ಕಾಂಗ್ರೆಸ್‌ನ ಭರವಸೆಗಳ ನೋಂದಣಿಗೆ ವಿನೂತನ ಅಭಿಯಾನ: ಇನಾಯತ್ ಅಲಿ

ಮಂಗಳೂರು: ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿರುವ ಭರವಸೆಗಳನ್ನು ಜನರಿಗೆ ತಿಳಿಸಲು ವಿನೂತನ ಮತ್ತು ವಿಶೇಷ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಮಾನ್ಯ ಜನರ ಬದುಕನ್ನು ಸುಗಮಗೊಳಿಸಲು ತಾನು ಮತ್ತು ನಮ್ಮ ತಂಡ ಪ್ರತಿ ಮನೆಗಳಿಗೂ ತೆರಳಿ ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರಂಟಿಗಳನ್ನು ಜನರಿಗೆ ತಲುಪಿಸುತ್ತೇವೆ. ನಮ್ಮ ತಂಡ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಗ್ಯಾರಂಟಿಗಳ ಬಗ್ಗೆ ಜನರಿಗೆ ತಿಳಿಸುವ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ. ಕ್ಷೇತ್ರದ ಭೇಟಿಯ ವೇಳೆ ಹೆಸರು, ವಯಸ್ಸು, ಮೊಬೈಲ್ ಸಂಖ್ಯೆ, ವಿಳಾಸದಂತಹ ಮೂಲ ಮಾಹಿತಿಯನ್ನು ಪಡೆದು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಗೆ ನೋಂದಾಯಿಸಿ ಕೊಳ್ಳುತ್ತೇವೆ ಎಂದು ತಿಳಿಸಿದರು.
ನಮ್ಮೊಂದಿಗೆ ನೋಂದಾಯಿಸಿದ ಜನರು ಆದ್ಯತೆಯ ಮೇಲೆ ಕಾಂಗ್ರೆಸ್ ಗ್ಯಾರಂಟಿಗಳ ಪ್ರಯೋಜನ ಪಡೆಯು ವುದನ್ನು ಖಚಿತಪಡಿಸಿಕೊಳ್ಳಲು ಐಎಎಂ ಫೌಂಡೇಶನ್ ನೀಡಿದ ಆದ್ಯತೆಯ ಕಾರ್ಡ್‌ನೊಂದಿಗೆ ನಾವು ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿ ಕಾರ್ಡ್‌ಗಳನ್ನು ಜನರಿಗೆ ಒದಗಿಸುತ್ತೇವೆ. ತಮ್ಮ ನೋಂದಣಿ ಅಭಿಯಾನದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜನರಿಗೆ ಮನವಿ ಮಾಡಿದರು.
ಕಾಂಗ್ರೆಸ್ ಘೋಷಿಸಿರುವ ಗೃಹಜ್ಯೋತಿ ಗ್ಯಾರಂಟಿ ಮೂಲಕ ಪ್ರತಿ ಮನೆಗೆ ಉಚಿತವಾಗಿ 200 ಯೂನಿಟ್ ವಿದ್ಯುತ್, ಗೃಹಲಕ್ಷ್ಮೀ ಗ್ಯಾರಂಟಿಯಡಿ ಪ್ರತಿ ಮಹಿಳಾ ಕುಟುಂಬದ ಯಜಮಾನಿಗೆ ಮಾಸಿಕ 2000 ರೂ.ನೀಡಲಾಗುವುದು. ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಬದುಕು ಕಷ್ಟದಲ್ಲಿದೆ ಎಂದು ಇನಾಯತ್ ಅಲಿ ಹೇಳಿದರು.
ಕಾಂಗ್ರೆಸ್ ಸಮಾಜದ ಕಲ್ಯಾಣ ಮತ್ತು ಪ್ರಗತಿಪರ ಬೆಳವಣಿಗೆಯ ರಾಜಕೀಯದಲ್ಲಿ ನಂಬಿಕೆ ಇಟ್ಟುಕೊಂಡಿದೆ. ಜನ ಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಗ್ಯಾರಂಟಿಗಳನ್ನು ಘೋಷಿಸಲಾಗಿದೆ ಎಂದು ಅವರು ಹೇಳಿದರು.
ಟಿಕೆಟ್ ಸಿಕ್ಕಿದರೆ ಸಂತೋಷ: ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರದ ಬಗ್ಗೆ ಮಾತನಾಡಿದ ಅವರು ಟಿಕೆಟ್‌ಗೆ ಹಲವು ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ತಾನು ಕೂಡಾ ಅರ್ಜಿ ಸಲ್ಲಿಸಿದ್ದೇನೆ. ನನಗೆ ಟಿಕೆಟ್ ಸಿಕ್ಕಿದರೆ ಸಂತೋಷ. ಇಲ್ಲವಾದರೂ ಯಾರಿಗೆ ಪಕ್ಷದ ಹೈಕಮಾಂಡ್ ಟಿಕೆಟ್ ಕೊಡುತ್ತದೊ ಅವರ ಗೆಲುವಿಗೆ ಶ್ರಮಿಸುವುದಾಗಿ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನಾಯಕರೆಲ್ಲರೂ ಒಗ್ಗಟ್ಟಾಗಿದ್ದಾರೆ. ಆಕಾಂಕ್ಷಿಗಳು ಟಿಕೆಟ್‌ಗೆ ತಮಗೆ ಹೇಗೆ ಸಾಧ್ಯವೊ ಆ ರೀತಿ ಪ್ರಯತ್ನ ಮುಂದುವರಿಸಿದ್ದಾರೆ. ಟಿಕೆಟ್ ಕೇಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಟಿಕೆಟ್‌ಗೆ ಪೈಪೋಟಿಯಿಂದ ಪಕ್ಷಕ್ಕೆ ಯಾವುದೇ ತೊಂದರೆ ಇಲ್ಲ ಎಂದರು.
ಕೆಪಿಸಿಸಿ ಸದಸ್ಯ ಆರ್.ಕೆ. ಪ್ರಥ್ವಿರಾಜ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡಕೇರಿ, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಗಿರೀಶ್ ಆಳ್ವ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.