆ ಅವಧಿಯ ವೀಡಿಯೋ "ಜಾತಿರಹಿತತೆ" ಬಗ್ಗೆ ಆಗಿತ್ತು ಹಾಗೂ "ಜಾತಿರಹಿತ ಭಾರತ"ದ ಬಗ್ಗೆ ಅವರು ಯೆಂಗ್ಡೆ ಜೊತೆ ಮಾತನಾಡಿದ್ದರು.
ಈ ವೀಡಿಯೋದಲ್ಲಿ "ಜಾತಿ ಫ್ಯಾಕ್ಟರಿಯ ಮಾಲೀಕರು," "ಬ್ರಾಹ್ಮಣಿಕ ಮಾಧ್ಯಮ," "ಹಿಂದು-ಮುಸ್ಲಿಮೀಕರಣದಾಚೆಗೆ," "ಇಂದಿನ ಪ್ರಜಾಪ್ರಭುತ್ವ," "ದಲಿತ ಪ್ಯಾಂಥರ್ಸ್ ಮುಂತಾದ ವಿಷಯಗಳ ಕುರಿತು ಚರ್ಚೆ ನಡೆದಿತ್ತು.







